ಬೈ ಎಲೆಕ್ಷನ್‌ ಸಿದ್ಧತೆಯಲ್ಲಿ ಕಾಂಗ್ರೆಸ್‌ ಮುಂದೆ| ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರೆಡಿ| ಉಪ ಚುನಾವಣೆಯ ಎಲ್ಲ ಕ್ಷೇತ್ರಕ್ಕೂ ವೀಕ್ಷಕರ ನೇಮಕ| ಹೆಚ್ಚು ಸೀಟು ಗೆದ್ದು ಬಿಜೆಪಿ ಸರ್ಕಾರ ಬೀಳಿಸುವ ಗುರಿ|  ಕಾಂಗ್ರೆಸ್‌ಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆ

ಬೆಂಗಳೂರು[ಸೆ.22]: ಹಠಾತ್‌ ಎದುರಾಗಿರುವ ಉಪ ಚುನಾವಣೆ ಎದುರಿಸಲು ಸ್ವಲ್ಪಮಟ್ಟಿಗೆ ಸಜ್ಜಾಗಿರುವ ಪಕ್ಷವೆಂದರೆ ಕಾಂಗ್ರೆಸ್‌. ಅನರ್ಹ ಶಾಸಕರನ್ನು ಪಕ್ಷದಿಂದ ಹೊರಹಾಕಿದ ನಂತರ ಈ ಎಲ್ಲಾ ಕ್ಷೇತ್ರಗಳಿಗೂ ವೀಕ್ಷಕರನ್ನು ನೇಮಕ ಮಾಡಿ ಗೆಲ್ಲಬಲ್ಲ ಅಭ್ಯರ್ಥಿಗಳ ಆಯ್ಕೆ ಕಸರತ್ತು ಆರಂಭಿಸಿತ್ತು.

ಅಷ್ಟೇ ಅಲ್ಲದೆ ಅನರ್ಹರ ಎಲ್ಲಾ ಕ್ಷೇತ್ರಗಳಲ್ಲಿ ಭಾರಿ ಸಮಾವೇಶ ನಡೆಸಲು ರೂಪರೇಷೆ ಸಿದ್ಧಪಡಿಸಿತ್ತು. ಇದರ ಮೊದಲ ಸಭೆ ಶನಿವಾರದಂದೇ ಹೊಸಕೋಟೆಯಲ್ಲಿ ನಡೆದಿದ್ದು, ಈ ಸಭೆ ನಡೆಯುವ ವೇಳೆಗೆ ಉಪ ಚುನಾವಣೆ ದಿನಾಂಕ ಪ್ರಕಟವಾಗಿದ್ದು ಕಾಕತಾಳೀಯ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಸರ್ಕಾರ ಕುಸಿಯಲು ಕಾರಣರಾದ ಅನರ್ಹರಿಗೆ ಬುದ್ಧಿ ಕಲಿಸುವ ಛಲ ಕಾಂಗ್ರೆಸ್‌ನಲ್ಲಿ ಇದೆ. ಇದಕ್ಕೆ ಮುಖ್ಯ ಕಾರಣ ಪಕ್ಷ ತೊರೆಯಲು ಮುಂದಾದವರ ಪೈಕಿ ಹೆಚ್ಚಿನವರು ಕಾಂಗ್ರೆಸ್‌ನವರೇ ಆಗಿದ್ದು,

