ರಾಜ್ಯ​ದಲ್ಲೂ ಕಂಬಳ ಆಚ​ರಣೆಗೆ ಅನು​ಮತಿ ನೀಡ​ಬೇ​ಕೆಂದು ನವ​ರಸ ನಾಯಕ ನಟ ಜಗ್ಗೇಶ್‌ ಟ್ವೀಟ್‌ ಮಾಡುವ ಮೂಲಕ ಹೋರಾ​ಟಕ್ಕೆ ಮುನ್ನುಡಿ ಬರೆ​ದಿ​ದ್ದಾರೆ. ಚಿತ್ರನಟರಾದ ರಕ್ಷಿತ್‌ ಶೆಟ್ಟಿ, ಶುಭಾ ಪೂಂಜಾ ಅವ​ರು ಕಂಬಳ ಪರ ನಿಂತಿ​ದ್ದಾ​ರೆ. ಅಷ್ಟೇ ಅಲ್ಲದೇ ಮಾಜಿ ಮುಖ್ಯ​ಮಂತ್ರಿ ಎಚ್‌.​ಡಿ. ಕು​ಮಾ​ರ​ಸ್ವಾಮಿ, ಸಚಿ​ವ​ರಾದ ಆರ್‌.ವಿ. ದೇಶ​ಪಾಂಡೆ, ಎ. ಮಂಜು, ಕೆಪಿ​ಸಿಸಿ ಕಾರ್ಯಾ​ಧ್ಯಕ್ಷ ದಿನೇಶ್‌ ಗುಂಡೂ​ರಾ​ವ್‌ ಅವರು ಕಂಬಳ ಆಚ​ರ​ಣೆಗೆ ಬೆಂಬಲ ವ್ಯಕ್ತ​ಪ​ಡಿ​ಸಿ​ದ್ದಾ​ರೆ.

ಮಂಗಳೂರು/ಬೆಂಗಳೂರು(ಜ.22): ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಯ ಅನುಮತಿಗಾಗಿ ಸತತ 5 ದಿನಗಳಿಂದ ನಡೆದ ಜನಾಗ್ರಾಹಕ್ಕೆ ಕೊನೆಗೂ ಕೇಂದ್ರ ಸರ್ಕಾರ ಮಣಿದಿದೆ. ಈಗ ರಾಜ್ಯದಲ್ಲಿ ಎದ್ದಿರೋ ಕಂಬಳದ ಅಸ್ತಿತ್ವದ ಪ್ರಶ್ನೆ. ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ರಕ್ಷಿಸಿ ಅನ್ನೋ ಕೂಗಿಗೆ ದನಿಗಳು ಸೇರಲಾರಂಭಿಸಿವೆ.

ರಾಜ್ಯದ ಜಾನಪದ ಕ್ರೀಡೆ ಕಂಬಳ.. ಪ್ರಾಣಿ ಹಿಂಸೆ ಕಾರಣದಿಂದ ತುಳುನಾಡಿನ ಗ್ರಾಮೀಣ ಕ್ರೀಡೆಗೆ ನಿಷೇಧ ಹೇರಲಾಗಿದೆ. ತಮಿಳಿನ ಜಲ್ಲಿಕಟ್ಟಿಗೆ ಸಿಕ್ಕ ಜಯ ನಮಗೇಕೆ ಸಿಗುತ್ತಿಲ್ಲ.. ಕಂಬಳ ಕಾಪಾಡಿ ಶೀರ್ಷಿಕೆಯಡಿ ಸುವರ್ಣ ನ್ಯೂಸ್ ಆರಂಭಿಸಿದ ಅಭಿಯಾನಕ್ಕೆ ಬೆಂಬಲ ಸಿಕ್ಕಿದೆ.ಸಾಮಾಜಿಕ ಜಾಲ ತಾಣಗಳಲ್ಲೂ ಬಲ ಸಿಕ್ಕಿದ್ದು.ಒಕ್ಕೊರಲ ಮಂತ್ರ ಜಪಿಸಿದ್ದಾರೆ.

