Asianet Suvarna News Asianet Suvarna News

ಒಂದರಿಂದ 10ನೇ ತರಗತಿವರೆಗೂ ಕನ್ನಡ ಕಲಿಕೆ ಕಡ್ಡಾಯ

ರಾಜ್ಯದ ಎಲ್ಲಾ ಮಾಧ್ಯಮದ ಶಾಲೆಗಳಲ್ಲೂ ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದನ್ನು ಸರ್ಕಾರ ಕಡ್ಡಾಯ ಮಾಡಿದೆ.

Kannada Mandatory For 1 to 10 class students

ಬೆಂಗಳೂರು (ಡಿ.30): ರಾಜ್ಯದ ಎಲ್ಲಾ ಮಾಧ್ಯಮದ ಶಾಲೆಗಳಲ್ಲೂ ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದನ್ನು ಸರ್ಕಾರ ಕಡ್ಡಾಯ ಮಾಡಿದ್ದು, ಇದನ್ನು 2018-19ನೇ ಶೈಕ್ಷಣಿಕ ಸಾಲಿನಿಂದಲೇ ಅನುಷ್ಠಾನಗೊಳಿಸಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ. ಶುಕ್ರವಾರ 2018ರ ವರ್ಷದ ಇಲಾಖೆ ಡೈರಿ ಹಾಗೂ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಸೇರಿದಂತೆ ಎಲ್ಲ ಪಠ್ಯ ಕ್ರಮ ಬೋಧಿಸುವ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ 1-10ನೇತರಗತಿವರೆಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದು ಕಡ್ಡಾಯ ಮಾಡಲಾಗಿದೆ.

ಇದಕ್ಕಾಗಿ 2015ರಲ್ಲಿ ಜಾರಿಗೊಳಿಸಿರುವ ಕನ್ನಡ ಭಾಷಾ ಕಲಿಕೆ ಕಾಯ್ದೆ -2015ಕ್ಕೆ ನಿಯಮಗಳನ್ನು ರೂಪಿಸಲಾಗಿದೆ. 2017 -18ನೇ ಸಾಲಿನಿಂದಲೇ ಕಡ್ಡಾಯಗೊಳಿಸಿದ್ದು, ಕೆಲವು ಸಮಸ್ಯೆಗಳಿಂದಾಗಿ ಅನುಷ್ಠಾನವಾಗಿಲ್ಲ. ಮುಂದಿನ ಸಾಲಿನಿಂದ ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗುವುದೆಂದರು.

ಕನ್ನಡ ಬೋಧನೆ ಕಡ್ಡಾಯಕ್ಕೆ ಸಿಬಿಎಸ್ ಇ-ಐಸಿಎಸ್‌ಇ ಶಾಲೆಗಳು ವಿರೋಧ ವ್ಯಕ್ತಪಡಿಸಿದ್ದವು. ನಮ್ಮ ಶಾಲೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತವೆಯೇ ಹೊರತು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಜತೆಗೆ ಬೇರೆ ರಾಜ್ಯದಿಂದ ಮಧ್ಯದಲ್ಲಿ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವುದು ಸಮಸ್ಯೆಯಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೆ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ, ಹಿಂದಿ ಭಾಷೆಯ ರಾಜ್ಯಗಳ ವಿದ್ಯಾರ್ಥಿಗಳು ಹಿಂದಿ ಮತ್ತು ಇಂಗ್ಲಿಷ್ ಜತೆಗೆ ಭಾರತದ ಮತ್ತೊಂದು ಭಾಷೆ ಕಲಿಯಬೇಕು. ಹಿಂದಿಯೇತರ ರಾಜ್ಯಗಳ ವಿದ್ಯಾರ್ಥಿಗಳು ಹಿಂದಿ, ಇಂಗ್ಲಿಷ್ ಜತೆಗೆ ಆಯಾ ರಾಜ್ಯ ಭಾಷೆಯನ್ನು ಕಲಿಯಬೇಕು ಎಂದು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಸೂಚನೆ ನೀಡಿದೆ.

ಇದರ ಜತೆಗೆ ರಾಜ್ಯದಲ್ಲಿರುವ ಶಾಲೆಗಳು ರಾಜ್ಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವಂತೆ ಶಿಕ್ಷಣ ಕಾಯ್ದೆಗೆ ಸೂಕ್ತ ತಿದ್ದುಪಡಿಯನ್ನೂ ಮಾಡುತ್ತಿದ್ದೇವೆ. ಹೀಗಾಗಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನುಷ್ಠಾನ ಹೇಗೆ?: ಪ್ರಸ್ತುತ ಸಾಲಿನಲ್ಲಿ ಒಂದನೇ ತರಗತಿಗೆ ಕನ್ನಡ ಕಡ್ಡಾಯ ಮಾಡಲಾಗುವುದು. ಈ ಮೂಲಕ 2026- 27ರ ವೇಳೆಗೆ 1ರಿಂದ ಹತ್ತನೇ ತರಗತಿವರೆಗೂ ಸರ್ಕಾರದ ಆದೇಶ ಅನ್ವಯದ ಪ್ರಕಾರ ಕನ್ನಡ ಕಡ್ಡಾಯವಾಗಲಿದೆ. ಹೊರ ರಾಜ್ಯಗಳಿಂದ ವಲಸೆ ಬಂದು 2ರಿಂದ 8ನೇ ತರಗತಿವರೆಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಮೊದಲ ವರ್ಷ ಒಂದನೇ ತರಗತಿಗೆ ನಿಗದಿಪಡಿಸಿದ ಕನ್ನಡ ಭಾಷಾ ಪಠ್ಯ ಬೋಧಿಸಬೇಕು ಎಂದು ತನ್ವೀರ್‌ಸೇಠ್ ಹೇಳಿದರು.

