ಬೆಂಗಳೂರು :  ನಿರೀ​ಕ್ಷೆ​ಯಂತೆಯೇ ಸಚಿವ ಸಂಪುಟ ಪುನಾ​ರ​ಚನೆ ಸಾಹ​ಸವೂ ಕಾಂಗ್ರೆಸ್‌ ಪಾಳ​ಯ​ದಲ್ಲಿ ಭಾರಿ ತಳ​ಮಳ ಹುಟ್ಟು​ಹಾ​ಕಿದೆ. ಹಿರಿಯ ಶಾಸ​ಕ​ರಾದ ರಾಮ​ಲಿಂಗಾ​ರೆಡ್ಡಿ, ಬಿ.ಸಿ. ಪಾಟೀಲ್‌, ಎಸ್‌.​ಆರ್‌.ಪಾಟೀಲ್‌, ಬಿ.ಕೆ.ಸಂಗ​ಮೇಶ್‌, ಭೀಮಾ ನಾಯ್ಕ್, ನಾಗೇಂದ್ರ, ಆನಂದ್‌​ಸಿಂಗ್‌ ಸೇರಿ​ದಂತೆ ಹಲವು ಆಕಾಂಕ್ಷಿ​ಗಳಿಗೆ ಸಚಿವ ಸ್ಥಾನ ನೀಡದ ಹಿನ್ನೆಲೆ​ಯಲ್ಲಿ ಅವರ ಬೆಂಬ​ಲಿ​ಗರು ಬೀದಿ​ಗಿ​ಳಿದು ಪ್ರತಿ​ಭ​ಟನೆ ನಡೆ​ಸಿ​ದ್ದಾರೆ.

ಸಂಪುಟ ವಿಸ್ತ​ರ​ಣೆ​ಯಿಂದ ಕಾಂಗ್ರೆ​ಸ್‌​ನಲ್ಲಿ ಉಂಟಾ​ಗಿ​ರುವ ಅತೃ​ಪ್ತರ ಆಕ್ರೋಶ ಮೂರು ವಿಭಿನ್ನ ರೀತಿ​ಯಲ್ಲಿ ವ್ಯಕ್ತ​ವಾ​ಗಿದೆ.

1- ತಮ್ಮ ಹಿರಿ​ತ​ನ​ವನ್ನು ಪರಿ​ಗ​ಣಿ​ಸ​ಲಿಲ್ಲ ಎಂಬ ಕಾರ​ಣಕ್ಕೆ ಹಿರಿಯ ಶಾಸ​ಕರು ರೊಚ್ಚಿ​ಗೆ​ದ್ದಿ​ದ್ದರೆ, ಅವರ ಬೆಂಬ​ಲಿ​ಗ​ರು ಬೀದಿಗೆ ಇಳಿ​ದಿ​ದ್ದಾರೆ.

2- ಸಚಿವ ಸ್ಥಾನ ಕೇಳಿ​ದರೆ, ನಿಗಮ ಮಂಡ​ಳಿ ಸ್ಥಾನ ನೀಡಿ​ದ್ದಕ್ಕೆ ಅಸ​ಮಾ​ಧಾನಗೊಂಡಿ​ರುವ ಶಾಸ​ಕರ ಪೈಕಿ ಕೆಲ​ವರು ಈಗಾ​ಗಲೇ ನಿಗಮ ಮಂಡಳಿ ಹಾಗೂ ಇತರ ಹುದ್ದೆ​ಯನ್ನು ತಿರ​ಸ್ಕ​ರಿ​ಸುವ ಮೂಲಕ ಸಿಟ್ಟು ವ್ಯಕ್ತ​ಪ​ಡಿ​ಸಿ​ದ್ದಾರೆ.

3- ಸಚಿವ ಸ್ಥಾನ​ದಿಂದ ಕೊಕ್‌ ಪಡೆದ ಶಂಕರ್‌ ಹಾಗೂ ರಮೇಶ್‌ ಜಾರ​ಕಿ​ಹೊಳಿ ಅವರ ಮುಂದಿನ ನಡೆ ಕುತೂ​ಹಲ ಮೂಡಿ​ಸಿ​ದೆ.

