ಇವರಿಗೆಲ್ಲಾ ಕಾಂಗ್ರೆಸ್’ನಲ್ಲಿ ಟಿಕೆಟ್ ಪಕ್ಕಾ

First Published 11, Apr 2018, 7:26 AM IST
Karnataka Assembly Election Congress Candidates
Highlights

ನಾಲ್ವರು ಶಾಸಕರನ್ನು ಹೊರತುಪಡಿಸಿ ಉಳಿದ ಎಲ್ಲಾ ಹಾಲಿ ಕಾಂಗ್ರೆಸ್‌ ಶಾಸಕರಿಗೂ ಟಿಕೆಟ್‌ ನೀಡುವ ಕುರಿತು ದೆಹಲಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಬೆಂಗಳೂರು/ನವದೆಹಲಿ : ನಾಲ್ವರು ಶಾಸಕರನ್ನು ಹೊರತುಪಡಿಸಿ ಉಳಿದ ಎಲ್ಲಾ ಹಾಲಿ ಕಾಂಗ್ರೆಸ್‌ ಶಾಸಕರಿಗೂ ಟಿಕೆಟ್‌ ನೀಡುವ ಕುರಿತು ದೆಹಲಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಸಚಿವರೂ ಆದ ಹಾನಗಲ್‌ ಶಾಸಕ ಮನೋಹರ್‌ ತಹಶೀಲ್ದಾರ್‌, ಹಿರಿಯ ಮುಖಂಡ ಹಾಗೂ ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ, ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿಮತ್ತು ಗುಲ್ಬರ್ಗ ದಕ್ಷಿಣ ಕ್ಷೇತ್ರದ ಶಾಸಕ ಜಿ.ರಾಮಕೃಷ್ಣ ಅವರ ಕ್ಷೇತ್ರಗಳ ಬಗ್ಗೆ ರಾಹುಲ್‌ ಗಾಂಧಿ ಅವರೊಂದಿಗಿನ ಸಮಾಲೋಚನೆ ವೇಳೆ ನಿರ್ಧಾರ ಕೈಗೊಳ್ಳುವುದು, ಉಳಿದಂತೆ ಸ್ಪೀಕರ್‌ ಕೆ.ಬಿ.ಕೋಳಿವಾಡ ಹಾಗೂ ಶಾಂತಿನಗರ ಕ್ಷೇತ್ರದ ಎನ್‌.ಎ.ಹ್ಯಾರೀಸ್‌ ಸೇರಿದಂತೆ ಎಲ್ಲಾ ಶಾಸಕರಿಗೂ ಟಿಕೆಟ್‌ ನೀಡುವ ಕುರಿತು ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲಿದ್ದ ಎಲ್ಲಾ ನಾಯಕರು ಒಪ್ಪಿದರು ಎನ್ನಲಾಗಿದೆ.

