ಟಿಕೆಟ್‌ ಪಡೆದೇ ಪ್ರಯಾಣಿಸುವ ಪ್ರಜ್ಞೆ ಈ ಭಾಗದ ಜನರಲ್ಲಿದ್ದು, ಅತಿ ಕಡಿಮೆ ಟಿಕೆಟ್‌ ರಹಿತ ಪ್ರಯಾಣ ಸಾಧ್ಯವಾಗಿದೆ.ಇ.ವಿಜಯಾ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ
ರೈಲಿನಲ್ಲಿ ಟಿಕೆಟ್ ಖರೀದಿಸಿಯೇ ಪ್ರಯಾಣ ಮಾಡುವುದರಲ್ಲಿ ಕನ್ನಡಿಗರು ದೇಶದಲ್ಲೇ ಮಾದರಿ. ಕರ್ನಾಟಕ ಹಾಗೂ ಗೋವಾ ರಾಜ್ಯವನ್ನು ಒಳಗೊಂಡ ನೈಋುತ್ಯ ರೈಲ್ವೆ ವಲಯ ಇಡೀ ದೇಶದಲ್ಲೇ ಟಿಕೆಟ್ ಪಡೆದು ಪ್ರಯಾಣಿಸಿದ ವಿಚಾರದಲ್ಲಿ ಉತ್ಕೃಷ್ಟಸಾಧನೆ ಮಾಡಿದೆ. ಕಳೆದ ಮೂರು ವರ್ಷಗಳಲ್ಲಿ ಅತಿ ಕಡಿಮೆ ಟಿಕೆಟ್ ರಹಿತ ಪ್ರಯಾಣ ಮಾಡಿದ ಪಟ್ಟಿಯಲ್ಲಿ ನೈಋುತ್ಯ ರೈಲ್ವೆ ಅಗ್ರಪಂಕ್ತಿಯಲ್ಲಿದೆ. ಹೀಗಾಗಿ ಅತಿ ಹೆಚ್ಚು ಕನ್ನಡಿಗ ಪ್ರಯಾಣಿಕರು ಬಳಸುವ ನೈಋುತ್ಯ ರೈಲ್ವೆ ಪ್ರಾಮಾಣಿಕ ಪ್ರಯಾಣಕ್ಕೆ ಹೆಸರಾಗಿದೆ.
ಇದೇ ವೇಳೆ ದೆಹಲಿಯನ್ನು ಕೇಂದ್ರ ಸ್ಥಾನ ಹೊಂದಿರುವ ಉತ್ತರ ರೈಲ್ವೆ ದೇಶದಲ್ಲಿ ಅತಿ ಹೆಚ್ಚು ಟಿಕೆಟ್ ಇಲ್ಲದೇ ಪ್ರಯಾಣ ಮಾಡಿದ ಕುಖ್ಯಾತಿಗೆ ಭಾಜನವಾಗಿದೆ. ವಿಷಯ ಭಾರತೀಯ ರೈಲ್ವೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.

ಭಾರತೀಯ ರೈಲ್ವೆ ಒಟ್ಟು 16 ವಲಯಗಳನ್ನು ಒಳಗೊಂಡಿದೆ. ಆ ಪೈಕಿ ನೈಋುತ್ಯ ರೈಲ್ವೆಯು ಕರ್ನಾಟಕ ಮತ್ತು ಗೋವಾ ರಾಜ್ಯವನ್ನು ಸಂಪೂರ್ಣ ಒಳಗೊಂಡಿದ್ದರೆ, ಆಂಧ್ರಪ್ರದೇಶದ ಧರ್ಮಪುರಿ ಜಿಲ್ಲೆ ಮತ್ತು ತಮಿಳುನಾಡಿನ ಹೊಸೂರು ತಾಲೂಕನ್ನು ಕೂಡ ಸೇರಿಸಿಕೊಂಡಿದೆ. ಈ ಪೈಕಿ ಶೇ.85ರಷ್ಟುಪ್ರದೇಶ ಕರ್ನಾಟಕದಲ್ಲಿದೆ. ರೈಲ್ವೆ ಇಲಾಖೆಯ ಸಂಚಾರ ವಿಚಕ್ಷಣ ದಳವು ಕಾಯ್ದಿರಿಸಿದ ಬೋಗಿಗಳನ್ನು ಹೊರತುಪಡಿಸಿ, ಸಾಮಾನ್ಯ ಪ್ರಯಾಣದ ಬೋಗಿಗಳಲ್ಲಿ ನಿರಂತರ ಟಿಕೆಟ್ ತಪಾಸಣೆ ನಡೆಸುತ್ತದೆ. ಇದು ದೇಶದ ಎಲ್ಲ ರೈಲ್ವೆ ವಲಯಗಳಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ. ಅಂತಹ ಸಂದರ್ಭದಲ್ಲಿ ಟಿಕೆಟ್ ರಹಿತ ಪ್ರಯಾಣ ಕಂಡು ಬಂದರೆ ಹಂತಗಳ (ಸ್ಟೇಜ್) ಆಧಾರದ ಮೇಲೆ ಟಿಕೆಟ್ ರಹಿತ ಪ್ರಯಾಣಿಕರಿಗೆ ನಿಯಮಾನುಸಾರ ದಂಡ ವಿಧಿಸಲಾಗುತ್ತದೆ.
ಸರಾಸರಿ 4 ಲಕ್ಷ ಟಿಕೆಟ್ ರಹಿತರು: ನೈಋುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ 2013ರಿಂದ 2017ರ ಮಾಚ್ರ್ವರೆಗೆ ವಾರ್ಷಿಕ ಸರಾಸರಿ 4 ಲಕ್ಷ ಟಿಕೆಟ್ ರಹಿತ ಪ್ರಯಾಣಿಕರು ಪತ್ತೆಯಾಗಿದ್ದಾರೆ. ಅಂತಹ ಪ್ರಯಾಣಿಕರಿಂದ ವಾರ್ಷಿಕ ಸರಾಸರಿ 22 ಕೋಟಿ ರು. ದಂಡ ವಸೂಲಿ ಮಾಡಲಾಗಿದೆ. ಆದರೆ ದಕ್ಷಿಣದ ಮತ್ತೊಂದು ಬೃಹತ್ ರೈಲ್ವೆ ವಲಯವಾಗಿರುವ ಸಿಕಂದರಾಬಾದ್ ಕೇಂದ್ರಸ್ಥಾನ ಹೊಂದಿರುವ ದಕ್ಷಿಣ ಮಧ್ಯ ರೈಲ್ವೆಯಲ್ಲಿ ವಾರ್ಷಿಕ ಟಿಕೆಟ್ ರಹಿತರ ಪ್ರಮಾಣ ಸರಾಸರಿ 20 ಲಕ್ಷ ತಲುಪುತ್ತದೆ.
ರಾಜ್ಯದಲ್ಲಿ ಗಣಿಗಾರಿಕೆ ನಿಷೇಧವಾದ ಬಳಿಕ ಸರಕು ಸಾಗಾಣಿಕೆಯಲ್ಲಿ ನೈಋುತ್ಯ ರೈಲ್ವೆ ಹಿಂದೆ ಬಿದ್ದಿದ್ದರೂ ಪ್ರಯಾಣಿಕರ ಸಂಚಾರದ ವಿಚಾರದಲ್ಲಿ ಮಾತ್ರ ಶೇ.8 ಪ್ರಗತಿ ಸಾಧಿಸಿದೆ.
(ಕನ್ನಡಪ್ರಭ ವಿಶೇಷ ವರದಿ)
