ಭಾರತೀಯ ಕ್ರಿಕೆಟರಿಗಾಗಿ ಸ್ವಂತ ವಿಮಾನವೊಂದನ್ನು ಖರೀದಿಸುವಂತೆ ಮಾಜಿ ಕ್ರಿಕೆಟ್ ಕಪ್ತಾನ ಕಪಿಲ್ ದೇವ್ ಬಿಸಿಸಿಐಗೆ ಸಲಹೆ ನೀಡಿದ್ದಾರೆ. ಸ್ವಂತ ವಿಮಾನ ಹೊಂದುವುದರಿಂದ ಪ್ರಯಾಣದ ಸಮಯವನ್ನು ಉಳಿಸಬಹುದಲ್ಲದೇ, ಕ್ರಿಕೆಟರಿಗಾಗುವ ಯಾಸವನ್ನು ತಪ್ಪಿಸಬಹುದು ಎಂದು ಅವರು ಹೇಳಿದ್ದಾರೆ.
ಮುಂಬೈ: ಭಾರತೀಯ ಕ್ರಿಕೆಟರಿಗಾಗಿ ಸ್ವಂತ ವಿಮಾನವೊಂದನ್ನು ಖರೀದಿಸುವಂತೆ ಮಾಜಿ ಕ್ರಿಕೆಟ್ ಕಪ್ತಾನ ಕಪಿಲ್ ದೇವ್ ಬಿಸಿಸಿಐಗೆ ಸಲಹೆ ನೀಡಿದ್ದಾರೆ.
ಸ್ವಂತ ವಿಮಾನ ಹೊಂದುವುದರಿಂದ ಪ್ರಯಾಣದ ಸಮಯವನ್ನು ಉಳಿಸಬಹುದಲ್ಲದೇ, ಕ್ರಿಕೆಟರಿಗಾಗುವ ಆಯಾಸವನ್ನು ತಪ್ಪಿಸಬಹುದು ಎಂದು ಅವರು ಹೇಳಿದ್ದಾರೆ.
ಬಿಸಿಸಿಯ ಬಳಿ ಈಗ ಸಾಕಷ್ಟು ಹಣವಿದೆ. ಅದು ಸ್ವಂತ ವಿಮಾನವನ್ನೇ ಖರಿದಿಸಬಹುದು. ಅದು ಸಮಯವನ್ನು ಉಳಿಸುವುದಲ್ಲದೇ, ಕ್ರಿಕೆಟಿಗರಿಗೂ ಅನುಕೂಲವಾಗುತ್ತದೆ. ಪಂದ್ಯಗಳ ನಡುವೆ ವಿರಾಮಕ್ಕೆ ಸಾಕಷ್ಟು ಸಮಯ ಕೂಡಾ ಸಿಗುತ್ತದೆ ಎಂದು ಕಪಿಲ್ ದೇವ್ ಹೇಳಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಪಾರ್ಕಿಂಗ್ ಶುಲ್ಕವನ್ನು ಕೂಡಾ ಬಿಸಿಸಿಐ ಸುಲಭವಾಗಿ ಭರಿಸಬಹುದು. ಬಿಸಿಸಿಐ ಐದು ವರ್ಷಗಳ ಹಿಂದೆಯೇ ವಿಮಾನವನ್ನು ಖರೀದಿಸಬೇಕಿತ್ತು ಎಂದು ಅವರು ಹೇಳಿದ್ದಾರೆ.
ಅಮೆರಿಕಾದ ಟಾಪ್ ಗಾಲ್ಫ್ ಆಟಗಾರರು ಈಗಾಗಲೇ ತಮ್ಮ ಖಾಸಗಿ ವಿಮಾನವನ್ನು ಹೊಂದಿದ್ದಾರೆ. ನಮ್ಮ ಕ್ರಿಕೆಟಿಗರು ಕೂಡಾ ಮುಂದಿನ ದಿನಗಳಲ್ಲಿ ಅದೇ ರೀತಿ ಖಾಸಗಿ ವಿಮಾನಗಳನ್ನು ಹೊಂದುವುದನ್ನು ನೋಡಬಯಸುತ್ತೇನೆ, ಎಂದು ಅವರು ಹೇಳಿದ್ದಾರೆ.
ಸುಮಾರು ಮೂರು ವರ್ಷಗಳ ಹಿಂದೆಯೂ ಕೂಡಾ ಕಪಿಲ್ ಇಂತಹದ್ದೇ ಒಂದು ಸಲಹೆಯನ್ನು ನೀಡಿದ್ದರು. ದೊಡ್ಡ ದೊಡ್ಡ ನಗರಗಳಲ್ಲಿ ಬಿಸಿಸಿಐ ತನ್ನದೇ ಗೆಸ್ಟ್ ಹೌಸ್’ಗಳನ್ನು ನಿರ್ಮಿಸಿದರೆ, ಹೋಟೆಲ್ ಖರ್ಚುಗಳನ್ನು ಕಡಿಮೆ ಮಾಡಬಹುದೆಂದು ಅವರು ಹೇಳಿದ್ದರು.
