ರಾಹುಲ್‌ ಗಾಂಧಿ ಅವರ ಭದ್ರತೆಯ ನೆಪದಲ್ಲಿ ಈ ಚೀನಾ ಪೊಲೀಸರು ಹಿಮಾಲಯ್‌ ಹೋಟೆಲ್‌ನಲ್ಲಿ ರಾಹುಲ್‌ ಉಳಿಯುತ್ತಾರೆಂಬ ಕಾರಣಕ್ಕೆ ಬೇರೆ ಯಾರಿಗೂ ಉಳಿದುಕೊಳ್ಳುವುದಕ್ಕೆ ಅವಕಾಶ ನೀಡಿರಲಿಲ್ಲ. ಈ ವೇಳೆ ಕನ್ನಡಿಗರೂ ಕೂಡ ಸಮಸ್ಯೆ ಎದುರಿಸಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ. 

ಉಡುಪಿ : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕೈಲಾಸ ಮಾನಸ ಸರೋವರ ಯಾತ್ರೆ ಮಾಡಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಅವರ ಯಾತ್ರೆಯ ದೆಸೆಯಿಂದಾಗಿ ಕರ್ನಾಟಕದಿದ ಕೈಲಾಸ ಪರ್ವತ ಪರಿಕ್ರಮಕ್ಕೆ ತೆರಳಿದ್ದವರಿಗೆ ಅನವಶ್ಯಕ ತೊಂದರೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಚೀನಾ ಪೊಲೀಸರು ರಾಹುಲ್‌ ಗಾಂಧಿ ಅವರ ಭದ್ರತೆಯ ನೆಪವೊಡ್ಡಿ ಮಾನಸ ಸರೋವರದಿಂದ ಸುಮಾರು 45 ಕಿ.ಮೀ.ದೂರವಿರುವ ಯಮದ್ವಾರ ಎಂಬಲ್ಲಿನ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಕರ್ನಾಟಕದ 14 ಮಂದಿಯನ್ನು ಏಕಾಏಕಿ ಎತ್ತಂಗಡಿ ಮಾಡಿ ಗೋಳು ಹೊಯ್ದುಕೊಂಡಿದ್ದರು ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಕೈಲಾಸ ಮಾನಸ ಸರೋವರ ಯಾತ್ರೆಗೆಂದು ಬೆಂಗಳೂರಿನಿಂದ ಆ.28ಕ್ಕೆ ತೆರಳಿದ್ದ ತಂಡದಲ್ಲಿದ್ದ ಕನ್ನಡಿಗ ಉಡುಪಿಯ ದೇವಿಪ್ರಸಾದ್‌ ತಂತ್ರಿ ಸೂರಾಲು ಅವರು, ಕನ್ನಡಪ್ರಭದೊಂದಿಗೆ ಮಾತನಾಡಿದ್ದಾರೆ.

ಮಾನಸ ಸರೋವರ ಮತ್ತು ಕೈಲಾಸ ಪರ್ವತ ಚೀನಾ ಆಕ್ರಮಿತ ಟಿಬೇಟಿನಲ್ಲಿರುವುದರಿಂದ ಚೀನಾದ ಪೊಲೀಸ್‌ ವ್ಯವಸ್ಥೆ ಇದೆ. ರಾಹುಲ್‌ ಗಾಂಧಿ ಅವರ ಭದ್ರತೆಯ ನೆಪದಲ್ಲಿ ಈ ಚೀನಾ ಪೊಲೀಸರು ಹಿಮಾಲಯ್‌ ಹೋಟೆಲ್‌ನಲ್ಲಿ ರಾಹುಲ್‌ ಉಳಿಯುತ್ತಾರೆಂಬ ಕಾರಣಕ್ಕೆ ಬೇರೆ ಯಾರಿಗೂ ಉಳಿದುಕೊಳ್ಳುವುದಕ್ಕೆ ಅವಕಾಶ ನೀಡಿರಲಿಲ್ಲ. ಮಾತ್ರವಲ್ಲ ಎರಡು ದಿನಗಳ ಕಾಲ ಬೇರೆಯವರಿಗೆ ಕೈಲಾಸ ಪರ್ವತ ಪರಿಕ್ರಮಕ್ಕೂ ಅವಕಾಶ ನಿರಾಕರಿಸಿದರು ಎಂದು ಅವರು ತಿಳಿಸಿದ್ದಾರೆ.

