Asianet Suvarna News Asianet Suvarna News

ಬಡ್ತಿ ಮೀಸಲು: ವಿವರಕ್ಕೆ ಮೇ 1 ಗಡುವು ನೀಡಿದ ಸುಪ್ರೀಂಕೋರ್ಟ್

ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ಯೋಗಿಗಳಿಗೆ ಬಡ್ತಿಯಲ್ಲಿ ನೀಡಿರುವ ಮೀಸಲಾತಿ ರದ್ದುಗೊಳಿಸಿ ತಾನು ನೀಡಿರುವ ಆದೇಶದ ಸಮರ್ಪಕ ಜಾರಿಯ ಸಮಗ್ರ ಪ್ರಮಾಣ ಪತ್ರವನ್ನು ಮೇ 1ರೊಳಗೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಕ್ಕೆ ಬುಧವಾರ ತಾಕೀತು ಮಾಡಿದೆ.

Karanataka quota in promotions: Supreme Court sets deadline

ನವದೆಹಲಿ : ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ಯೋಗಿಗಳಿಗೆ ಬಡ್ತಿಯಲ್ಲಿ ನೀಡಿರುವ ಮೀಸಲಾತಿ ರದ್ದುಗೊಳಿಸಿ ತಾನು ನೀಡಿರುವ ಆದೇಶದ ಸಮರ್ಪಕ ಜಾರಿಯ ಸಮಗ್ರ ಪ್ರಮಾಣ ಪತ್ರವನ್ನು ಮೇ 1ರೊಳಗೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಕ್ಕೆ ಬುಧವಾರ ತಾಕೀತು ಮಾಡಿದೆ. ಅಷ್ಟೇ ಅಲ್ಲದೆ, ಚುನಾವಣಾ ನೀತಿ ಸಂಹಿತೆ ತಮ್ಮ ತೀರ್ಪು ಜಾರಿಗೆ ಅನ್ವಯಿಸುವುದಿಲ್ಲ ಎಂಬ ಸ್ಪಷ್ಟನೆಯನ್ನೂ ನ್ಯಾಯಾಲಯ ನೀಡಿದೆ.

ಬಡ್ತಿಯಲ್ಲಿ ಮೀಸಲಾತಿ ರದ್ದಾಗಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ಹಿಂಬಡ್ತಿ, ಮುಂಬಡ್ತಿ ಮತ್ತು ಜೇಷ್ಠತಾ ಪಟ್ಟಿತಯಾರಿಸಿ ಒಂದು ತಿಂಗಳೊಳಗೆ ಪ್ರಮಾಣ ಪತ್ರ ಸಲ್ಲಿಸಬೇಕು, ಇಲ್ಲದೆ ಹೋದಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಏ.25ರ ವಿಚಾರಣೆ ಸಂದರ್ಭದಲ್ಲಿ ಹಾಜರಿರಬೇಕು ಎಂದು ಸುಪ್ರೀಂ ಕೋರ್ಟ್‌ ಮಾ.20 ರಂದು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿ ಮುಖ್ಯ ಕಾರ್ಯದರ್ಶಿಗಳನ್ನು ನ್ಯಾಯಾಂಗ ನಿಂದನೆಯ ತೂಗುಗತ್ತಿಯಿಂದ ಪಾರು ಮಾಡಲು ಯತ್ನಿಸಿದೆ.