ಅಲ್ಲದೆ, ಅನರ್ಹರ ಕ್ಷೇತ್ರಗಳನ್ನು ಕಾಂಗ್ರೆಸ್‌ ಮತ್ತೆ ಗೆದ್ದುಕೊಳ್ಳಲು ಸಾಧ್ಯವಾದರೆ ಅಯಾಚಿತವಾಗಿ ಬಿಜೆಪಿ ಸರ್ಕಾರವು ಕುಸಿಯುತ್ತದೆ. ಹೀಗಾಗಿ ಈ ಚುನಾವಣೆಯನ್ನು ಕಾಂಗ್ರೆಸ್‌ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಈಗಾಗಲೇ ತಯಾರಿ ಆರಂಭಿಸಿದೆ. ಪಕ್ಷ ತ್ಯಜಿಸಿ ಹೋದ ಅನರ್ಹರ ಬೆಂಬಲಿಗರನ್ನು ಪಕ್ಷದಿಂದ ಹೊರಹಾಕಲಾಗಿದೆ. ಅಲ್ಲದೆ, ಅನರ್ಹರು ಕಾಂಗ್ರೆಸ್‌ನಲ್ಲಿದ್ದಾಗ ಅವರ ಬೆಂಬಲಿಗರು ಪಕ್ಷದಲ್ಲಿ ಆಯಕಟ್ಟಿನ ಸ್ಥಾನಗಳನ್ನು ಪಡೆದಿದ್ದರು. ಅವರೆಲ್ಲರನ್ನು ಈಗ ತೆಗೆದು ಹಾಕಲಾಗಿದ್ದು, ಆ ಸ್ಥಾನಕ್ಕೆ ಹೊಸಬರ ನೇಮಕ ಮಾಡಲಾಗಿದೆ.

ಇದೇ ವೇಳೆ ಪರ್ಯಾಯ ಅಭ್ಯರ್ಥಿಗಳ ಹುಡುಕಾಟವನ್ನು ಕಾಂಗ್ರೆಸ್‌ ಆರಂಭಿಸಿತ್ತು. ಹೊಸಕೋಟೆ (ಬಿಜೆಪಿ ಶಾಸಕ ಬಚ್ಚೇಗೌಡ ಅವರ ಪುತ್ರ ಶರತ್‌ ಬಚ್ಚೇಗೌಡ), ಯಶವಂತಪುರ (ಜೆಡಿಎಸ್‌ನ ಜವರಾಯಿಗೌಡ), ಹಿರೇಕೇರೂರು (ಬಿಜೆಪಿಯ ಜೆ.ಡಿ. ಪಾಟೀಲ್‌)ನಂತಹ ಕ್ಷೇತ್ರಗಳಲ್ಲಿ ಅನ್ಯಪಕ್ಷಗಳ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಪ್ರಯತ್ನವನ್ನೂ ನಡೆಸಿತ್ತು. ಇದಲ್ಲದೆ, ಕೆ.ಆರ್‌.ಪುರ (ಬೈರತಿ ಸುರೇಶ್‌ ಪತ್ನಿ ಪದ್ಮಾವತಿ), ಯಶವಂತಪುರ (ಮಾಗಡಿ ಬಾಲಕೃಷ್ಣ), ಗೋಕಾಕ್‌ (ರಮೇಶ್‌ ಜಾರಕಿಹೊಳಿ ಸಹೋದರ ಲಖನ್‌ ಜಾರಕಿಹೊಳಿ), ಕಾಗವಾಡ (ಮಾಜಿ ಸಂಸದ ಪ್ರಕಾಶ್‌ ಹುಕ್ಕೇರಿ)ಯಂತಹ ಘಟಾನುಘಟಿಗಳನ್ನು ಕಣಕ್ಕೆ ಇಳಿಸುವ ಚಿಂತನೆ ಆರಂಭಿಸಿತು.

ಹೀಗಾಗಿ ಕಾಂಗ್ರೆಸ್‌ಗೆ ಹಾಲಿ ಚುನಾವಣೆ ನಡೆಯಲಿರುವ 15 ಕ್ಷೇತ್ರಗಳಲ್ಲೂ ಪ್ರಭಾವಿ ಅಭ್ಯರ್ಥಿಗಳನ್ನು ಹುಟ್ಟಿಹಾಕಲು ಸಾಧ್ಯವಾಗಿದೆ. ಮೂಲಗಳ ಪ್ರಕಾರ ಸಂಭಾವ್ಯರ ಪಟ್ಟಿಈಗಾಗಲೇ ಸಿದ್ಧವಿದೆ. ಇನ್ನೊಂದೆರಡು ದಿನಗಳಲ್ಲಿ ಪಕ್ಷದ ನಾಯಕರು ಸಭೆ ಸೇರಿ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರುಗೊಳಿಸಿ ಹೈಕಮಾಂಡ್‌ ಒಪ್ಪಿಗೆಗೆ ಕಳುಹಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಕಾಂಗ್ರೆಸ್‌ ಸಂಭಾವ್ಯರು