ಕಳೆದೆರಡು ದಿನಗಳಿಂದ ನಡೆದ ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲಿ ರಾಜ್ಯ ನಾಯಕರು ತಾವು ಒಯ್ದಿದ್ದ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಮುಂದಿಟ್ಟುಕೊಂಡು ಸ್ಕ್ರೀನಿಂಗ್‌ ಸಮಿತಿ ಅಧ್ಯಕ್ಷರಾದ ಮದುಸೂಧನ್‌ ಮಿಸ್ತ್ರಿ ಹಾಗೂ ಗೆಲ್ಹೋಟ್‌ ಅವರ ಸಮ್ಮುಖದಲ್ಲಿ ಯಾವ ಅಭ್ಯರ್ಥಿಗೆ ಟಿಕೆಟ್‌ ನೀಡಿದರೆ ಗೆಲ್ಲುವ ಸಾಧ್ಯತೆಯಿದೆ ಎಂಬ ವಿವರ ನೀಡಿದರು. ಕೆಲವೊಂದು ತೀರಾ ಸಮಸ್ಯಾತ್ಮಕ ಕ್ಷೇತ್ರಗಳನ್ನು ಹೊರತುಪಡಿಸಿ ಎಲ್ಲಾ 224 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಬುಧವಾರ ಎಐಸಿಸಿ ಪರಿಶೀಲನಾ ಸಮಿತಿಯ ಎಐಸಿಸಿ ಪ್ರತಿನಿಧಿಗಳು ಈ ಪಟ್ಟಿಕುರಿತು ಸಭೆ ಸೇರಿ ಚರ್ಚಿಸಲಿದ್ದಾರೆ. ನಂತರ ಈ ಪಟ್ಟಿಯನ್ನು ಏ.13 ಹಾಗೂ 14ರಂದು ನಡೆಯುವ ಚುನಾವಣಾ ಸಮಿತಿ ಮುಂದಿಡಲಾಗುತ್ತದೆ. ಇಲ್ಲಿ ಪಟ್ಟಿಅಖೈರುಗೊಳ್ಳಲಿದೆ. ಇದಾದ ನಂತರ ಪಟ್ಟಿಯ ಅಂತಿಮ ಪರಾಮರ್ಶೆಯನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ನಡೆಯಲಿದ್ದು, ಇದಾದ ನಂತರ ಪಟ್ಟಿಪ್ರಕಟವಾಗಲಿದೆ. ಬಹುತೇಕ ಪಟ್ಟಿ14ರೊಳಗೆ ಪ್ರಕಟವಾಗಲಿದೆ. ಒಟ್ಟಾರೆ ಬಹುತೇಕ ಎಲ್ಲ ಕ್ಷೇತ್ರಗಳ ಟಿಕೆಚ್‌ ಅಂತಿಮಗೊಂಡಿದ್ದರೂ ವಿವಿಧ ಹಂತಗಳಲ್ಲಿ ಪಟ್ಟಿಬಿಡುಗಡೆಯಾಗಲಿದೆ. ಮೊದಲ ಹಂತದಲ್ಲಿ 150 ಉಮೇದುವಾರರ ಪಟ್ಟಿಯನ್ನಷ್ಟೇ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಎರಡು ದಿನಗಳ ಈ ಸಭೆಯಲ್ಲಿ ಮೊದಲ ದಿನ ಮೊದಲ ದಿನ ಬೆಳಗಾವಿ ಮತ್ತು ಮೈಸೂರು ಕಂದಾಯ ವಿಭಾಗದ ಚರ್ಚೆ ನಡೆದಿದ್ದರೆ ಮಂಗಳವಾರ ಬೆಂಗಳೂರು ಮತ್ತು ಕಲಬುರಗಿ ವಿಭಾಗದ ಚರ್ಚೆ ನಡೆದಿದೆ.

ಅಂದ ಹಾಗೆ, ಮಂಗಳವಾರ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಬಹುದು ಎಂದೇ ಭಾವಿಸಲಾಗಿತ್ತು. ಆದರೆ ಪರಿಶೀಲನಾ ಸಮಿತಿಯೂ ಸುದೀರ್ಘ ಚರ್ಚೆ ನಡೆಸಲು ಒಲವು ತೋರಿದ ಹಿನ್ನೆಲೆಯಲ್ಲಿ ಹಾಗೂ ಸಮಿತಿಯ ಎಐಸಿಸಿ ಪ್ರತಿನಿಧಿಗಳಿಗೂ ಸಭೆ ನಡೆಸಲು ಸಮಯ ಬೇಕಿದ್ದ ಹಿನ್ನೆಲೆಯಲ್ಲಿ ಏ.13ಕ್ಕೆ ಚುನಾವಣಾ ಸಮಿತಿಯ ಸಭೆ ನಿಗದಿ ಪಡಿಸಲಾಗಿದೆ.