ತಮಿ​ಳು​ನಾ​ಡಿನ ಜಲ್ಲಿ​ಕ​ಟ್ಟಿ​ಗಾಗಿ ಅಲ್ಲಿನ ಜನರು, ಸಿನಿಮಾ ನಟರು ಮತ್ತು ರಾಜ​ಕಾರ​ಣಿ​ಗಳು ಪಕ್ಷಾ​ತೀ​ತ​ವಾಗಿ ಹೋರಾ​ಡಿದ ಪರಿ​ಣಾ​ಮ ಸುಗ್ರೀ​ವಾಜ್ಞೆಗೆ ಕೇಂದ್ರ ಸಮ್ಮತಿ ಸೂಚಿ​ಸಿದೆ. ರಾಜ್ಯ​ದಲ್ಲೂ ಕಂಬಳ ಆಚ​ರಣೆಗೆ ಅನು​ಮತಿ ನೀಡ​ಬೇ​ಕೆಂದು ನವ​ರಸ ನಾಯಕ ನಟ ಜಗ್ಗೇಶ್‌ ಟ್ವೀಟ್‌ ಮಾಡುವ ಮೂಲಕ ಹೋರಾ​ಟಕ್ಕೆ ಮುನ್ನುಡಿ ಬರೆ​ದಿ​ದ್ದಾರೆ. ಚಿತ್ರನಟರಾದ ರಕ್ಷಿತ್‌ ಶೆಟ್ಟಿ, ಶುಭಾ ಪೂಂಜಾ ಅವ​ರು ಕಂಬಳ ಪರ ನಿಂತಿ​ದ್ದಾ​ರೆ. ಅಷ್ಟೇ ಅಲ್ಲದೇ ಮಾಜಿ ಮುಖ್ಯ​ಮಂತ್ರಿ ಎಚ್‌.​ಡಿ. ಕು​ಮಾ​ರ​ಸ್ವಾಮಿ, ಸಚಿ​ವ​ರಾದ ಆರ್‌.ವಿ. ದೇಶ​ಪಾಂಡೆ, ಎ. ಮಂಜು, ಕೆಪಿ​ಸಿಸಿ ಕಾರ್ಯಾ​ಧ್ಯಕ್ಷ ದಿನೇಶ್‌ ಗುಂಡೂ​ರಾ​ವ್‌ ಅವರು ಕಂಬಳ ಆಚ​ರ​ಣೆಗೆ ಬೆಂಬಲ ವ್ಯಕ್ತ​ಪ​ಡಿ​ಸಿ​ದ್ದಾ​ರೆ.

‘ನೆಲಕ್ಕೊಂದೇ ಕಾನೂನು ಇರಬೇಕು. ಜಲ್ಲಿಕಟ್ಟು ಮೇಲಿನ ನಿಷೇಧ ತೆರವಿಗೆ ತಮಿಳುನಾಡು ಸರ್ಕಾರ ಮಾತ್ರವಲ್ಲ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮದಂತೆ ರಾಜ್ಯ ಸರ್ಕಾರವೂ ಕ್ರಮ ಕೈಗೊಳ್ಳಬೇಕು. ಈ ಕುರಿತು ಕೇಂದ್ರದೊಂದಿಗೆ ತಕ್ಷಣ ಚರ್ಚಿಸಬೇಕು. ರಾಜ್ಯದ ಕೇಂದ್ರ ಸಚಿವರು, ಸಂಸದರ ಜತೆಗೆ ರಾಜ್ಯ ಸರ್ಕಾರ ಕೂಡ ಕಂಬಳದ ಮೇಲಿನ ನಿಷೇಧ ತೆರವಿಗೆ ತಮಿಳುನಾಡು ಮಾದರಿಯಲ್ಲೇ ಕ್ರಮ ಕೈಗೊಳ್ಳಬೇಕು' ಎಂದು ಚಿತ್ರ​ನ​ಟರು ಆಗ್ರಹಿಸಿದ್ದಾರೆ.

