ಆಮ್ ಆದ್ಮಿ ತೊರೆದು ಬಿಜೆಪಿ ಸೇರುವ ಸಾಧ್ಯತೆಯನ್ನು ಕಪಿಲ್ ಮಿಶ್ರಾ ತಳ್ಳಿಹಾಕಿದ್ದಾರೆ. ತಾನು ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಸದಸ್ಯನಾಗಿದ್ದು, ಆ ಪಕ್ಷದಲ್ಲೇ ಉಳಿಯುತ್ತೇನೆ ಎಂದು ಸ್ಪಷ್ಟಪಡಿಸಿ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ, ಹಗರಣದಲ್ಲಿ ಆಮ್ ಆದ್ಮಿ ಮುಖಂಡರು ಶಾಮೀಲಾಗಿರುವ ಕುರಿತು ಸ್ಪಷ್ಟನೆ ನೀಡಿರುವ ಕಪಿಲ್ ಮಿಶ್ರಾ, "ಆತ(ಕೇಜ್ರಿವಾಲ್) ಅಕ್ರಮ ಹಣವನ್ನು ತೆಗೆದುಕೊಳ್ಳುವುದನ್ನು ನಾನು ಕಂಡಿದ್ದೇನೆ. ಎಲ್ಲಾ ವಿವರಗಳನ್ನು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್'ಗೆ ನೀಡಿದ್ದೇನೆ," ಎಂದೂ ಟ್ವೀಟ್ ಮಾಡಿದ್ದಾರೆ.
ನವದೆಹಲಿ(ಮೇ 07): ದಿಲ್ಲಿ ಸರಕಾರದ ಸಂಪುಟದಿಂದ ವಜಾಗೊಂಡಿದ್ದ ಕಪಿಲ್ ಮಿಶ್ರಾ ಇಂದು ಸಿಎಂ ಕೇಜ್ರಿವಾಲ್ ವಿರುದ್ಧ ಬಾಂಬ್ ಸಿಡಿಸಿದ್ದಾರೆ. ಕೇಜ್ರಿವಾಲ್ 2 ಕೋಟಿ ರೂ ಲಂಚ ಪಡೆದಿದ್ದಾರೆ ಮಿಶ್ರಾ ಆರೋಪಿಸಿದ್ಧಾರೆ. "ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರಿಂದ ಕೇಜ್ರಿವಾಲ್ 2 ಕೋಟಿ ರೂ ಲಂಚ ಪಡೆದಿದ್ದನ್ನು ತಾನು ಕಣ್ಣಾರೆ ನೋಡಿದೆ" ಎಂಬುದಾಗಿ ಕಪಿಲ್ ಮಿಶ್ರಾ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧ ಭ್ರಷ್ಟಾಚಾರ ನಿಗ್ರಹ ಪಡೆ ಎಸಿಬಿಗೆ ತಾನು ದೂರು ನೀಡಿದ್ದರಿಂದ ಕೇಜ್ರಿವಾಲ್ ಅವರು ತನ್ನನ್ನು ಸಂಪುಟದಿಂದ ವಜಾ ಮಾಡಿದ್ದಾರೆ ಎಂದೂ ಕಪಿಲ್ ಮಿಶ್ರಾ ಆರೋಪಿಸಿದ್ದಾರೆ.
