ತ್ರಿವರ್ಣ ನಾಡಧ್ವಜ ಅಂಗೀಕರಿಸಿದರೆ ದಂಗೆ - ಹಳದಿ-ಕೆಂಪು ಧ್ವಜವನ್ನೇ ಅಧಿಕೃತ ಮಾಡಿ

First Published 8, Feb 2018, 7:38 AM IST
Kannada groups oppose state flag proposed by expert panel
Highlights

ಧ್ವಜ ಸಮಿತಿ ನೀಡಿರುವ ಹಳದಿ, ಬಿಳಿ, ಕೆಂಪು ಬಣ್ಣದ ತ್ರಿವರ್ಣ ಧ್ವಜದ ಮಾದರಿಯನ್ನು ನಾಡಧ್ವಜವೆಂದು ಒಪ್ಪಲು ಸಾಧ್ಯವಿಲ್ಲ. ಕನ್ನಡಿಗರು ದಂಗೆಯೇಳುವ ಮುನ್ನವೇ ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು  : ಧ್ವಜ ಸಮಿತಿ ನೀಡಿರುವ ಹಳದಿ, ಬಿಳಿ, ಕೆಂಪು ಬಣ್ಣದ ತ್ರಿವರ್ಣ ಧ್ವಜದ ಮಾದರಿಯನ್ನು ನಾಡಧ್ವಜವೆಂದು ಒಪ್ಪಲು ಸಾಧ್ಯವಿಲ್ಲ. ಕನ್ನಡಿಗರು ದಂಗೆಯೇಳುವ ಮುನ್ನವೇ ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧ್ವಜ ಸಮಿತಿಯು ಶಿಫಾರಸು ಮಾಡಿರುವ ಧ್ವಜವು ರಾಷ್ಟ್ರಧ್ವಜದ ಪರ್ಯಾಯದ ರೀತಿಯಲ್ಲಿ ಕಾಣುತ್ತಿದೆ. ಈ ಬಗ್ಗೆ ಸರ್ಕಾರವೇ ಉತ್ತರ ನೀಡಬೇಕು. ಅಖಂಡ ಕರ್ನಾಟಕಕ್ಕೆ ಹಳದಿ, ಕೆಂಪು ಬಾವುಟವೇ ಇರಲಿ. ಈಗಾಗಲೇ ರಾಜ್ಯ ಸರ್ಕಾರಿ ಒಡೆತನದ ಎಲ್ಲ ಕಚೇರಿಗಳಲ್ಲಿ ಹಳದಿ, ಕೆಂಪು ಬಣ್ಣದ ಧ್ವಜವನ್ನೇ ಒಪ್ಪಿದ್ದು, ಕನ್ನಡಿಗರು ಭಾವನಾತ್ಮಕವಾಗಿ ಒಪ್ಪಿಕೊಂಡಿರುವ ಬಾವುಟವನ್ನು ಬದಲಾವಣೆ ಮಾಡಲು ಹೊರಟಿರುವ ಸರ್ಕಾರ ಹುಡುಗಾಟಿಕೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

1966-67ರಲ್ಲಿ ಮ.ರಾಮಮೂರ್ತಿಯವರು ಹಳದಿ, ಕೆಂಪು ಬಣ್ಣದ ಬಾವುಟವನ್ನು ನಾಡಿಗೆ ಕೊಟ್ಟಿದ್ದಾರೆ. ಕನ್ನಡಿಗರು ಕೂಡ ಅದನ್ನು ಒಪ್ಪಿಕೊಂಡಿದ್ದಾರೆ. ಈಗಿನ ಧ್ವಜ ಸಮಿತಿಯಲ್ಲಿದ್ದವರು ಯಾರೂ ಆಗ ಇರಲಿಲ್ಲ. ನಾಡಧ್ವಜದ ಮಹತ್ವವೇನು ಎಂಬುದು ಅವರಿಗೆ ಗೊತ್ತಿಲ್ಲ. ಹೀಗಿರುವಾಗ ನಾಡಧ್ವಜ ಬದಲಾವಣೆ ಮಾಡುವ ಅಗತ್ಯವೇನಿತ್ತು? ಸರ್ಕಾರದ ಧ್ವಜವನ್ನು ನಾವು ತಿರಸ್ಕಾರ ಮಾಡುತ್ತೇವೆ. ಗಂಡಭೇರುಂಡದ ಬದಲು ಕರ್ನಾಟಕದ ಮ್ಯಾಪ್‌ ಬರಲಿ. ಆದರೆ ಬಾವುಟದಲ್ಲಿ ಬಿಳಿ ಬಣ್ಣ ಇರಬಾರದು. ಅದನ್ನು ಕನ್ನಡಿಗರು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ರಾಜ್ಯ ನಾಡಧ್ವಜವನ್ನು ಸೃಷ್ಟಿಮಾಡಲು ಹೊರಟಿದೆ. ಅದರ ಪ್ರಕಾರ ಸಮಿತಿಯನ್ನು ರಚಿಸಿತ್ತು. ಸರ್ಕಾರಕ್ಕೆ ಈ ಕೆಲಸ ಬೇಕಾಗಿರಲಿಲ್ಲ. ಹಳದಿ, ಕೆಂಪು ಬಣ್ಣವನ್ನು ರಾಜ್ಯದ ಜನತೆ ಮಾತ್ರವಲ್ಲ ದೇಶ, ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರೂ ಒಪ್ಪಿಕೊಂಡಿದ್ದು, ಸುಮಾರು 50 ವರ್ಷಗಳಿಂದಲೂ ಗೌರವಯುತವಾಗಿ ಬಳಸುತ್ತಿದ್ದಾರೆ. ಹೀಗಿದ್ದರೂ ಅದೇ ಬಾವುಟದ ಬಣ್ಣವನ್ನು ಬದಲಾವಣೆ ಮಾಡಲು ಸರ್ಕಾರ ಹೊರಟಿದೆ. ಧ್ವಜದ ಮಧ್ಯದಲ್ಲಿ ಬಿಳಿ ಬಣ್ಣ ಹಾಕಿ ಗಂಡಭೇರುಂಡ ಲಾಂಛನ ಹಾಕಲು ಹೊರಟಿರುವುದು ಸರಿಯಲ್ಲ. ಸರ್ಕಾರಕ್ಕೆ ಬುದ್ಧಿ ಇಲ್ವಾ ? ಮೊದಲು ಸಮಿತಿ ನೀಡಿರುವ ವರದಿಯನ್ನು ಮೂಟೆ ಕಟ್ಟಿಪಕ್ಕಕ್ಕೆ ಇಡಲಿ ಎಂದು ವಾಟಾಳ್‌ ನಾಗರಾಜ್‌ ಕಿಡಿ ಕಾರಿದರು.