ಎರಡು ಮತ್ತು ಆನಂತರದ ವರ್ಷಗಳಲ್ಲಿ ಎರಡನೇ ತರಗತಿ ಮತ್ತು ಅನುಕ್ರಮವಾಗಿ ಮೇಲಿನ ತರಗತಿಗಳ ಪಠ್ಯಗಳನ್ನು ಕಲಿಸಬೇಕು. ಒಂಬತ್ತು ಅಥವಾ 10ನೇ ತರಗತಿ ಸೇರುವ ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪಠ್ಯ ಪುಸ್ತಕಗಳನ್ನು ನಿಗದಿಪಡಿಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಸೂಚಿಸಲಾಗಿದೆ ಎಂದರು.

ಯಾರಿಗೂ ಸಮಸ್ಯೆ ಇಲ್ಲ: ಒಂದು ವೇಳೆ ಐಸಿಎಸ್‌ಇ ಹಾಗೂ ಸಿಬಿಎಸ್‌ಇ ವಿದ್ಯಾರ್ಥಿಯೊಬ್ಬ 5ನೇ ತರಗತಿಗೆ ಬಂದು ಸೇರ್ಪಡೆಯಾದರೆ 1ನೇ ತರಗತಿಯ ಕನ್ನಡ ಪಠ್ಯಪುಸ್ತಕವನ್ನೇ ಬೋಧಿಸಲಾಗುವುದು. ಬಳಿಕ 6ನೇ ತರಗತಿಯಲ್ಲಿ 2ನೇ ತರಗತಿ ಪಠ್ಯ ಹೀಗೆ 8ನೇ ತರಗತಿವರೆಗೆ ಬೋಧಿಸಲಾಗು ವುದು. ಬಳಿಕ 9 ಹಾಗೂ 10ನೇ ತರಗತಿಗಾಗಿ ಸಿದ್ಧಪಡಿಸಿರುವ ವಿಶೇಷ ಪಠ್ಯದ ಮೂಲಕ ಕನ್ನಡ ಬೋಧಿಸಲಾಗುವುದು ಎಂದು ಹೇಳಿದರು.

ಈ ಕ್ರಮದಿಂದಾಗಿ ಮಧ್ಯದಲ್ಲಿ 2-3 ವರ್ಷ ಪಠ್ಯ ಕಲಿಕೆ ತಪ್ಪಿ ಹೋಗುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಏಕೆಂದರೆ, ಐಸಿಎಸ್‌ಇ ಹಾಗೂ ಸಿಬಿಎಸ್‌ಇ ಅಡಿ ಮೂರನೇ ಭಾಷೆ ಕಲಿಸುವ ನಿಯಮಗಳಿಲ್ಲ. ಆದರೆ ಕನ್ನಡದ ಪ್ರಾಥಮಿಕ ಜ್ಞಾನವನ್ನಾದರೂ ಕಲಿಸಬೇಕು ಎಂಬ ಛಲದಿಂದ ರಾಜ್ಯ ಸರ್ಕಾರ ಈ ನಿಯಮ ತಂದಿದೆ. ಯಾವ ತರಗತಿಗೆ ಯಾವ ರೀತಿ ಬೋಧಿಸಬೇಕು ಎಂಬ ಬಗ್ಗೆಯೂ ವೇಳಾಪಟ್ಟಿ ಸಿದ್ಧಪಡಿಸಿದ್ದೇವೆ. ಇದರಿಂದ ಯಾರಿಗೂ ಸಮಸ್ಯೆಯಾಗದಂತೆ ಬೋಧನೆ ಮಾಡಲಾಗುವುದು. ಪಟ್ಟಿಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡ ಲಾಗುವುದು ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು.

ಈ ಬಗ್ಗೆ ಇಲಾಖೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ಎಲ್ಲಾ ಶಾಲೆಗಳಲ್ಲೂ ಕನ್ನಡ ಭಾಷಾ ಕಲಿಕೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಹಾಗೂ ಇದನ್ನು ಅನುಷ್ಠಾನ ಮಾಡದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರಗಳನ್ನು ನೇಮಿಸಲಾಗುತ್ತಿದೆ ಎಂದರು. ಯಾವ ತರಗತಿಗೆ ಯಾವ ಯಾವ ಪಠ್ಯಗಳನ್ನು ಬೋಧಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ನಿಗದಿಪಡಿಸಿದ್ದು, ಈ ಪಠ್ಯ ಪುಸ್ತಕಗಳನ್ನು ಪಠ್ಯ ಪುಸ್ತಕ ಸಂಘದಿಂದ ಖರೀದಿ ಸುವಂತೆ ಆದೇಶಿಸಲಾಗಿದೆ. ಸಕ್ಷಮ ಪ್ರಾಧಿಕಾರಿ ಕಾಲಕಾಲಕ್ಕೆ ಕನ್ನಡ ಪಠ್ಯಪುಸ್ತಕಗಳ ಲಭ್ಯತೆ ಕುರಿತು ಖಾತ್ರಿಪಡಿಸಿಕೊಳ್ಳಬೇಕೆಂದೂ ಸೂಚಿಸಲಾಗಿದೆ.

Follow Us:
Download App:
  • android
  • ios