ಇನ್ನು, ಆಮ್ ಆದ್ಮಿ ತೊರೆದು ಬಿಜೆಪಿ ಸೇರುವ ಸಾಧ್ಯತೆಯನ್ನು ಕಪಿಲ್ ಮಿಶ್ರಾ ತಳ್ಳಿಹಾಕಿದ್ದಾರೆ. ತಾನು ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಸದಸ್ಯನಾಗಿದ್ದು, ಆ ಪಕ್ಷದಲ್ಲೇ ಉಳಿಯುತ್ತೇನೆ ಎಂದು ಸ್ಪಷ್ಟಪಡಿಸಿ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ, ಹಗರಣದಲ್ಲಿ ಆಮ್ ಆದ್ಮಿ ಮುಖಂಡರು ಶಾಮೀಲಾಗಿರುವ ಕುರಿತು ಸ್ಪಷ್ಟನೆ ನೀಡಿರುವ ಕಪಿಲ್ ಮಿಶ್ರಾ, "ಆತ(ಕೇಜ್ರಿವಾಲ್) ಅಕ್ರಮ ಹಣವನ್ನು ತೆಗೆದುಕೊಳ್ಳುವುದನ್ನು ನಾನು ಕಂಡಿದ್ದೇನೆ. ಎಲ್ಲಾ ವಿವರಗಳನ್ನು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್'ಗೆ ನೀಡಿದ್ದೇನೆ," ಎಂದೂ ಟ್ವೀಟ್ ಮಾಡಿದ್ದಾರೆ.
ಸಚಿವ ಸ್ಥಾನದಿಂದ ಉಚ್ಛಾಟನೆ:
ಹಿರಿಯ ನಾಯಕ ಕುಮಾರ್ ವಿಶ್ವಾಸ್ ಅವರ ಜತೆಗೂಡಿ ಆಪ್ ನಾಯಕತ್ವದ ವಿರುದ್ಧವೇ ಸಡ್ಡು ಹೊಡೆದಿದ್ದ ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರಾ ಅವರನ್ನು ಕೇಜ್ರಿವಾಲ್ ನಿನ್ನೆ ಸಚಿವ ಸ್ಥಾನದಿಂದ ವಜಾಗೊಳಿಸಿದರು. ಅಲ್ಲದೆ, ಸೀಮಪುರಿ ಶಾಸಕ ರಾಜೇಂದ್ರ ಪಾಲ್ ಗೌತಮ್ ಮತ್ತು ನಜಾಫ್‌ಗಢದ ಶಾಸಕ ಕೈಲಾಶ್ ಗೆಹ್ಲೋಟ್ ಅವರು ನೂತನವಾಗಿ ಕೇಜ್ರಿವಾಲ್ ಸಂಪುಟಕ್ಕೆ ಸೇರ್ಪಡೆ ಆದರು.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಸಚಿವ ಮಿಶ್ರಾರನ್ನು ವಜಾ ಮಾಡಲಾಯಿತು. ಸಚಿವ ಮಿಶ್ರಾ ಹೆಚ್ಚುವರಿ ಮೌಲ್ಯದ ಬಿಲ್'ಗಳನ್ನು ಸಲ್ಲಿಸಿದ್ದಾರೆ ಎಂಬ ಆರೋಪ ಬಯಲಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಮಂತ್ರಿ ಸ್ಥಾನದಿಂದ ವಜಾ ಮಾಡುತ್ತಿದ್ದಂತೆ ಕ್ರೋಧಗೊಂಡ ಆಪ್ ಶಾಸಕ ಮಿಶ್ರಾ, ಹಗರಣದಲ್ಲಿ ತೊಡಗಿದ ಕೆಲ ಆಪ್ ನಾಯಕರ ಬಣ್ಣ ಬಯಲು ಮಾಡುತ್ತೇನೆ ಎಂದು ನಿನ್ನೆ ಗುಡುಗಿದ್ದರು. "ನನ್ನ ವಜಾ ಮಾಡಿರುವ ನಿರ್ಧಾರವನ್ನು ಕ್ಯಾಬಿನೆಟ್ ಅಥವಾ ರಾಜಕೀಯ ವ್ಯವಹಾರಗಳ ಸಮಿತಿ ಕೈಗೊಂಡಿರಲಾರದು. ಇದು ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಏಕಪಕ್ಷೀಯ ನಿರ್ಧಾರವಾಗಿದೆ ಎಂಬುದು ನನ್ನ ಅಭಿಪ್ರಾಯ," ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದರು.
