ಬೆಂಗಳೂರು [ಜು.12]:  ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ನಡೆಸುತ್ತಿರುವ ಪ್ರತಿಪಕ್ಷ ಬಿಜೆಪಿಗೆ ತಿರುಗೇಟು ನೀಡಿ ಸರ್ಕಾರವನ್ನು ಉಳಿಸಿಕೊಳ್ಳಲು ಮಂತ್ರಿ ಮಂಡಲ ಸಂಕಲ್ಪ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವು ಸಂದಿಗ್ಧ ಪರಿಸ್ಥಿತಿಯಲ್ಲಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಅದರಿಂದ ಪಾರಾಗಲು ಇರುವ ಪರಿಹಾರ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ. ಸರ್ಕಾರ ಉಳಿಸಿಕೊಳ್ಳಲು ಇರುವ ಎಲ್ಲ ವಿಧಾನಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿದರು.

ಬಿಜೆಪಿಯವರು ಮೈತ್ರಿ ಸರ್ಕಾರ ರಚನೆ ಬಳಿಕ ‘ದಾಳಿ’ ನಡೆಸುತ್ತಿರುವುದು ಮೊದಲ ಪ್ರಯತ್ನವಲ್ಲ. 6-7 ಬಾರಿ ಕೇಂದ್ರ ಸರ್ಕಾರವನ್ನು ಉಪಯೋಗ ಮಾಡಿಕೊಂಡು ‘ದಾಳಿ’ ನಡೆಸಿದೆ. ಈ ಹಿಂದೆ ನಡೆದ ‘ದಾಳಿ’ಗಳನ್ನು ಮೆಟ್ಟಿನಿಂತಿದ್ದೇವೆ. ಈಗ ಸ್ಪಲ್ಪ ಕೈ ಮೀರಿದೆ. ಈ ಹಿಂದಿಗಿಂತ ಪರಿಸ್ಥಿತಿ ಗಂಭೀರವಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಸಾಧಕ- ಬಾಧಕಗಳ ಕುರಿತು ಮಾತುಕತೆ ನಡೆಸಲಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರು ಸೇರಿದಂತೆ ಎಲ್ಲರೂ ಸಂಕಲ್ಪ ಮಾಡಿದ್ದು, ಬಿಜೆಪಿಯ ದಾಳಿಯನ್ನು ಧೈರ್ಯವಾಗಿ ಎದುರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಿದರೆ ಅದನ್ನು ಸಮರ್ಥವಾಗಿ ಎದುರಿಸುತ್ತೇವೆ. ಇನ್ನು, ಹಣಕಾಸು ಮಸೂದೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ಮತ ಎಣಿಕೆಗೆ ಆಗ್ರಹಿಸಿದರೂ ಅದಕ್ಕೂ ಸರ್ಕಾರ ಸಿದ್ಧವಿದೆ. ಪ್ರತಿಪಕ್ಷದ ಹಕ್ಕನ್ನು ಸರ್ಕಾರ ಯಾವುದೇ ಕಾರಣಕ್ಕೂ ಉಲ್ಲಂಘನೆ ಮಾಡುವುದಿಲ್ಲ ಎಂದರು.