ಬೆಂಗಳೂರು :  ಸಾಹಿತ್ಯ, ಸಾಂಸ್ಕೃತಿಕ ವಲಯಕ್ಕೆ ಸಂಬಂಧಿಸಿದಂತೆ ಮುದ್ರಣ ಮಾಧ್ಯಮಗಳ ಕೊಡುಗೆ ಪರಿಗಣಿಸಿ ಹಾಗೂ ಡಿಜಿಟಲ್‌ ಮಾಧ್ಯಮ ಕ್ಷೇತ್ರದಲ್ಲಿನ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಸಕ್ತ ಸಾಲಿನಲ್ಲಿ ನೂತನವಾಗಿ ‘ಮುದ್ರಣ ಮಾಧ್ಯಮ ವಾಙ್ಮಯ ಹಾಗೂ ‘ಡಿಜಿ ವಾಙ್ಮಯ’ ಪುರಸ್ಕಾರ ನೀಡಲು ನಿರ್ಧರಿಸಿದೆ.

ಈ ಪುರಸ್ಕಾರಕ್ಕೆ ಮುದ್ರಣ ಮಾಧ್ಯಮದಲ್ಲಿನ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಹಾಗೂ ತ್ರೈಮಾಸಿಕಗಳು ಭಾಜನವಾಗಲಿವೆ. 2018ನೇ ಸಾಲಿನಲ್ಲಿ ದಿನಪತ್ರಿಕೆಗಳನ್ನು ಪುರಸ್ಕಾರಕ್ಕೆ ಪರಿಗಣಿಸಲಾಗಿದೆ. ಪತ್ರಿಕೆಗಳು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸ್ಥಾನಮಾನ ಹಾಗೂ ಸಾಹಿತ್ಯ ಮೌಲ್ಯವನ್ನಾಧರಿಸಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸಾಂಸ್ಥಿಕ ರೂಪದ ಜಾಲತಾಣಗಳು, ಬ್ಲಾಗ್‌ಗಳು, ಸಾಮಾಜಿಕ ಜಾಲತಾಣಗಳು, ಯು ಟ್ಯೂಬ್‌ ಡಿಜಿ ವಾš್ಮಯ ಪುರಸ್ಕಾರಕ್ಕೆ ಒಳಪಡುತ್ತವೆ. ಆದರೆ, ವ್ಯಕ್ತಿಗತವಾದ ಡಿಜಿಟಲ್‌ ಮಾಧ್ಯಮಗಳು ಈ ಪುರಸ್ಕಾರದ ವ್ಯಾಪ್ತಿಗೆ ಬರುವುದಿಲ್ಲ.

ಅಕಾಡೆಮಿ ತನ್ನ ವಾರ್ಷಿಕ ಪುಸ್ತಕ ಬಹುಮಾನದೊಂದಿಗೆ ಮುದ್ರಣ ಹಾಗೂ ಡಿಜಿಟಲ್‌ ಮಾಧ್ಯಮ ಸಂಸ್ಥೆಗೆ ವಿಶೇಷ ಪುರಸ್ಕಾರ ನೀಡಲಿದೆ. ಈ ಪುರಸ್ಕಾರ 25 ಸಾವಿರ ರು. ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್‌ ಮಾಧ್ಯಮಗಳಲ್ಲಿ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿರುವ ಯುವಜನತೆಗೆ ಉತ್ತಮ ವೇದಿಕೆ ಒದಗಿಸಿ ಮಾಧ್ಯಮದ ಮುಖ್ಯವಾಹಿನಿಗೆ ತರುವ ಉದ್ದೇಶ ಅಕಾಡೆಮಿಯದು. ಹಾಗೇ ಮುದ್ರಣ ಮಾಧ್ಯಮಗಳಲ್ಲಿ ಈ ಹಿಂದಿನ ಸಾಹಿತ್ಯಕ ಇತಿಹಾಸ ಮರುಕಳಿಸಲು ಪುರಸ್ಕಾರ ನೀಡಲಾಗುತ್ತಿದೆ.

