ಬೆಳಗಾವಿ(ನ.05): ಸ್ಪೈಸ್ ಜೆಟ್ ವಿಮಾನ ಬೆಳಗಾವಿಯಲ್ಲಿ ಭೂಸ್ಪರ್ಶ ಮಾಡುವ ವೇಳೆ ಮರಾಠಿ ಭಾಷೆಯಲ್ಲಿ ಸ್ವಾಗತಿಸುವುದಕ್ಕೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸಂಸ್ಥೆ ಮರಾಠಿಯನ್ನು ಕೈಬಿಟ್ಟಿದೆ. ಇದೇ ವೇಳೆ ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನೇ ಅಳವಡಿಸಿಕೊಳ್ಳುವಂತೆ ಮನವಿ ಮಾಡಿದ್ದರೂ ಉದಾಸೀನ ತೋರಿರುವುದು ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ಕರ್ನಾಟಕದ ನೆಲದಲ್ಲಿ ಯಾರೂ ಹೇಳದೆ ಸ್ವಯಂಪ್ರೇರಿತವಾಗಿ ಮರಾಠಿಪ್ರೇಮ ಮೆರೆದ ಸ್ಪೈಸ್‌ ಜೆಟ್ ಸಂಸ್ಥೆ ಇದೀಗ ಕನ್ನಡ ಅಳವಡಿಸಿ ಎಂದು ನಾವೇ ಕೇಳಿಕೊಂಡರೂ ಸುಮ್ಮನಿರುವುದೇಕೆ ಎಂದು ಆಕ್ರೋಶ ವ್ಯಕ್ತವಾಗಿದೆ. ಸ್ಪೈಸ್ ಜೆಟ್ ಈ ಮೊದಲೇ ಬೆಳಗಾವಿಯಿಂದ ಬೆಂಗಳೂರಿಗೆ ಎರಡು ವಿಮಾನಯಾನ ಸೇವೆ ನೀಡುತ್ತಿತ್ತು. ಅ.4ರಂದು ನಿಲ್ದಾಣ ಮೇಲ್ದರ್ಜೆಗೇರಿದ ಬಳಿಕ ಸಂಸ್ಥೆಯಿಂದ ಚೆನ್ನೈಗೆ ಹೊಸದಾಗಿ ವಿಮಾನಯಾನ ಸೇವೆ ಪ್ರಾರಂಭಗೊಂಡಿದೆ. ಇದೀಗ ಸಂಸ್ಥೆ ಎರಡೂ ಮಹಾನಗರಗಳಿಗೆ ನಿರಂತರ ವಿಮಾನಯಾನ ಸೇವೆ ನೀಡುತ್ತಿದೆ. ಸ್ಪೈಸ್ ಜೆಟ್ ಸಂಸ್ಥೆ ಸಿಬ್ಬಂದಿಗೆ ಬೆಳಗಾವಿ ಕರ್ನಾಟಕದಲ್ಲಿರುವುದು ಎಂಬ ಪರಿವೆ ಇದ್ದೋ ಇಲ್ಲದೆಯೋ, ಬೆಂಗಳೂರು ಹಾಗೂ ಚೆನ್ನೈಗಳಿಂದ ವಿಮಾನಗಳು ಬೆಳಗಾವಿಗೆ ಆಗಮಿಸುತ್ತಿದ್ದಂತೆ ವಿಮಾನದೊಳಗಿನ ಧ್ವನಿವರ್ಧಕದ ಮೂಲಕ ‘‘ಬೆಳಗಾಂವಲಾ ಸ್ವಾಗತ್ ಕರೀತ್ ಆಹೆ (ಬೆಳಗಾವಿಗೆ ನಿಮ್ಮನ್ನು ಸ್ವಾಗತಿಸುತ್ತೇವೆ)’’ ಎಂದು ಮರಾಠಿ ಭಾಷೆಯಲ್ಲಿಯೇ ಸ್ವಾಗತಿಸಲಾಗುತ್ತಿತ್ತು.

ತೀವ್ರ ವಿರೋಧ: ಕನ್ನಡ ನೆಲದಲ್ಲೇ ಇರುವ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬೆಂಗಳೂರು- ಬೆಳಗಾವಿ ಮಧ್ಯೆ ಹಾರಾಡುವ ಸ್ಪೈಸ್ ಜೆಟ್ ವಿಮಾನದಲ್ಲಿ ಇಂತಹ ಅಧಿಕಪ್ರಸಂಗತನ ಮೆರೆದಿರುವುದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಬೆಚ್ಚಿದ ಸ್ಪೈಸ್ ಜೆಟ್ ಸಿಬ್ಬಂದಿ ಸಾಂಬ್ರಾ ಬಳಿಕ ವಿಮಾನ ನಿಲ್ದಾಣದಲ್ಲಿ ಮರಾಠಿ ಭಾಷೆಯನ್ನೇನೋ ಕೈಬಿಟ್ಟರು. ಆದರೆ ಆದರ ಬದಲಾಗಿ ಕನ್ನಡವನ್ನು ಅಳವಡಿಸುವ ಕಾರ್ಯ ಮಾಡಲಿಲ್ಲ. ಇದೀಗ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಯಾಣಿಕರನ್ನು ಸ್ವಾಗತಿಸಲಾಗುತ್ತಿದೆ. ವಿಮಾನಯಾನದ ಈ ನಿರ್ಲಕ್ಷ್ಯಕ್ಕೆ ಕನ್ನಡಪ್ರೇಮಿಗಳು ಮತ್ತೆ ವಿರೋಧ ವ್ಯಕ್ತಪಡಿಸಿದ್ದು ಖಡ್ಡಾಯವಾಗಿ ಕನ್ನಡ ಅಳವಡಿಕೆ ಮಾಡುವಂತೆ ಒತ್ತಾಯಿಸಿದ್ದಾರೆ.

ಹೋರಾಟ ಎಚ್ಚರಿಕೆ: ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿ ವಿಮಾನಯಾನ ಮಾಡುತ್ತಾರೆ. ಅದು ಗೊತ್ತಿದ್ದರೂ ಸ್ಪೈಸ್ ಜೆಟ್ ಸಿಬ್ಬಂದಿ ಕನ್ನಡದ ಬಗ್ಗೆ ಅನಾದಾರ ತೋರುತ್ತಿದ್ದಾರೆ. ಕೂಡಲೇ ಸ್ಪೈಸ್ ಜೆಟ್ ವಿಮಾನದ ಸಿಬ್ಬಂದಿ ಎಚ್ಚೆತ್ತುಕೊಂಡು ಹಿಂದಿ ಭಾಷೆಯ ಬದಲಾಗಿ ಕನ್ನಡ ಭಾಷೆಯಲ್ಲೇ ಪ್ರಯಾಣಿಕರನ್ನು ಸ್ವಾಗತಿಸುವ ಪರಿಪಾಠವನ್ನು ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ವರದಿ: ಶ್ರೀಶೈಲ ಮಠದ (ಕನ್ನಡಪ್ರಭ)