ಬೆಂಗಳೂರು :  ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಿಂದ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿ ನದಿಗಳು ಅಪಾಯದ ಮಟ್ಟಮೀರಿ ಹರಿಯುತ್ತಿವೆ. ಆದರೆ, ವಿಪರ್ಯಾಸ ಎಂದರೆ, ಮಲೆನಾಡು ಭಾಗದ ಪ್ರಮುಖ ಜಿಲ್ಲೆಗಳು ಸೇರಿದಂತೆ ಹತ್ತು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ. ಇಂದಿಗೂ ಟ್ಯಾಂಕರ್‌ ಮೂಲಕ ನೀರು ಕೊಡುವ ಪರಿಸ್ಥಿತಿ ಇದೆ.

ರಾಜ್ಯದಲ್ಲಿ ಮುಂಗಾರು ಆರಂಭವಾಗಿ ಎರಡು ತಿಂಗಳು ಪೂರೈಸಿದೆ. ಪ್ರಸಕ್ತ ವರ್ಷ ಸರಾಸರಿ ಮಳೆ ಪ್ರಮಾಣಕ್ಕಿಂತ ಉತ್ತಮ ಮಳೆಯಾಗಿದೆ. ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಬವಣೆ ಮಾತ್ರ ತೀರಿಲ್ಲ. ಇಂದಿಗೂ ನೂರಾರು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವ ಪರಿಸ್ಥಿತಿ ಇದೆ. ಮಲೆನಾಡು ಭಾಗದಲ್ಲಿ ಭಾರಿ ಮಳೆಯಾದರೂ ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಇದೆ ಪರಿಸ್ಥಿತಿ ಮುಂದುವರೆದಿರುವುದು ಆತಂಕ ಸೃಷ್ಟಿಮಾಡಿದೆ.

ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಹಾಸನ, ಮಂಡ್ಯ, ದಾವಣಗೆರೆ, ಚಿತ್ರದುರ್ಗ, ವಿಜಯಪುರ, ಕಲಬುರಗಿ, ಬಳ್ಳಾರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತಿದಿನ ಒಟ್ಟು 176 ಟ್ಯಾಂಕರ್‌ ಮೂಲಕ 162 ಗ್ರಾಮಗಳಿಗೆ ಅಗತ್ಯಕ್ಕೆ ಅನುಗುಣವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಆಗಸ್ಟ್‌ 14ರಂದು ಒಟ್ಟು 509 ಟ್ಯಾಂಕ್‌ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೇ 230 ಖಾಸಗಿ ಕೊಳವೆ ಬಾವಿಗಳನ್ನು ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.

ಶೇ.90ರಷ್ಟುಕೆರೆಗಳು ಖಾಲಿ ಖಾಲಿ:

ಈಗಾಗಲೇ ಶೇ.60ರಷ್ಟುಮಾನ್ಸೂನ್‌ ಮುಗಿದಿದ್ದು, ಬಹುತೇಕ ಜಲಾಶಯಗಳು ಅವಧಿಗೂ ಮೊದಲೇ ಭರ್ತಿಯಾಗಿ ಸಾಕಷ್ಟುಪ್ರಮಾಣದ ನೀರನ್ನು ಸಮುದ್ರಕ್ಕೆ ಹರಿಬಿಡಲಾಗುತ್ತಿದೆ. ಕೆರೆಗಳಿಗೆ ಮಾತ್ರ ನೀರು ಬಂದಿಲ್ಲ. ರಾಜ್ಯದಲ್ಲಿರುವ ಕೆರೆಗಳ ಪೈಕಿ ಶೇ.90ರಷ್ಟುಕೆರೆಗಳಿಗೆ ಈವರೆಗೂ ನೀರು ಬಂದಿಲ್ಲ. ಇನ್ನುಳಿದ ಅಲ್ಪಾವಧಿಯಲ್ಲಿ ಉತ್ತಮ ಮಳೆಯಾಗದಿದ್ದರೆ ಬೇಸಿಗೆ ಅವಧಿಯಲ್ಲಿ ನೀರಿನ ಸಮಸ್ಯೆ ಮಾತ್ರ ತಪ್ಪಿದ್ದಲ್ಲ ಎಂಬುದು ತಜ್ಞರ ಅಭಿಪ್ರಾಯ.