ಆಯ್ಕೆ ಪ್ರಕ್ರಿಯೆಗೆ ಸಮಿತಿ:

ಪ್ರಸಕ್ತ ವರ್ಷ ಎಲ್ಲಾ ದಿನಪತ್ರಿಕೆಗಳನ್ನು ಪುರಸ್ಕಾರಕ್ಕೆ ಪರಿಗಣಿಸಲಾಗಿದೆ. ಮುಂಬರುವ ವರ್ಷಗಳಲ್ಲಿ ವಾರ ಪತ್ರಿಕೆ, ಮಾಸಪತ್ರಿಕೆಗಳೂ ಒಳಪಡುತ್ತವೆ. ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್‌ ಮಾಧ್ಯಮದ ಅರ್ಹ ಸಂಸ್ಥೆಗಳನ್ನು ಗುರುತಿಸಲು ತಜ್ಞರ ಸಮಿತಿ ರಚಿಸಲಾಗಿದೆ. ಇದು ಅಕಾಡೆಮಿ ಅಧ್ಯಕ್ಷರು, ಪತ್ರಿಕೋದ್ಯಮದ ಕ್ಷೇತ್ರದ ಹಿರಿಯ ಅನುಭವಿ ಪತ್ರಕರ್ತರು ಮತ್ತು ಓದುಗರು ಸೇರಿದಂತೆ ಒಟ್ಟು ಐವರ ಸಮಿತಿಯಾಗಿದೆ. ಡಿಜಿಟಲ್‌ ಮಾಧ್ಯಮ ಆಯ್ಕೆ ಸಮಿತಿಯಲ್ಲೂ ಐವರು ತಜ್ಞರು ಇರಲಿದ್ದಾರೆ. ಆಯಾ ಕ್ಷೇತ್ರದ ಸಂಪಾದಕರು ತಮ್ಮ ಮಾಧ್ಯಮವು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಬಗೆಗಿನ ವಿವರಣೆಗಳೊಂದಿಗೆ ಸಲ್ಲಿಕೆ ನೀಡಬಹುದು.

ಆಯ್ಕೆ ಮಾನದಂಡ ಏನು?

- ಮುದ್ರಣ ಹಾಗೂ ಡಿಜಿಟಲ್‌ ಮಾಧ್ಯಮ ಸಂಸ್ಥೆಗಳ ಕಾರ್ಯವ್ಯಾಪ್ತಿ

- ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಸಂಪರ್ಕ

- ಸಂಸ್ಥೆಯ ಇತಿಹಾಸ, ಸೇವೆ, ಕಾರ್ಯ ಸಾಧನೆ

- ಬರಹಗಾರರು, ಓದುಗರ ಅಭಿಪ್ರಾಯ

- ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಡುಗೆ


ಕಳೆದ ವರ್ಷ ಸಾಹಿತ್ಯಶ್ರೀ ಪ್ರಶಸ್ತಿ ಪರಿಚಯಿಸಲಾಗಿತ್ತು. ಈ ಬಾರಿ ಮಾಧ್ಯಮ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲಾಗಿದೆ. ಸಾಹಿತ್ಯ ಸೇವೆಯಲ್ಲಿ ನಿರತವಾಗಿರುವ ಸಂಘ ಸಂಸ್ಥೆಗಳಿಗೂ ಪ್ರಶಸ್ತಿ ನೀಡುವ ಚಿಂತನೆ ಇದೆ. ಅಕಾಡೆಮಿ ಈಗಾಗಲೇ ಸಾಮಾಜಿಕ ಜಾಲತಾಣ ಸೇರಿದಂತೆ ಡಿಜಿಟಲ್‌ ಮಾಧ್ಯಮ ಪ್ರವೇಶಿಸಿದೆ. ಇಂದಿನ ಯುವಕರು ಡಿಜಿಟಲ್‌ ಮಾಧ್ಯಮದತ್ತ ಆಕರ್ಷಿತರಾಗುತ್ತಿದ್ದಾರೆ. ಯುವಕರು ಡಿಜಿಟಲ್‌ ಮಾಧ್ಯಮಕ್ಕೆ ಮಾತ್ರ ಸೀಮಿತಗೊಳ್ಳದೆ ಮುದ್ರಣ ಮಾಧ್ಯಮಗಳಿಗೂ ತೆರೆದುಕೊಳ್ಳಬೇಕು. ಮುದ್ರಣ ಮಾಧ್ಯಮಕ್ಕೆ ತನ್ನದೇ ಆದ ವ್ಯಾಪ್ತಿ ಇದೆ. ಈ ಪುರಸ್ಕಾರದ ಮೂಲಕ ಸಾಹಿತ್ಯ ಕ್ಷೇತ್ರದೆಡೆಗೆ ಜನರನ್ನು ಸೆಳೆಯುವುದು ನಮ್ಮ ಗುರಿ.

- ಪ್ರೊ.ಅರವಿಂದ ಮಾಲಗತ್ತಿ, ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ

ವರದಿ :  ಕಾವೇರಿ ಎಸ್‌.ಎಸ್‌.