* ನಾರಾಯಣಗೌಡರ ಪ್ರಚೋದನೆಯಿಂದ ಮೆಟ್ರೋ ನಿಲ್ದಾಣದಲ್ಲಿ ಮಸಿ ಬಳಿಯಲಾಗಿದೆ: ಡಿಸಿಪಿ ಅನುಚೇತ್* ನಾರಾಯಣಗೌಡರ ವಿರುದ್ಧ ಕಲಾಸಿಪಾಳ್ಯ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲು* ಕನ್ನಡ ಸಂಘಟನೆಗಳನ್ನು ಹತ್ತಿಕ್ಕಲು ಸುಳ್ಳು ಮೊಕದ್ದಮೆ ಹಾಕಲಾಗುತ್ತಿದೆ: ಕರವೇ ಆರೋಪ

ಬೆಂಗಳೂರು(ಜುಲೈ 22): ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಭಾಷೆಯ ಫಲಕಗಳಿಗೆ ಮಸಿ ಬಳಿಕ ಪ್ರಕರಣ ಸಂಬಂಧಿಸಿದಂತೆ ಕರವೇ ಅಧ್ಯಕ್ಷ ನಾರಾಯಣಗೌಡ ವಿರುದ್ಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಿಸಲಾಗಿದೆ. ನಾರಾಯಣಗೌಡ ಅವರ ಪ್ರಚೋದನೆಯಿಂದ ಈ ಘಟನೆ ನಡೆದಿದ್ದರಿಂದ ಎಫ್ಐಆರ್ ದಾಖಲಿಸಲಾಗಿದೆ ಎಂದು ಪಶ್ಚಿಮ ವಲಯ ಡಿಸಿಪಿ ಅನುಚೇತ್ ಹೇಳಿದ್ದಾರೆ.

ಇದೇ ವೇಳೆ, ನಾರಾಯಣ ಗೌಡ ಅವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ಎಫ್'ಐಆರ್'ನಲ್ಲಿ ದೂರಿದ್ದಾರೆಂಬ ಸುದ್ದಿ ದಟ್ಟವಾಗಿ ಹಬ್ಬುತ್ತಿದೆ. ಆದರೆ, ನಾರಾಯಣಗೌಡರು ಪರಾರಿಯಾಗಿದ್ದಾರೆಂದು ತಿಳಿಸಿಲ್ಲ. ಅವರನ್ನು ಇನ್ನೂ ಬಂಧಿಸಿಲ್ಲವೆಂದಷ್ಟೇ ಎಫ್'ಐಆರ್'ನಲ್ಲಿ ತಿಳಿಸಿದ್ದೇವೆ ಎಂದು ಅನುಚೇತ್ ಸ್ಪಷ್ಟಪಡಿಸಿದ್ದಾರೆ.

ಅನ್ಯರಾಜ್ಯದ ಅಧಿಕಾರಿಗಳದ್ದೇ ಕಿತಾಪತಿ?
ಕನ್ನಡ ಸಂಘಟನೆಗಳ ಅದರಲ್ಲೂ ಕರವೇ ಸಂಘಟನೆಯ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಕರವೇ ಮುಖ್ಯಸ್ಥ ನಾರಾಯಣ ಗೌಡ ಹೇಳಿದ್ದಾರೆ. ಸುವರ್ಣನ್ಯೂಸ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ಗೌಡರು, "ಹೊರಗಿನ ರಾಜ್ಯದಿಂದ ಬಂದ ಪೊಲೀಸ್ ಅಧಿಕಾರಿಗಳು ಕನ್ನಡಿಗರ ಹೋರಾಟವನ್ನು ಧಮನ ಮಾಡಲು ಯತ್ನಿಸುತ್ತಿದ್ದಾರೆ. ಕನ್ನಡ ಕಾರ್ಯಕರ್ತರ ಮೇಲೆ ಸುಮ್ಮಸುಮ್ಮನೆ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸುವ ಮೂಲಕ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊರಗಿನ ಹಿರಿಯ ಪೊಲೀಸ್ ಅಧಿಕಾರಿಗಳ ಧೋರಣೆಯಿಂದ ರಾಜ್ಯದ ಪೊಲೀಸರು ಅಸಮಾಧಾನಗೊಂಡಿರುವುದು ತನಗೆ ತಿಳಿದಿದೆ. ಯಾರು ಏನೇ ಮಾಡಿದರೂ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟ ನಿಲ್ಲೋದಿಲ್ಲ. ರಾಜ್ಯಾದ್ಯಂತ ಕಾರ್ಯಕರ್ತರನ್ನು ಬೆಂಗಳೂರಿಗೆ ಕರೆಸಿ ಸಭೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದೂ ನಾರಾಯಣಗೌಡರು ಈ ವೇಳೆ ಶಪಥ ಮಾಡಿದ್ದಾರೆ.