ಆದರೆ ರಾಜ್ಯದ ಪ್ರಮಾಣ ಪತ್ರ ಸುಪ್ರೀಂ ಕೋರ್ಟ್‌ಗೆ ತೃಪ್ತಿ ತಂದಿಲ್ಲ. ನ್ಯಾ. ಎ.ಕೆ. ಗೋಯಲ್ ಮತ್ತು ನ್ಯಾ.ಯು.ಯು.ಲಲಿತ್‌ ಅವರ ನ್ಯಾಯಪೀಠ, ಸಮಗ್ರ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಹಿಂಬಡ್ತಿಗೆ ಒಳಗಾಗುವವರು, ಮುಂಬಡ್ತಿ ಪಡೆಯುವವರು ಮತ್ತು ಪರಿಷ್ಕೃತ ಜೇಷ್ಠತಾ ಪಟ್ಟಿಇವೆಲ್ಲ ಅಂಶಗಳನ್ನು ಒಳಗೊಂಡಿರುವ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ತಮ್ಮ ಆದೇಶದ ಅನುಷ್ಠಾನ ಪ್ರಕ್ರಿಯೆಯಲ್ಲಿ ಸ್ಥಾನ ಪಲ್ಲಟಗೊಳ್ಳುವ ನೌಕರರು ಸಲ್ಲಿಸುವ ದೂರುಗಳನ್ನು ಆಧರಿಸಿ ಬಡ್ತಿ ಪ್ರಕ್ರಿಯೆಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ)ಮತ್ತು ರಾಜ್ಯ ಉಚ್ಚ ನ್ಯಾಯಾಲಯ ತಡೆ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಮೀಸಲಾತಿ ಆಧಾರದಲ್ಲಿ ಬಡ್ತಿ ನೀಡುವುದನ್ನು ವಿರೋಧಿಸಿದ್ದ ಕಕ್ಷಿದಾರರ ಪರ ವಕೀಲರು, ಕರ್ನಾಟಕ ಸರ್ಕಾರ ಸಮರ್ಪಕ ರೀತಿಯಲ್ಲಿ ನ್ಯಾಯಾಲಯದ ಆದೇಶ ಪಾಲಿಸುತ್ತಿಲ್ಲ. ಸರ್ಕಾರ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸ್ಪಷ್ಟಮತ್ತು ನಿಖರ ಮಾಹಿತಿಯಿಲ್ಲ. ಯಾವೆಲ್ಲ ಇಲಾಖೆಯಲ್ಲಿ ಏನೆಲ್ಲ ಆಗಿದೆ, ಸುಪ್ರೀಂ ಕೋರ್ಟ್‌ನ ಆದೇಶ ಎಷ್ಟರ ಮಟ್ಟಿಗೆ ಜಾರಿಯಾಗಿದೆ ಎಂಬ ಉಲ್ಲೇಖವೇ ಇಲ್ಲ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಹಾಗೆಯೇ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ತಮ್ಮ ಹಿಂಬಡ್ತಿಗೆ ತಡೆ ನೀಡುವಂತೆ ಹೈ ಕೋರ್ಟ್‌, ಕೆಎಟಿಯಲ್ಲಿ 500ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಸುಪ್ರೀಂ ಕೋರ್ಟ್‌ನಲ್ಲಿ ಈಗಾಗಲೇ 7 ಮೇಲ್ಮನವಿಗಳು ದಾಖಲಾಗಿವೆ. ಪ್ರತಿದಿನ ಮೇಲ್ಮನವಿ ದಾಖಲಾಗುತ್ತಿದೆ ಎಂಬ ಅಂಶವನ್ನು ದೂರುದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

ರಾಜ್ಯ ಸರ್ಕಾರದ ಪರ ವಾದಿಸಿದ ಹಿರಿಯ ವಕೀಲ ಬಸವ ಪ್ರಭು ಪಾಟೀಲ…, ಹಿಂಬಡ್ತಿ ಪ್ರಕ್ರಿಯೆ ಸಂಪೂರ್ಣವಾಗಿದೆ. ಆದರೆ ಮುಂಬಡ್ತಿ ಪ್ರಕ್ರಿಯೆಯಲ್ಲಿ ತುಸು ಗೊಂದಲಗಳಾಗಿವೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸಮಸ್ಯೆಗಳಾಗಿವೆ ಎಂದು ವಾದಿಸಿದರು.