ಕೆಟ್ಟಹೋಟೆಲಲ್ಲಿ ಕಳೆವಂತಾಯ್ತು: ಉಡುಪಿಯ ಮೂವರು ಸೇರಿದಂತೆ ಬೆಂಗಳೂರಿನಿಂದ 14 ಮಂದಿ ಕೈಲಾಸ ಪರ್ವತ ಪರಿಕ್ರಮಕ್ಕೆ (ಕಾಲ್ನಡಿಗೆಯಲ್ಲಿ 43 ಕಿ.ಮೀ. ಕೈಲಾಸ ಪರ್ವತಕ್ಕೆ ಒಂದು ಸುತ್ತು ಪ್ರದಕ್ಷಿಣೆ) ಹೋಗಿದ್ದರು. ಅವರ ಜೊತೆಗೆ ದೇಶದ ವಿವಿಧೆಡೆಯಿಂದ ಬಂದ ಸುಮಾರು 60 ಯಾತ್ರಾರ್ಥಿಗಳಿದ್ದರು. ಆ.28ಕ್ಕೆ ಬೆಂಗಳೂರಿನಿಂದ ಹೊರಟು ಲಕ್ನೋಗೆ ಹೋಗಿದ್ದರು. ಅಲ್ಲಿಂದ ಸೆ.2ನೇ ತಾರೀಕಿಗೆ ಮಾನಸ ಸರೋವರ ತಲುಪಿದ್ದ ಆ ತಂಡ ಅಲ್ಲಿ ಹಿಮಾಲಯ್‌ ಎಂಬ (ಆ ಪ್ರದೇಶದಲ್ಲಿರುವ ಏಕೈಕ ದೊಡ್ಡ) ಹೋಟೆಲಿನಲ್ಲಿ ಉಳಿದುಕೊಂಡಿತ್ತು.

ಪೂರ್ವನಿಯೋಜಿತ ಕಾರ್ಯಕ್ರಮದಂತೆ ಆ ತಂಡ ಸೆ.3ರಂದು ಯಮದ್ವಾರ ಎಂಬಲ್ಲಿಂದ ಪಾದಯಾತ್ರೆಯ ಮೂಲಕ ಪರಿಕ್ರಮವನ್ನು ಆರಂಭಿಸಬೇಕಾಗಿತ್ತು. ಆದರೆ ಅದೇ ಹೋಟೆಲಿನಲ್ಲಿ ರಾಹುಲ್‌ ಗಾಂಧಿ ಬಂದು ಉಳಿದುಕೊಳ್ಳುತ್ತಾರೆ ಎಂದು ಚೀನಾ ಪೊಲೀಸರು ಭದ್ರತೆಯ ನೆಪದಲ್ಲಿ, ಸೆ.2ರಂದು ಈ ತಂಡದ 60 ಯಾತ್ರಾರ್ಥಿಗಳನ್ನೂ ಹಿಮಾಲಯ್‌ ಹೋಟೆಲಿನಿಂದ 40 ಕಿ.ಮೀ. ದೂರದ ಡಾರ್ಚಿನ್‌ ಎಂಬಲ್ಲಿಗೆ ಕಳುಹಿಸಿದರು. ಇದರಿಂದ ತಾವು 7 ಡಿಗ್ರಿ ಸೆಂಟಿಗ್ರೇಡ್‌ ಚಳಿಯ ವಾತಾವರಣದಲ್ಲಿ ತೀರಾ ಕೆಟ್ಟರೀತಿಯಲ್ಲಿ ನೋವು ಅನುಭವಿಸುವಂತಾಯಿತು. ಭಾಷೆ ಬಾರದ ಊರಿನ ಈ ಊರಿನ ಹೋಟೆಲಿನಲ್ಲಿ ಸರಿಯಾದ ಊಟ ಉಪಾಹಾರವಿಲ್ಲದೆ, ಸ್ನಾನಕ್ಕೆ ವ್ಯವಸ್ಥೆಯಿಲ್ಲದೆ, ಕನಿಷ್ಠ ಶೌಚಾಲಯವೂ ಇಲ್ಲದೇ, ಎರಡು ದಿನ ತೀರಾ ಕೆಟ್ಟಹೋಟೆಲಿನಲ್ಲಿ ಕೂಡಿ ಹಾಕಿದಂತೆ ಕಳೆಯಬೇಕಾಯಿತು ಎಂದು ದೇವಿಪ್ರಸಾದ್‌ ತಂತ್ರಿ ಸೂರಾಲು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಆಮ್ಲಜನಕ ಪ್ರಮಾಣ ಬಹಳ ಕಡಿಮೆ ಇರುವುದರಿಂದ, ಈ ತಂಡದಲ್ಲಿದ್ದ ಕೆಲವು ಹಿರಿಯರಿಗೆ ಉಸಿರಾಟ, ರಕ್ತದೊತ್ತಡದ ಸಮಸ್ಯೆ ಆರಂಭವಾಯಿತು. ಈ ಕಾರಣದಿಂದ ಸುಮಾರು 10 ಮಂದಿ ಯಾತ್ರೆಯನ್ನು ಅರ್ಧದಲ್ಲೇ ಕೈಬಿಟ್ಟು ಡಾರ್ಚಿನ್‌ನಿಂದಲೇ ಹಿಂದುರುಗಿದ್ದಾರೆ ಎಂದು ಇನ್ನೊಬ್ಬ ಕನ್ನಡಿಗ ಪುರುಷೋತ್ತಮ ಅಡಿಗ ಅವರು ತಿಳಿಸಿದ್ದಾರೆ.

