ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಸಂಪುಟ ವಿಸ್ತರಣೆಯ ಅತೃಪ್ತಿ ಹೊರ ಹಾಕಿದ್ದಾರೆ. 

ಕಲಬುರಗಿ : ಕಾಂಗ್ರೆಸ್‌ ಹಿರಿಯ ಮುಖಂಡರಾದ ರಾಮಲಿಂಗಾ ರೆಡ್ಡಿ, ಶಾಮನೂರು ಶಿವಶಂಕರಪ್ಪ ಅಷ್ಟೇ ಅಲ್ಲ, ಲೋಕಸಭೆಯಲ್ಲಿ ಕಾಂಗ್ರೆಸ್‌ನ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಬಹಿರಂಗವಾಗಿಯೇ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ‘ಸಚಿವ ಸಂಪುಟ ವಿಸ್ತರಣೆ ಬಳಿಕ ಸೃಷ್ಟಿಯಾಗಿರುವ ಅಸಮಾಧಾನವನ್ನು ಸಚಿವ ಸ್ಥಾನ ಹಂಚಿಕೆ ಮಾಡಿದವರೇ ಸರಿಪಡಿಸಲಿ’ ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಸಚಿವ ಸ್ಥಾನಕ್ಕೆ ಸಂಬಂಧಿಸಿದ ನಿರ್ಣಯ ಕೈಗೊಂಡಿದ್ದು, ಈಗ ಅವರೇ ಈ ಅಸಮಾಧಾನವನ್ನು ಸರಿಪಡಿಸುವ ಕೆಲಸ ಮಾಡಬೇಕಿದೆ ಎಂದರು.

ಜಿಲ್ಲೆಗೆ ಸಚಿವ ಸ್ಥಾನ ಕೊಡಿಸಲೇಬೇಕೆಂದು ಪ್ರಯತ್ನ ನಡೆಸಲಾಗಿತ್ತು. ಕೆಲ ಶಾಸಕರಿಗೆ ಒತ್ತಾಯ ಮಾಡಿದ ಮೇಲೆ ಕ್ಯಾಬಿನೆಟ್‌ ದರ್ಜೆ ಸ್ಥಾನಮಾನ ಕೊಟ್ಟಿದ್ದಾರೆ. ಜಿಲ್ಲೆಗೆ ಸಚಿವ ಸ್ಥಾನ ಕೊಡಿಸಲು ದಿನೇಶ್‌ ಗುಂಡೂರಾವ್‌, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಜೊತೆಗೂ ಮಾತನಾಡಿದ್ದೆ. ಹೈಕಮಾಂಡ್‌ ಜೊತೆ ಮಾತುಕತೆ ನಡೆಸಿ ನಿರ್ಧಾರ ಕೈಗೊಂಡಿರೋದಾಗಿ ಅವರು ಹೇಳಿದ್ದರು. ಆದರೂ ಆ ಪ್ರಯತ್ನ ಕೈಗೂಡಲಿಲ್ಲ ಅಂದಾಗ ಸಹಜವಾಗಿಯೇ ನೋವಾಗುತ್ತದೆ. ಅದನ್ನು ಬಹಿರಂಗವಾಗಿ ಹೇಳಿಕೊಂಡು ಓಡಾಡಲು ಸಾಧ್ಯವಿಲ್ಲ. ಪಕ್ಷ ನಿರ್ಧಾರ ಕೈಗೊಂಡ ಮೇಲೆ ಅದಕ್ಕೆ ಬದ್ಧರಾಗಿರಬೇಕು ಎಂದರು.

ತೀವ್ರ ಒತ್ತಾಯ ಹಾಕಿದ ಮೇಲೆ ಶಾಸಕ ಡಾ.ಅಜಯಸಿಂಗ್‌ ಅವರಿಗೆ ದೆಹಲಿ ವಿಶೇಷ ಪ್ರತಿನಿಧಿ ಸ್ಥಾನ ನೀಡಲಾಗಿದೆ. ಈ ಬಗ್ಗೆ ರಾಜ್ಯ ನಾಯಕರನ್ನು ಕೇಳಿದರೆ ಹೈಕಮಾಂಡ್‌ ಕೇಳಿಯೇ ಸಂಪುಟ ವಿಸ್ತರಣೆ ಮಾಡಿದ್ದೇವೆ ಎಂದಿದ್ದಾರೆ. ಸಚಿವ ಸ್ಥಾನ ಸಿಗದೇ ಇದ್ದಾಗ ಆಕಾಂಕ್ಷಿಗಳಿಗೆ ಸಹಜವಾಗಿ ನನ್ನ ಮೇಲೆ ಅಸಮಾಧಾನ ಬಂದೇ ಬರುತ್ತದೆ ಎಂದು ಬೇಸರ ತೋಡಿಕೊಂಡರು.