ಮ.ರಾಮಮೂರ್ತಿ ಅವರು ಬಾವುಟ ರಚನೆ ಮಾಡಿದಾಗಿನಿಂದ ನಾನು ಕನ್ನಡಪರ ಹೋರಾಟದಲ್ಲಿದ್ದೇನೆ. ಧ್ವಜ ಬದಲಾವಣೆ ಮಾಡುವಾಗ ನನ್ನ ಅಭಿಪ್ರಾಯ ಪಡೆಯಲಿಲ್ಲ. ತರಾತುರಿಯಲ್ಲಿ ಧ್ವಜ ಬದಲಾವಣೆಗೆ ಶಿಫಾರಸು ಮಾಡಲಾಗಿದೆ. ಯಾವುದೇ ಕಾರಣಕ್ಕೂ ತ್ರಿವರ್ಣ ಧ್ವಜವನ್ನು ಹೊಸ ನಾಡಧ್ವಜವಾಗಿ ಚಲಾವಣೆಗೆ ಬರಲು ಬಿಡುವುದಿಲ್ಲ. ಧ್ವಜ ಸಮಿತಿಯ ಶಿಫಾರಸು ಜಾರಿಗೆ ತಂದರೆ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ. ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಹಾಗೂ 55 ವರ್ಷಗಳ ಇತಿಹಾಸವುಳ್ಳ ಹಳದಿ ಮತ್ತು ಕೆಂಪು ಬಣ್ಣದ ಧ್ವಜವನ್ನೇ ನಾಡಧ್ವಜವಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.

ವಾಟಾಳ್‌ ನಾಗರಾಜ್‌ ಅವರು ಸುಮಾರು 55 ವರ್ಷಗಳಿಂದ ಕನ್ನಡ ನಾಡು, ನುಡಿಗಾಗಿ ಹೋರಾಟ ಮಾಡುತ್ತಿರುವ ಹಿರಿಯರು. ಪ್ರತ್ಯೇಕ ನಾಡ ಧ್ವಜ ರೂಪಿಸುವ ಕುರಿತು ಅವರ ಸಲಹೆ ಪಡೆಯಬೇಕಿತ್ತು. ಹಳದಿ, ಕೆಂಪು ಬಣ್ಣದ ಬಾವುಟವನ್ನು ಎಲ್ಲರೂ ಒಪ್ಪಿದ್ದಾರೆ. ರಾಜ್ಯ ಲಾಂಛನಕ್ಕಾಗಿಯೇ ಬಿಳಿಯ ಬಣ್ಣ ಸೇರಿಸಲಾಗಿದ್ದರೆ ಅದು ತಪ್ಪು. ನಮ್ಮ ಸಂಸ್ಕೃತಿ ಬಿಂಬಿಸುವ ಹಳದಿ, ಕೆಂಪು ಬಾವುಟದಲ್ಲಿ ಬೇಕಾದರೆ ಲಾಂಛನ ಬಳಸಿಕೊಳ್ಳಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಮ್ಮ ಮನವಿ ಎಂದರೆ, ಯಾವುದೇ ಕಾರಣಕ್ಕೂ ತ್ರಿವರ್ಣ ಧ್ವಜಕ್ಕೆ ಒಪ್ಪಿಗೆ ಕೊಡಬೇಡಿ. ನಾಡಿನ ಜನರು ಭಾವನಾತ್ಮಕವಾಗಿ ಒಪ್ಪಿರುವ ಮೂಲ ಧ್ವಜವನ್ನೇ ರಾಜ್ಯ ಲಾಂಛನವಾಗಿ ಬಳಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಿಕೊಡಿ. ಅದನ್ನು ಬಿಟ್ಟು, ಧ್ವಜ ಸಮಿತಿ ನೀಡಿರುವ ಮಾದರಿ ಧ್ವಜಕ್ಕೆ ಆದ್ಯತೆ ಕೊಡಬೇಡಿ.

- ಸಾ.ರಾ.ಗೋವಿಂದು, ಅಧ್ಯಕ್ಷ , ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ವರದಿ ಬಂದಿದೆ ಪರಿಶೀಲಿಸಿ ಕ್ರಮ

ಪ್ರತ್ಯೇಕ ಕನ್ನಡ ಧ್ವಜ ವರದಿ ನೀಡುವಂತೆ ರಚಿಸಲಾಗಿದ್ದ ಧ್ವಜ ಸಮಿತಿಯು ವರದಿ ಕೊಟ್ಟಿದೆ. ವರದಿಯಲ್ಲಿ ಏನಿದೆ ಎಂಬುದನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.

- ಸಿದ್ದರಾಮಯ್ಯ, ಮುಖ್ಯಮಂತ್ರಿ

 

loader