ಸೆ.4ರಂದು ಈ ತಂಡಕ್ಕೆ ಪರಿಕ್ರಮ ಮುಂದುವರಿಸಲು ಅಲ್ಲಿನ ಚೀನಿ ಪೊಲೀಸರು ಅವಕಾಶ ನೀಡಿದ್ದಾರೆ. ಅದರಂತೆ ದಿನವೊಂದಕ್ಕೆ 15 - 18 ಕಿ.ಮೀ.ಗಳಂತೆ ಕಾಲ್ನಡಿಗೆಯಲ್ಲಿ ಒಟ್ಟು ಮೂರು ದಿನಗಳಲ್ಲಿ 43 ಕಿ.ಮೀ. ಪರಿಕ್ರಮವನ್ನು ಮುಗಿಸಿದ್ದಾರೆ.

ರಾಹುಲ್‌ ಪರಿಕ್ರಮ ಬಗ್ಗೆ ಅನುಮಾನ!

ರಾಹುಲ್‌ ಗಾಂಧಿ ಯಾತ್ರೆಗೆ ಹೋಗಿಲ್ಲ ಎಂದು ವಿರೋಧ ಪಕ್ಷವಾದ ಬಿಜೆಪಿ ಆರೋಪಿಸುತ್ತಿರುವ ಬೆನ್ನಲ್ಲೇ ಅವರು ಪರ್ವತ ಪರಿಕ್ರಮ ಪೂರ್ಣಗೊಳಿಸಿಲ್ಲ ಎಂದು ಆ ಸಂದರ್ಭದಲ್ಲಿ ಯಾತ್ರೆ ನಡೆಸಿದ್ದ ದೇವಿಪ್ರಸಾದ್‌ ತಂತ್ರಿ ತಿಳಿಸಿದ್ದಾರೆ. ರಾಹುಲ್‌ ಸೆ.2ರಂದು ಮಾನಸ ಸರೋವರದವರೆಗೆ ಬಂದದ್ದು ನಿಜ. ಅವರ ಪರಿಕ್ರಮ ಮುಗಿಯುವರೆಗೆ ನಾವು ಪರಿಕ್ರಮ ಆರಂಭಿಸುವಂತಿಲ್ಲ ಎಂದು ಪೊಲೀಸರು ಹೇಳಿದ್ದರು. ಆದರೆ ಸೆ.3ರಂದು ಸಂಜೆ ಅಮ್ಲಜನಕದ ಕೊರತೆಯಿಂದ ರಾಹುಲ್‌ ಗಾಂಧಿ ಅವರ ಆರೋಗ್ಯದ ಮೇಲೆ ಪರಿಣಾಮವಾಗಿದೆ. ಅವರು ಪರಿಕ್ರಮ(ಟ್ರಕ್ಕಿಂಗ್‌) ಕೈಬಿಟ್ಟು ಹಿಂದಕ್ಕೆ ಹೋಗಿದ್ದಾರೆ ಎಂದು ಅಲ್ಲಿನ ಪೊಲೀಸರೇ ನಮಗೆ ತಿಳಿಸಿದ್ದು ಸೆ.4ರಿಂದ ನಮ್ಮ ಪರಿಕ್ರಮ ಮುಂದುವರಿಸುವುದಕ್ಕೆ ಅವಕಾಶ ನೀಡಿದ್ದರು. ಆದ್ದರಿಂದ ರಾಹುಲ್‌ ಗಾಂಧಿ ಕೈಲಾಸ ಪರ್ವತ ಪರಿಕ್ರಮವನ್ನು ಪೂರ್ಣಗೊಳಿಸಿಲ್ಲ ಎಂದು ದೇವಿಪ್ರಸಾದ್‌ ತಂತ್ರಿ ಹೇಳಿದ್ದಾರೆ.