1. ಹೊಸಕೋಟೆ: ಶರತ್‌ ಬಚ್ಚೇಗೌಡ (ಬಿಜೆಪಿ ಹಾಲಿ ಶಾಸಕ ಬಚ್ಚೇಗೌಡರ ಪುತ್ರ)/ನಾರಾಯಣಗೌಡ (ಮಾಜಿ ಸಚಿವ ಚಿಕ್ಕೇಗೌಡರ ಮೊಮ್ಮಗ)

2. ಕೆ.ಆರ್‌. ಪುರ: ಪದ್ಮಾವತಿ (ಬೈರತಿ ಸುರೇಶ್‌ ಪತ್ನಿ)/ ಎಂ.ನಾರಾಯಣ ಸ್ವಾಮಿ.

3. ಯಲ್ಲಾಪುರ: ಭೀಮ್ಮಣ್ಣ ನಾಯ್‌್ಕ/ ಪ್ರಶಾಂತ್‌ ದೇಶಪಾಂಡೆ,

4. ಯಶವಂತಪುರ: ಜವರಾಯಿ ಗೌಡ/ ಮಾಗಡಿ ಬಾಲಕೃಷ್ಣ/ ಎಂ. ರಾಜಕುಮಾರ್‌

5. ವಿಜಯನಗರ: ಮಾಜಿ ಶಾಸಕ ಗವಿಯಪ್ಪ/ಸೂರ್ಯ ನಾರಾಯಣ ರೆಡ್ಡಿ

6. ಶಿವಾಜಿನಗರ: ರಿಜ್ವಾನ್‌ ಅರ್ಷದ್‌/ ಎಸ್‌.ಎ. ಹುಸೇನ್‌

7. ಚಿಕ್ಕಬಳ್ಳಾಪುರ: ಡಾ| ಎಂ.ಸಿ. ಸುಧಾಕರ್‌/ ಆಂಜನಪ್ಪ

8. ಗೋಕಾಕ್‌: ಲಖನ್‌ ಜಾರಕಿಹೊಳಿ

9. ಅಥಣಿ: ಎ.ಬಿ. ಪಾಟೀಲ್‌

10: ರಾಣೆಬೆನ್ನೂರು: ಕೆ.ಬಿ.ಕೋಳಿವಾಡ್‌ ಅಥವಾ ಪುತ್ರ ಪ್ರಕಾಶ್‌ ಕೋಳಿವಾಡ್‌,

11. ಕಾಗವಾಡ: ಪ್ರಕಾಶ್‌ ಹುಕ್ಕೇರಿ

12. ಹಿರೇಕೆರೂರು: ಜಿ.ಡಿ. ಪಾಟೀಲ್‌ /ಯು.ಬಿ. ಬಣಕಾರ್‌ ಪುತ್ರ

13. ಹುಣಸೂರು: ಎಚ್‌.ಪಿ.ಮಂಜನಾಥ್‌

14. ಮಹಾಲಕ್ಷ್ಮೇ ಬಡಾವಣೆ: ಶಿವರಾಜ್‌/ ಎಚ್‌.ಸಿ. ಮಂಜುನಾಥಗೌಡ

15. ಕೆ.ಆರ್‌ ಪೇಟೆ: ಕೆ.ಬಿ. ಚಂದ್ರಶೇಖರ್‌/ಕಿಕ್ಕೇರಿ ಸುರೇಶ್‌