ರಾಜ್ಯದ ಪ್ರಮಾಣ ಪತ್ರದಲ್ಲಿ ಸ್ಪಷ್ಟತೆ ಇಲ್ಲ. ನಮ್ಮ ಆದೇಶದ ಪರಿಣಾಮ ಮೂರು ಆಯಾಮಗಳಲ್ಲಿ ಆಗುತ್ತದೆ. ಮೊದಲನೆಯದಾಗಿ ಜೇಷ್ಠತಾ ಪಟ್ಟಿಯಲ್ಲಿನ ಪರಿಷ್ಕರಣೆ, ಎರಡನೆಯದಾಗಿ ಹಿಂಬಡ್ತಿ ಮತ್ತು ಮೂರನೆಯದಾಗಿ ಮುಂಬಡ್ತಿ ಆಗುತ್ತದೆ. ಆದರೆ ನೀವು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಈ ಬಗೆಗಿನ ವಿವರಗಳಿಲ್ಲ ಎಂದು ನ್ಯಾ

ಲಲಿತ್‌ ಹೇಳಿದರು.

ಸಮಗ್ರ ವಿವರಗಳಿರುವ ಪ್ರಮಾಣ ಪತ್ರವನ್ನು ಮೇ 1 ರೊಳಗೆ ಸಲ್ಲಿಸಿ, ನೀತಿ ಸಂಹಿತೆ ಈ ಪ್ರಕ್ರಿಯೆಗೆ ಅನ್ವಯಿಸುವುದಿಲ್ಲ. ಹಾಗೆಯೇ ಉಚ್ಚ ನ್ಯಾಯಾಲಯವಾಗಲಿ, ಕೆಎಟಿಯಾಗಲಿ ಬಡ್ತಿ ಪ್ರಕ್ರಿಯೆಗೆ ತಡೆ ನೀಡುವಂತಿಲ್ಲ ಎಂದು ಆದೇಶಿಸಿದ ನ್ಯಾಯಾಲಯ ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 9 ಕ್ಕೆ ನಿಗದಿ ಪಡಿಸಿದೆ.

2017ರ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌, ‘ಬಡ್ತಿ ಮೀಸಲಾತಿ ಕಾಯ್ದೆ-2002’ ಅನ್ನು ರದ್ದುಪಡಿಸಿ ತೀರ್ಪು ನೀಡಿತ್ತು. ಮೂರು ತಿಂಗಳೊಳಗೆ ಹೊಸ ಜೇಷ್ಠತಾ ಪಟ್ಟಿರಚಿಸಬೇಕು ಎಂದು ಆದೇಶಿಸಿತ್ತು. ಆದರೆ ರಾಜ್ಯ ಸರ್ಕಾರ ಈ ಆದೇಶದ ಪಾಲನೆ ಮಾಡಿರಲಿಲ್ಲ. ಈ ಆದೇಶ ಪಾಲನೆಗೆ ಹಿಂದೇಟು ಹಾಕಿದ ರಾಜ್ಯ ವಿವಿಧ ಸಬೂಬುಗಳನ್ನು ನೀಡುತ್ತ ಬಂದಿತ್ತು.

ಆದರೆ ತಾನು ನೀಡಿದ ಆದೇಶ ಒಂದು ತಿಂಗಳೊಳಗೆ ಜಾರಿಯಾಗದೆ ಹೋದರೆ ಮುಖ್ಯ ಕಾರ್ಯದರ್ಶಿಗಳು ಮುಂದಿನ ವಿಚಾರಣೆಯಲ್ಲಿ ಹಾಜರಿರಬೇಕು ಎಂದು ಮಾ.20ರಂದು ಖಡಕ್‌ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೌಕರರ ಸ್ಥಾನ ಪಲ್ಲಟದ ಕಸರತ್ತಿಗೆ ಕೈ ಹಾಕಲೇ ಬೇಕಾಯಿತು. ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಸುಮಾರು 20,000 ಪರಿಶಿಷ್ಟವರ್ಗದ ನೌಕರರು ಹಿಂಬಡ್ತಿಗೆ ಒಳಗಾಗಬಹುದು ಎಂದು ಅಂದಾಜಿಸಲಾಗಿದೆ.

Follow Us:
Download App:
  • android
  • ios