- ಕಾಂಗ್ರೆಸ್‌ ಅಧ್ಯಕ್ಷರ ಆಗಮನ ಹಿನ್ನೆಲೆಯಲ್ಲಿ ಕೈಲಾಸ ಪರಿಕ್ರಮಕ್ಕೆ ಸಜ್ಜಾಗಿದ್ದ ಕರ್ನಾಟಕದ 14 ಮಂದಿ ಸೇರಿ 60 ಯಾತ್ರಿಗಳ ಎತ್ತಂಗಡಿ

- ಉತ್ತಮ ಹೋಟೆಲಿಂದ 40 ಕಿಮೀ ದೂರದ ಕಳಪೆ ಹೋಟೆಲ್‌ಗೆ ಸ್ಥಳಾಂತರ

7 ಡಿಗ್ರಿ ಚಳಿಯಲ್ಲಿ 2 ದಿನ ಯಾತನೆ: ಕನ್ನಡಿಗ ಆರೋಪ ಆಗಿದ್ದೇನು?

- ಕೈಲಾಸ ಪರಿಕ್ರಮ ಯಾತ್ರೆಗೆ ತೆರಳಿದ್ದ ಉಡುಪಿಯ ಮೂವರು ಸೇರಿ ಕರ್ನಾಟಕದ 14 ಯಾತ್ರಿಗಳು

- ಸೆ.3ರಿಂದ ಪರಿಕ್ರಮ ಮಾಡಲು ಸೆ.2ಕ್ಕೆ ಯಮದ್ವಾರ ಎಂಬಲ್ಲಿಗೆ ತಲುಪಿದ್ದ ಒಟ್ಟು 60 ಯಾತ್ರಿಗಳು

- ಹಿಮಾಲಯ್‌ ಎಂಬ ಹೋಟೆಲ್‌ನಲ್ಲಿ ತಂಗಿದ್ದ ವೇಳೆ ರಾಹುಲ್‌ ಬರ್ತಾರೆ ಎಂದು ನೆಪವೊಡ್ಡಿ ಎತ್ತಂಗಡಿ

- 40 ಕಿಮೀ ದೂರದ ಡಾರ್ಚಿನ್‌ ಎಂಬಲ್ಲಿಗೆ ಸ್ಥಳಾಂತರ. 7 ಡಿಗ್ರಿ ಚಳಿ, ಊಟೋಪಚಾರ ಇಲ್ಲದೆ ಸಂಕಷ್ಟ

- 2 ದಿನ ಪರದಾಟ, ಕೆಲ ಹಿರಿಯರಿಗೆ ಉಸಿರಾಟ, ರಕ್ತದೊತ್ತಡ ಸಮಸ್ಯೆ: 10 ಜನ ಪರಿಕ್ರಮ ಮಾಡದೆ ವಾಪಸ್‌

- ಕಡೆಗೆ ರಾಹುಲ್‌ ಬರಲ್ಲವೆಂದು ಸೆ.4ಕ್ಕೆ ಪರಿಕ್ರಮಕ್ಕೆ ಅವಕಾಶ: ಉಡುಪಿಯ ದೇವಿಪ್ರಸಾದ್‌, ಪುರುಷೋತ್ತಮ್‌ ಆರೋಪ