ಬೆಂಗಳೂರು [ಸೆ.08]:  ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ವ್ಯವಸ್ಥೆಯ ಆದೇಶವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ನಾಡಿನ ಹಿರಿಯ ಸಾಹಿತಿಗಳು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸಾಹಿತಿ ಚಿದಾನಂದಮೂರ್ತಿ ನೇತೃತ್ವದಲ್ಲಿ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಸದಸ್ಯರು, ಹಿರಿಯ ಸಾಹಿತಿಗಳು ಭೇಟಿ ಮಾಡಿದರು. ಈ ವೇಳೆ ಸಾಹಿತಿ ದೊಡ್ಡರಂಗೇಗೌಡ ಅವರು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಆದೇಶವನ್ನು ವಾಪಸ್‌ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗ್ಗೆ ತಜ್ಞರೊಂದಿಗೆ ಕೂಲಂಕಷವಾಗಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಂಗ್ಲಿಷ್‌ ಮಾಧ್ಯಮದಿಂದ ಕನ್ನಡ ಭಾಷೆ ಅವನತಿಯತ್ತ ಸಾಗುತ್ತಿದೆ. ಹೀಗಾಗಿ ತಕ್ಷಣವೇ ಹಿಂದಿನ ಸರ್ಕಾರದ ತೀರ್ಮಾನವನ್ನು ಹಿಂಪಡೆದು ಕನ್ನಡ ಉಳಿಸಬೇಕು. ನಾವು ಯಾರೂ ಇಂಗ್ಲಿಷ್‌ ಭಾಷೆಯ ವಿರೋಧಿಗಳಲ್ಲ. ಆದರೆ, ಒಂದು ಶಿಕ್ಷಣ ಮಾಧ್ಯಮವಾಗಿ ಇಂಗ್ಲಿಷ್‌ ಕಲಿಸಲು ನಮ್ಮ ವಿರೋಧವಿದೆ. ಅಷ್ಟೇ ಅಲ್ಲದೇ, ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದರೆ ಉದ್ಯೋಗ ಸಿಗುವುದಿಲ್ಲ ಎನ್ನುವ ಅಭಿಪ್ರಾಯ ಪೋಷಕರಲ್ಲಿ ಇದೆ. ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದರೆ ಸರ್ಕಾರಿ ನೌಕರಿ ಲಭ್ಯವಾಗಲಿದೆ ಎಂಬುದನ್ನು ಪೋಷಕರಿಗೆ ತಿಳಿಹೇಳಬೇಕು. ಕನ್ನಡ ಶಾಲೆಗಳ ಸ್ಥಿತಿಗತಿಗಳನ್ನು ಉತ್ತಮಪಡಿಸಬೇಕು. ಕನ್ನಡ ಶಾಲೆಗಳಲ್ಲಿ ಒಳ್ಳೆಯ ವಾತಾವರಣ ಕಲ್ಪಿಸಿದರೆ ಪೋಷಕರು ಕನ್ನಡ ಶಾಲೆಗಳತ್ತ ಬರಲಿದ್ದಾರೆ ಎಂದು ದೊಡ್ಡರಂಗೇಗೌಡ ತಿಳಿಸಿದರು.