ಕಾಂಗ್ರೆ​ಸ್‌​ನಲ್ಲಿ ತೀವ್ರ ಅತೃಪ್ತಿ, ಅಸ​ಮಾ​ಧಾನವು ಬೀದಿ ಹೋರಾ​ಟದ ಸ್ವರೂಪ ಪಡೆ​ದಿ​ರುವ ಬೆನ್ನಲ್ಲೇ ಪಕ್ಷದ ನಿರ್ಧಾ​ರದ ವಿರುದ್ಧ ಬಹಿ​ರಂಗ ಹೋರಾಟ ನಡೆ​ಸು​ತ್ತಿ​ರುವ ಶಾಸ​ಕ​ರಿಗೆ ಕಾಂಗ್ರೆಸ್‌ ನಾಯ​ಕತ್ವ ಎಚ್ಚ​ರಿಕೆ ನೀಡಿದೆ. ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡು​ರಾವ್‌ ಅವರು ಮುಂದಿನ ಮೇ ವೇಳೆಗೆ ಮತ್ತೆ ಸಂಪುಟ ಪುನಾ​ರ​ಚನೆ ನಡೆ​ಯ​ಲಿದೆ. ಈ ವೇಳೆ ಪ್ರಸ್ತುತ ಹುದ್ದೆ ವಂಚಿ​ತ​ರಿಗೆ ಅವ​ಕಾ​ಶ ನೀಡ​ಲಾ​ಗು​ವುದು. ಹಾಲಿ ಸಚಿ​ವರ ಮೌಲ್ಯಮಾಪನ ನಡೆಸಿ ಸಾಧನೆ ತೋರ​ದ​ವ​ರಿಗೆ ಕೊಕ್‌ ನೀಡ​ಲಾ​ಗು​ವುದು. ಹೀಗಾಗಿ ಮೇ ವೇಳೆಗೆ ಮತ್ತೆ ಅವ​ಕಾಶ ದೊರ​ಯ​ಲಿದೆ. ಈ ಹಿನ್ನೆ​ಲೆ​ಯಲ್ಲಿ ಯಾರೂ ಪಕ್ಷದ ಹೈಕ​ಮಾಂಡ್‌ ತೀರ್ಮಾ​ನದ ವಿರುದ್ಧ ಹೋಗ​ದಂತೆ ಎಚ್ಚ​ರಿಕೆ ನೀಡಿ​ದ್ದಾ​ರೆ.

ಆದರೆ, ಈ ಎಚ್ಚ​ರಿಕೆ ಬಹಿ​ರಂಗ ಅಸ​ಮಾ​ಧಾನ ವ್ಯಕ್ತಪಡಿ​ಸುವ ಅತೃ​ಪ್ತರ ಧೋರ​ಣೆಗೆ ಕಡಿ​ವಾಣ ಹಾಕಿಲ್ಲ. ವಿಶೇ​ಷ​ವಾಗಿ ಸಚಿವ ಸ್ಥಾನ​ದಿಂದ ಕೊಕ್‌ ಪಡೆದ ಅರಣ್ಯ ಸಚಿವ ಶಂಕರ್‌ ಬಹಿ​ರಂಗವಾಗಿ ಕಾಂಗ್ರೆ​ಸ್‌ಗೆ ಸವಾಲು ಎಸೆ​ದಿದ್ದು, ಸರ್ಕಾರ ರಚಿ​ಸು​ವಾಗ ಬಳ​ಸಿ​ಕೊಂಡು ಈಗ ಬಿಟ್ಟಕಾಂಗ್ರೆ​ಸ್‌ಗೆ ಸದ್ಯ​ದಲ್ಲೇ ಸೂಕ್ತ ಉತ್ತರ ನೀಡು​ವು​ದಾಗಿ ಎಚ್ಚ​ರಿ​ಸಿ​ದ್ದಾರೆ. ಆದರೆ, ರಮೇಶ್‌ ಜಾರ​ಕಿ​ಹೊಳಿ ನಡೆ ಮಾತ್ರ ನಿಗೂ​ಢ​ವಾ​ಗಿದೆ. ಇಡೀ ದಿನ ಮಾಧ್ಯ​ಮ​ಗ​ಳಿಂದ ದೂರ ಉಳಿದ ರಮೇಶ್‌ ಜಾರ​ಕಿ​ಹೊಳಿ ಹಾಗೂ ಅವರ ಬೆಂಬ​ಲಿ​ಗ ಶಾಸ​ಕರ ತಂಡ ನಿಗಿ ನಿಗಿ ಕೆಂಡ​ವಾ​ಗಿದ್ದು, ಈ ಗುಂಪು ಯಾವುದೇ ಕ್ಷಣ​ದಲ್ಲಿ ಕಾಂಗ್ರೆಸ್‌ ವಿರುದ್ಧ ತಿರು​ಗಿ​ಬೀ​ಳ​ಬ​ಹುದು. ಒಂದು ಮೂಲದ ಪ್ರಕಾರ ಈ ಇಡೀ ತಂಡ ಜನ​ವರಿ ವೇಳೆಗೆ ಕಾಂಗ್ರೆ​ಸ್‌ ಪಕ್ಷದಿಂದ ದೂರ​ವಾ​ಗುವ ನಿರ್ಧಾ​ರ​ವನ್ನು ಪ್ರಕ​ಟಿ​ಸ​ಬ​ಹುದು. ಆದರೆ, ರಾಜೀ​ನಾಮೆ ನೀಡು​ವರೋ ಅಥವಾ ಪಕ್ಷ​ದ​ಲ್ಲಿ​ದ್ದು​ಕೊಂಡೇ ಪ್ರತ್ಯೇಕ ಗುಂಪಿ​ನಂತೆ ವರ್ತಿ​ಸು​ವರೋ ಎಂಬುದು ಇನ್ನು ಸ್ಪಷ್ಟ​ವಾ​ಗಿ​ಲ್ಲ.

