ಬೆಂಗಳೂರು (ಮೇ. 30): ಗುರುವಾರ ಸಂಜೆ ಅಸ್ತಿತ್ವಕ್ಕೆ ಬರಲಿರುವ ನರೇಂದ್ರ ಮೋದಿ ನೇತೃತ್ವದ ನೂತನ ಎನ್‌ಡಿಎ ಸರ್ಕಾರದಲ್ಲಿ ರಾಜ್ಯದಿಂದ ಯಾರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಕುತೂಹಲ ಹೆಚ್ಚಿದೆ.

ಕಳೆದ ಸರ್ಕಾರದಲ್ಲಿ ಸಚಿವರಾಗಿದ್ದವರ ಪೈಕಿ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ (ಕರ್ನಾಟಕದ ಕೋಟಾ ಎಂಬುದಾಗಿ ಪರಿಗಣಿಸಬಹುದಾದರೆ) ನಿರ್ಮಲಾ ಸೀತಾರಾಮನ್‌ ಅವರ ಹೆಸರು ಮಾತ್ರ ಬಹುತೇಕ ಖಚಿತವಾಗಿದೆ.

ಇನ್ನುಳಿದಂತೆ ಸಚಿವರಾಗಿದ್ದ ಡಿ.ವಿ.ಸದಾನಂದಗೌಡ, ಅನಂತಕುಮಾರ್‌ ಹೆಗಡೆ ಹಾಗೂ ರಮೇಶ್‌ ಜಿಗಜಿಣಗಿ ಅವರ ಪೈಕಿ ಯಾರಿಗೆ ಈ ಬಾರಿಯೂ ಅವಕಾಶ ಸಿಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ರಾಜ್ಯಕ್ಕೆ 3-4 ಸಚಿವ ಸ್ಥಾನಗಳನ್ನು ಮೋದಿ ನೀಡಬಹುದು ಎಂದು ತಿಳಿದು ಬಂದಿದೆ.

ಸಚಿವರ ಆಯ್ಕೆಯಲ್ಲಿ ಜಾತಿ ಹಾಗೂ ಪ್ರಾದೇಶಿಕ ಸಮತೋಲನ ಮಾಡುವ ಬಗ್ಗೆ ಯಾವುದೇ ಮುನ್ಸೂಚನೆ ಇಲ್ಲ. ಕೇವಲ ಹಿರಿತನಕ್ಕೆ ಮಾತ್ರ ಮಣೆ ಹಾಕಬಹುದು ಎಂಬ ಗ್ಯಾರಂಟಿಯೂ ಇಲ್ಲ. ಸಾಂಪ್ರದಾಯಿಕವಾಗಿ ನಡೆದು ಬಂದಿರುವ ಜಾತಿ ಮತ್ತು ಪ್ರಾದೇಶಿಕ ಲೆಕ್ಕಾಚಾರವನ್ನು ಬದಿಗಿಟ್ಟು ಕೊಟ್ಟಖಾತೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲಂಥವರನ್ನು ಮಾತ್ರ ಆಯ್ಕೆ ಮಾಡಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

ಉತ್ತಮ ಸಂಸದೀಯ ಪಟು ಎಂಬ ಹೆಸರು ಗಳಿಸಿರುವ ಹಾಗೂ ಈ ಬಾರಿ ಹ್ಯಾಟ್ರಿಕ್‌ ಬಾರಿಸಿದ ಧಾರವಾಡ ಸಂಸದ ಪ್ರಹ್ಲಾದ್‌ ಜೋಶಿ ಅವರಿಗೆ ಮೋದಿ ಸಂಪುಟದಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ. ವಿವಾದಾತ್ಮಕ ಹೇಳಿಕೆಗಳಿಂದ ಪಕ್ಷಕ್ಕೆ ಸಾಕಷ್ಟುಬಾರಿ ಮುಜುಗರ ಉಂಟು ಮಾಡಿದ್ದ ಅನಂತಕುಮಾರ್‌ ಹೆಗಡೆ ಅವರನ್ನು ಕೈಬಿಟ್ಟು ಜೋಶಿ ಅವರಿಗೆ ಅವಕಾಶ ನೀಡುವ ಸಂಭವವಿದೆ.

ಜೋಶಿ ಅವರ ಹೆಸರು ಲೋಕಸಭೆಯ ಸ್ಪೀಕರ್‌ ಸ್ಥಾನಕ್ಕೂ ಕೇಳಿಬರುತ್ತಿದೆ. ಆದರೆ, ಅನುಭವ ಸಾಲದು ಎಂದಾದರೆ ಸ್ಪೀಕರ್‌ ಸ್ಥಾನಕ್ಕೆ ಪರಿಗಣನೆ ಮಾಡಲಿಕ್ಕಿಲ್ಲ ಎಂಬ ಮಾತೂ ಕೇಳಿಬರುತ್ತಿದೆ.

ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕರಾಗಿದ್ದ ಮಲ್ಲಿಕಾರ್ಜುನ್‌ ಖರ್ಗೆ ಅವರಿಗೆ ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿ ಮೊದಲ ಸಲ ಸಂಸತ್ತಿನ ಮೆಟ್ಟಿಲು ಹತ್ತಿರುವ ಡಾ.ಉಮೇಶ್‌ ಜಾಧವ್‌ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆಯಿದೆ. ಹಾಗಾದಲ್ಲಿ ಕಳೆದ ಬಾರಿ ಸಚಿವರಾಗಿದ್ದ ರಮೇಶ್‌ ಜಿಗಜಿಣಗಿ ಅವರನ್ನು ಕೈಬಿಡಬಹುದು.

ರಾಜ್ಯದಿಂದ ಲಿಂಗಾಯತ ಸಮುದಾಯಕ್ಕೆ ಒಂಬತ್ತು ಮಂದಿ ಸೇರಿದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿರುವುದರಿಂದ ಈ ಬಾರಿ ಸಮುದಾಯಕ್ಕೆ ಒಂದು ಸಚಿವ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ. ಈ ಪೈಕಿ ಸುರೇಶ್‌ ಅಂಗಡಿ, ಪಿ.ಸಿ.ಗದ್ದಿಗೌಡರ್‌, ಶಿವಕುಮಾರ್‌ ಉದಾಸಿ ಹಾಗೂ ಜಿ.ಎಸ್‌.ಬಸವರಾಜು ಅವರ ಹೆಸರುಗಳು ಪ್ರಸ್ತಾಪವಾಗಿದೆ.

ಪ್ರಹ್ಲಾದ್‌ ಜೋಶಿ ಹಾಗೂ ಉಮೇಶ್‌ ಜಾಧವ್‌ ಅವರಿಗೆ ಸಚಿವ ಸ್ಥಾನ ಸಿಗುವುದಾದಲ್ಲಿ ಮತ್ತೊಂದು ಸ್ಥಾನವನ್ನು ಉತ್ತರ ಕರ್ನಾಟಕಕ್ಕೇ ನೀಡಿದರೆ ಅಸಮಾಧಾನ ಹೆಚ್ಚಬಹುದು. ಇದನ್ನು ಹೇಗೆ ಸರಿದೂಗಿಸುತ್ತಾರೆ ಎಂಬುದು ಕುತೂಹಲಕರವಾಗಿದೆ. ಹಾಗಾದಲ್ಲಿ ಲಿಂಗಾಯತ ಸಮುದಾಯದ ತುಮಕೂರು ಸಂಸದ ಬಸವರಾಜು ಅವರಿಗೆ ಅದೃಷ್ಟಒದಗಿಬರಬಹುದು.

ಇನ್ನು ಒಕ್ಕಲಿಗ ಸಮುದಾಯದಿಂದ ಸದಾನಂದಗೌಡ ಅವರಿಗೇ ಮತ್ತೊಂದು ಬಾರಿ ಅವಕಾಶ ಸಿಗದಿದ್ದಲ್ಲಿ ಉಡುಪಿ-ಚಿಕ್ಕಮಗಳೂರಿನ ಶೋಭಾ ಕರಂದ್ಲಾಜೆ ಅವರಿಗೆ ಸ್ಥಾನ ನೀಡಬಹುದು. ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಶೋಭಾ ಪರ ಬ್ಯಾಟಿಂಗ್‌ ಮಾಡುತ್ತಿದ್ದಾರೆ.

ಇಬ್ಬರೂ ಬೇಡ ಎಂದಾದಲ್ಲಿ ಮೈಸೂರಿನ ಪ್ರತಾಪ್‌ ಸಿಂಹ ಅವರ ಹೆಸರನ್ನೂ ತಳ್ಳಿ ಹಾಕುವಂತಿಲ್ಲ. ಇತರ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂಬ ನಿರ್ಧಾರವಾದಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಹ್ಯಾಟ್ರಿಕ್‌ ಬಾರಿಸಿರುವ ಪಿ.ಸಿ.ಮೋಹನ್‌ ಅವರನ್ನೂ ಪರಿಗಣಿಸಬಹುದು ಎಂದು ಮೂಲಗಳು ತಿಳಿಸಿವೆ.

ಸಂಭಾವ್ಯರು

ನಿರ್ಮಲಾ ಸೀತಾರಾಮನ್‌

ಪ್ರಹ್ಲಾದ್‌ ಜೋಶಿ/ಅನಂತಕುಮಾರ್‌ ಹೆಗಡೆ

ಡಾ.ಉಮೇಶ್‌ ಜಾಧವ್‌/ರಮೇಶ್‌ ಜಿಗಜಿಣಗಿ

ಸುರೇಶ್‌ ಅಂಗಡಿ/ಪಿ.ಸಿ.ಗದ್ದಿಗೌಡರ್‌/ಶಿವಕುಮಾರ್‌ ಉದಾಸಿ/ಜಿ.ಎಸ್‌.ಬಸವರಾಜು

ಶೋಭಾ ಕರಂದ್ಲಾಜೆ/ಡಿ.ವಿ.ಸದಾನಂದಗೌಡ/ಪ್ರತಾಪ್‌ ಸಿಂಹ

ಪಿ.ಸಿ.ಮೋಹನ್‌