ಪರಿಶೀಲನಾ ಸಮಿತಿಯ ಸಭೆಯಲ್ಲಿ ಸಮಿತಿಯ ಮುಖ್ಯಸ್ಥ ಮಧುಸೂದನ್‌ ಮಿಸ್ತ್ರಿ, ಸದಸ್ಯರಾದ ಗೌರವ್‌ ಗೊಗಾಯ್‌, ಥಾವರ್‌ ಧ್ವಜ್‌ ಸಾಹು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌, ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಭಾಗಿಯಾಗಿದ್ದರು.

- ತಹಶೀಲ್ದಾರ್‌, ಶಾಮನೂರು, ಚಿಮ್ಮನಕಟ್ಟಿ, ರಾಮಕೃಷ್ಣ ಕ್ಷೇತ್ರಗಳು ಬಾಕಿ

- ರಾಹುಲ್‌ ಗಾಂಧಿ ಜೊತೆ ಚರ್ಚಿಸಿ ಈ ನಾಲ್ಕು ಕ್ಷೇತ್ರಗಳ ಟಿಕೆಟ್‌ ಅಂತಿಮ

- ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲಿ ತೀರ್ಮಾನ

- 14ರ ಬಳಿಕ ಮೊದಲ ಪಟ್ಟಿಪ್ರಕಟ? 150 ಅಭ್ಯರ್ಥಿಗಳ ಘೋಷಣೆ ಸಂಭವ

2 ಕಡೆ ಪರಂ ಸ್ಪರ್ಧೆ!

ಎರಡು ಕ್ಷೇತ್ರಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿರುವ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಡಾ ಜಿ.ಪರಮೇಶ್ವರ್‌ ಕೂಡ 2 ಕ್ಷೇತ್ರಗಳಿಂದ ಸ್ಪರ್ಧಿಸಲು ಉತ್ಸುಕರಾಗಿರುವ ವಿಚಾರ ಹೊರಬಿದ್ದಿದೆ. ಕೊರಟಗೆರೆಯಲ್ಲಿ ಸ್ಪರ್ಧಿಸಲಿರುವ ಪರಮೇಶ್ವರ್‌ ಅವರು ಬೆಂಗಳೂರಿನ ಪುಲಕೇಶಿನಗರದ ಟಿಕೆಟ್‌ಗೂ ಬೇಡಿಕೆ ಇಟ್ಟಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. 2 ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ಇರುವ ವಿಚಾರವನ್ನು ಸ್ವತಃ ಪರಮೇಶ್ವರ್‌ ಅವರೇ ಖಚಿತಪಡಿಸಿದ್ದಾರೆ.

ಜೆಡಿಎಸ್ಸಿಂದ ಬಂದ 6 ಜನಕ್ಕೆ ಟಿಕೆಟ್‌ ಪಕ್ಕಾ?

ಜೆಡಿಎಸ್‌ನಿಂದ ಬಂಡಾಯವೆದ್ದು ಕಾಂಗ್ರೆಸ್‌ ಸೇರ್ಪಡೆಯಾಗಿರುವ ಏಳು ಮಂದಿ ಮಾಜಿ ಶಾಸಕರಲ್ಲಿ ಆರು ಮಂದಿಗೆ ಟಿಕೆಟ್‌ ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ. ಆದರೆ, ಪುಲಕೇಶಿ ನಗರ ಕ್ಷೇತ್ರದಿಂದ ಸ್ಪರ್ಧೆ ಬಯಸಿರುವ ಅಖಂಡ ಶ್ರೀನಿವಾಸ್‌ ಮೂರ್ತಿ ಟಿಕೆಟ್‌ ವಿಚಾರದಲ್ಲಿ ಒಂದಷ್ಟುಗೊಂದಲಗಳಿರುವ ಹಿನ್ನೆಲೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಸದ್ಯಕ್ಕೆ ವರಿಷ್ಠರಿಗೆ ಸಾಧ್ಯವಾಗಿಲ್ಲ ಎನ್ನಲಾಗಿದೆ.

loader