ಇನ್ನು ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿಯೂ ಹಿರಿಯ ಶಾಸಕರಿಗೆ ಅವಕಾಶ ನೀಡದಿರುವುದು ಎಸ್‌.ಆರ್‌. ಪಾಟೀಲ್‌, ರಾಮಲಿಂಗಾರೆಡ್ಡಿ, ಶಾಮನೂರು ಶಿವಶಂಕರಪ್ಪ, ಬಿ.ಸಿ.ಪಾಟೀಲ್‌ ಅವರಲ್ಲಿ ತೀವ್ರ ಅಸ​ಮಾ​ಧಾನ ಮೂಡಿ​ಸಿದೆ. ಇದೇ ಗುಂಪಿ​ನಲ್ಲಿ ಗುರು​ತಿ​ಸಿ​ಕೊಂಡಿದ್ದ ಕಾಂಗ್ರೆಸ್‌ ಎಚ್‌.ಕೆ. ಪಾಟೀಲ್‌ ಅವರಿಗೆ ನೀಡಿರುವ ಪ್ರಚಾರ ಸಮಿತಿ ಉಸ್ತುವಾರಿ ತಕ್ಕ ಮಟ್ಟಿಗೆ ಫಲ ನೀಡಿದ್ದು, ಅವರು ಈ ಜವಾ​ಬ್ದಾ​ರಿ​ಯನ್ನು ನಿರ್ವ​ಹಿ​ಸುವುದಾಗಿ ಹೇಳಿಕೆ ನೀಡುವ ಮೂಲಕ ಅತೃ​ಪ್ತರ ಗುಂಪಿ​ನಿಂದ ಹೊರ ಬಂದಿ​ದ್ದಾ​ರೆ.

ಉಳಿದಂತೆ ಸಚಿವ ಸ್ಥಾನ ಕೈತಪ್ಪಿರುವ ಶಾಸಕರು ಹೈಕಮಾಂಡ್‌ ಹಾಗೂ ರಾಜ್ಯ ನಾಯಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕೆ ಸದ್ಯದಲ್ಲೇ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ಆಕಾಂಕ್ಷಿಗಳ ಪರ ಬೆಂಬಲಿಗರು ಭಾರಿ ಪ್ರತಿಭಟನೆ ನಡೆಸಿದ್ದಾರೆ.

