ಬೆಂಗಳೂರು[ಸೆ.26]: ಉಪ ಚುನಾವಣೆಯಲ್ಲಿ ಹೊರಗಿನವರಿಗೆ ಟಿಕೆಟ್ ನೀಡುವುದಿಲ್ಲ. ಬದಲಾಗಿ ಪಕ್ಷದ ನಿಷ್ಠಾವಂತರು ಹಾಗೂ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸಕೋಟೆ ಮತ್ತು ಕೆ.ಆರ್ .ಪುರ ಕ್ಷೇತ್ರಗಳಿಂದ ಸ್ಪರ್ಧೆಗೆ ಬಿಜೆಪಿಯ ಶರತ್ ಬಚ್ಚೇಗೌಡ, ನಂದೀಶ್ ರೆಡ್ಡಿ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಪ್ರಯತ್ನ ನಡೆದಿದೆ ಎಂಬ ಮಾತುಗಳಿವೆಯಲ್ಲಾ ಎಂಬ ಪ್ರಶ್ನೆಗೆ, ಬೇರೆ ಪಕ್ಷಗಳ ಯಾವುದೇ ನಾಯಕರ ಸಂಪರ್ಕಿಸುವ ಪ್ರಯತ್ನವನ್ನು ನಾವು ಮಾಡಿಲ್ಲ. ಅದೆಲ್ಲಾ ಊಹಾಪೋಹ. ನಾವು ಯಾರನ್ನೋ ಎಲ್ಲಿಂದಲ್ಲೋ ಕರೆತಂದು ಟಿಕೆಟ್ ಕೊಡುವುದಿಲ್ಲ. ನಮ್ಮದೇ ಪಕ್ಷದ ನಿಷ್ಠಾವಂತ ಹಾಗೂ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಟಿಕೆಟ್ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸದ್ಯ ಕರ್ನಾಟಕ ಉಪ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳುಗೆಲ್ಲಲೇಬೇಕೆಂಬ ಪಣ ತೊಟ್ಟಿವೆ.