ಉತ್ತರ ಒಳನಾಡಿನ ಎಲ್ಲ 11 ಜಿಲ್ಲೆಗಳಲ್ಲೂ ಮಳೆಯ ಕೊರತೆ ಉಂಟಾಗಿದೆ. ಅದರಲ್ಲೂ ರಾಯಚೂರು, ವಿಜಯಪುರ, ಯಾದಗಿರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಕೊರತೆ ಉಂಟಾಗಿದ್ದು, ಬರದ ಆತಂಕ ಎದುರಾಗಿದೆ. ಇನ್ನು ದಕ್ಷಿಣ ಒಳನಾಡಿನ 12 ಜಿಲ್ಲೆಗಳ ಪೈಕಿ ಬಯಲು ಸೀಮೆಯ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಅಲ್ಲದೆ ಬಳ್ಳಾರಿ, ದಾವಣಗೆರೆ ಸೇರಿದಂತೆ ಒಂಬತ್ತು ಜಿಲ್ಲೆಗಳಲ್ಲಿ ಮಳೆಯ ಕೊರತೆಯಾಗಿದೆ. ಆದರೆ, ಇಡೀ ರಾಜ್ಯದ ಸರಾಸರಿ ಗಮನಿಸಿದರೆ ಶೇ.3ರಷ್ಟುಮಳೆ ಪ್ರಮಾಣ ಹೆಚ್ಚಾಗಿದೆ.

16 ಮಿಮೀ ಹೆಚ್ಚು ಮಳೆ

ಪ್ರಸಕ್ತ ವರ್ಷದ ಮಳೆಯ ಪ್ರಮಾಣ ವಾಡಿಕೆಗಿಂತ ಶೇ.3ರಷ್ಟುಹೆಚ್ಚಾಗಿದೆ. 580 ಮಿ.ಮೀ. ವಾಡಿಕೆ ಮಳೆಯ ಪ್ರಮಾಣವಾದರೆ, 596 ಮಿ.ಮೀ. ಮಳೆಯಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಶೇ.5ರಷ್ಟು, ಉತ್ತರ ಒಳನಾಡಿನಲ್ಲಿ ಶೇ.31ರಷ್ಟುಕೊರತೆಯಾಗಿದೆ. ಮಲೆನಾಡಿನಲ್ಲಿ ವಾಡಿಕೆಗಿಂತ ಶೇ.28ರಷ್ಟುಕರಾವಳಿಯಲ್ಲಿ ಶೇ.6ರಷ್ಟುಹೆಚ್ಚಿನ ಮಳೆಯಾಗಿದೆ.

ಟ್ಯಾಂಕರ್‌, ಖಾಸಗಿ ಬೋರ್ವೆಲ್‌ ವಿವರ

ಜಿಲ್ಲೆ    ಗ್ರಾಮ    ಟ್ಯಾಂಕರ್‌    ಕೊಳವೆ ಬಾವಿ

ಬೆಂಗಳೂರು ನಗರ    6    6    0

ಚಿಕ್ಕಬಳ್ಳಾಪುರ    24    24    30

ಹಾಸನ    7    7    35

ಮಂಡ್ಯ    6    6    10

ದಾವಣಗೆರೆ    49    14    48

ಚಿತ್ರದುರ್ಗ    16    11    7

ವಿಜಯಪುರ    38    92    2

ಕಲಬುರಗಿ    1    1    2

ಬಳ್ಳಾರಿ    3    3    96

ಚಿಕ್ಕಮಗಳೂರು    12    12    0

ಒಟ್ಟು    162    176    230

ರಾಜ್ಯದ ಕರಾವಳಿ, ಮಲೆನಾಡು ಬಿಟ್ಟರೆ ಉಳಿದ ಭಾಗದಲ್ಲಿ ಮಳೆಯ ಕೊರತೆ ಉಂಟಾಗಿದ್ದು, ಕೆರೆ ಕುಂಟೆಗಳಲ್ಲಿ ನೀರಿಲ್ಲ. ಇಡೀ ದೇಶದಲ್ಲಿ ಶೇ.10ರಷ್ಟುಮಳೆ ಕೊರತೆ ಎದುರಿಸಲಾಗುತ್ತಿದೆ. ಇನ್ನುಳಿದ ಅವಧಿಯಲ್ಲಿ ಉತ್ತಮ ಮಳೆಯಾದರೆ ಮಾತ್ರ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲು ಸಾಧ್ಯ.

- ಪ್ರಕಾಶ್‌, ನಿವೃತ್ತ ನಿರ್ದೇಶಕರು, ಹವಾಮಾನ ಇಲಾಖೆ

ಅಂತರ್‌ಜಲ ಕೊರತೆ ಹಾಗೂ ಮಳೆ ಕೊರತೆ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಟ್ಯಾಂಕರ್‌ ಹಾಗೂ ಖಾಸಗಿ ಕೊಳವೆ ಬಾವಿ ಮೂಲಕವೇ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಅಗತ್ಯಕ್ಕೆ ಅನುಗುಣವಾಗಿ ಹೆಚ್ಚು-ಕಡಿಮೆ ಮಾಡಲಾಗುವುದು.

- ಡಾ.ಜಿ.ಎಸ್‌.ಶ್ರೀನಿವಾಸ್‌ ರೆಡ್ಡಿ, ನಿರ್ದೇಶಕರು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