ಇನ್ನು ನಿಗಮ-ಮಂಡಳಿ ಹಾಗೂ ಸಂಸ​ದೀಯ ಕಾರ್ಯ​ದ​ರ್ಶಿ ಹುದ್ದೆ​ಗ​ಳನ್ನು ಪಡೆ​ದಿದ್ದ ಕೆಲ ಆಕಾಂಕ್ಷಿ​ಗಳು ತಮಗೆ ನೀಡ​ಲಾದ ಹುದ್ದೆ​ಯನ್ನು ತಿರ​ಸ್ಕ​ರಿ​ಸಿ​ದ್ದಾರೆ. ಈ ಪೈಕಿ ತಮ್ಮ ತಂದೆ ರಾಮ​ಲಿಂಗಾ​ರೆಡ್ಡಿ ಅವ​ರಿಗೆ ಹುದ್ದೆ ದೊರೆ​ಯ​ಲಿಲ್ಲ ಎಂದು ಸಂಸ​ದೀಯ ಕಾರ್ಯ​ದರ್ಶಿ ಹುದ್ದೆ ತಿರ​ಸ್ಕ​ರಿ​ಸಿದ ಸೌಮ್ಯ ರೆಡ್ಡಿ ಅವರ ಬದ​ಲಾಗಿ ಎ.ಅಬ್ದುಲ್‌ ಜಬ್ಬಾರ್‌ ಅವ​ರಿಗೆ ಸಂಸ​ದೀಯ ಕಾರ್ಯ​ದರ್ಶಿ ಹುದ್ದೆ​ಯನ್ನು ನೀಡುವ ಮೂಲಕ ಕಾಂಗ್ರೆಸ್‌ ನಾಯ​ಕ​ತ್ವವು ಈ ಬೆದ​ರಿಕೆ ತಂತ್ರಕ್ಕೆ ಜಗ್ಗು​ವು​ದಿಲ್ಲ ಎಂಬ ಸಂದೇಶ ನೀಡಿದೆ. ಆದರೆ ನಿಗಮ ಮಂಡಳಿ ಹುದ್ದೆ ತಿರ​ಸ್ಕ​ರಿಸಿ ಹೇಳಿಕೆ ನೀಡಿ​ರುವ ಎನ್‌.ಎ.ಹ್ಯಾರಿಸ್‌ ಹಾಗೂ ಬಿ.ಕೆ.ಸಂಗಮೇಶ್‌ ಅವರ ವಿಚಾ​ರ​ದಲ್ಲಿ ಮೌನ ತಾಳಿದೆ.

ರಾಮಲಿಂಗಾರೆಡ್ಡಿ ಬೆಂಬಲಿಗರಿಂದ ಪ್ರತಿಭಟನೆ

ತಮ್ಮ ತಂದೆಗೆ ಸಚಿವ ಸ್ಥಾನ ದೊರೆಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸೌಮ್ಯಾರೆಡ್ಡಿ, ದೆಹಲಿಯಲ್ಲಿ ಲಾಬಿ ನಡೆಸಿದರೆ ಮಾತ್ರ ಮಂತ್ರಿಗಿರಿ ದೊರೆಯುತ್ತದೆ. ಕಾಂಗ್ರೆಸ್‌ ಪಕ್ಷಕ್ಕಾಗಿ ನಮ್ಮ ತಂದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ನನಗೆ ಈಗ ಯಾವುದೇ ಸಂಸದೀಯ ಹುದ್ದೆ ಬೇಡ. ತಂದೆಯನ್ನು ಸಚಿವ ಸ್ಥಾನದಲ್ಲಿ ನೋಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

ಇದೇ ವೇಳೆ ರಾಮಲಿಂಗಾರೆಡ್ಡಿ ಪರ ಬೆಂಬಲಿಗರು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಮಾಜಿ ಮೇಯರ್‌ ಎನ್‌. ಮಂಜುನಾಥರೆಡ್ಡಿ, ಕಾಂಗ್ರೆಸ್‌ ಪಕ್ಷದ ಕಟ್ಟಾಳಾಗಿರುವ ರಾಮಲಿಂಗಾರೆಡ್ಡಿ ಅವರಿಗೆ ಅನ್ಯಾಯವಾಗಿದೆ. ಬೆಂಗಳೂರಿನಲ್ಲಿ ಕಾಂಗ್ರೆಸ್‌ ಪಕ್ಷ ಉಸಿರಾಡುತ್ತಿದೆ ಎಂದರೆ ರಾಮಲಿಂಗಾರೆಡ್ಡಿ ಕಾರಣ. ಹೀಗಾಗಿ ರಾಮಲಿಂಗಾರೆಡ್ಡಿ ಅಭಿಮಾನಿಗಳಾದ ನಾವೆಲ್ಲಾ ಸ್ವಯಂಪ್ರೇರಿತವಾಗಿ ಬೀದಿಗಿಳಿದಿದ್ದೇವೆ. ಹೋರಾಟ ತೀವ್ರತೆ ಪಡೆದುಕೊಳ್ಳುವುದರ ಒಳಗೆ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.