ಜಲ್ಲಿಕಟ್ಟು ವಿಚಾರದಲ್ಲಿ ಪ್ರಧಾನಮಂತ್ರಿ​ಯವರೇ ಅಲುಗಾಡಿ, ಸುಪ್ರೀಂ ಕೋರ್ಟ್‌ ತೀರ್ಪನ್ನೂ ಬದಲಿಸುವಂತಾಗಿದೆ. ತಮಿಳುನಾಡಿನಲ್ಲಿ ನಡೆದ ಹೋರಾಟಕ್ಕೆ ಕೇಂದ್ರ ತಕ್ಷಣ ಸ್ಪಂದಿಸಿದೆ. ಆದರೆ ರಾಜ್ಯದ ಮಹದಾಯಿ, ಕಾವೇರಿ ಹೋರಾಟಗಳಿಗೆ ಸ್ಪಂದನೆಯೇ ಇಲ್ಲವಾಗಿದೆ. ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯಕ್ಕೆ ಇದು ಸಾಕ್ಷಿಯಾಗಿದ್ದು, ರಾಜ್ಯದಲ್ಲೂ ಪ್ರಾದೇಶಿಕ ಪಕ್ಷವೊಂದು ಅಧಿಕಾರಕ್ಕೆ ಬರಬೇಕಿದೆ ಎಂದು ಜೆಡಿ​ಎಸ್‌ ರಾಜ್ಯಾ​ಧ್ಯಕ್ಷ ಎಚ್‌.​ಡಿ.​ಕು​ಮಾ​ರ​ಸ್ವಾಮಿ ಪ್ರತಿ​ಕ್ರಿ​ಯಿ​ಸಿ​ದ್ದಾರೆ.

ಇಂದು ಸಭೆ

ಜಲ್ಲಿಕಟ್ಟು ಮಾದರಿಯಲ್ಲಿ ಕಂಬಳಕ್ಕಾಗಿ ಮತ್ತೊಮ್ಮೆ ಸುಗ್ರೀವಾಜ್ಞೆಯನ್ನು ಹೊರಡಿಸಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆಯನ್ನೂ ಕಂಬಳ ಸಂಘಟಕರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಂದಿಟ್ಟಿದ್ದಾರೆ. ಅಲ್ಲದೆ ಕಂಬಳ ನಿಷೇಧದ ವಿರುದ್ಧ ಮುಂದಿನ ಹೋರಾಟದ ಹೆಜ್ಜೆಯನ್ನು ರೂಪಿಸಲು ಜ.22ರಂದು ದ.ಕ. ಜಿಲ್ಲೆಯ ಮೂಡುಬಿದಿರೆಯಲ್ಲಿ ಉಭಯ ಜಿಲ್ಲೆಗಳ ಕಂಬಳ ಸಂಘಟಕರ ಸಭೆ ಕರೆಯಲಾಗಿದೆ.

ಕಂಬಳ ಸಂಘಟಕರಿಗೆ ಇಕ್ಕಟ್ಟು

ಇದುವರೆಗೆ ಕಂಬಳ ನಿಷೇಧದ ವಿರುದ್ಧ ಕಂಬಳ ಸಂಘಟಕರು ಹೈಕೋರ್ಟ್‌ನಲ್ಲಿ ವಾದ ಮಂಡಿಸಿರುವುದು ಕಂಬಳ ಬೇರೆ, ಜಲ್ಲಿಕಟ್ಟು ಬೇರೆ ಎಂದು. ಆದರೆ ಕೇಂದ್ರ ಸರ್ಕಾರ ಜಲ್ಲಿಕಟ್ಟು ಕ್ರೀಡೆಗೆ ಜಾನಪದ ಅವಕಾಶ ನೀಡಿ ಸುಗ್ರೀವಾಜ್ಞೆಗೆ ಅನು​ಮತಿ ನೀಡಿ​ರು​ವುದು ಕಂಬಳಕ್ಕೂ ಅನ್ವಯವಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಒಂದು ವೇಳೆ ಸುಗ್ರೀವಾಜ್ಞೆ ಕೇವಲ ಜಲ್ಲಿಕಟ್ಟು ಕ್ರೀಡೆಗೆ ಮಾತ್ರ ಅನ್ವಯ ಎಂದಾದರೆ, ಕಂಬಳಕ್ಕೆ ಮತ್ತೊಮ್ಮೆ ಸುಗ್ರೀವಾಜ್ಞೆ ಹೊರಡಿಸಲು ಸಾಧ್ಯವಿಲ್ಲವೇ ಎಂಬ ಜಿಜ್ಞಾಸೆ ಕಂಬಳ ಸಂಘಟಕರನ್ನು ಕಾಡುತ್ತಿದೆ. 
ಕಂಬಳ ಹಾಗೂ ಜಲ್ಲಿಕಟ್ಟು ಬೇರೆ ಬೇರೆ ಕ್ರೀಡೆ. ಕಂಬಳದಲ್ಲಿ ಕೋಣಗಳಿಗೆ ಹಿಂಸೆ ಇಲ್ಲ. ಹಿಂಸೆ ಇಲ್ಲದೆಯೇ ಕಂಬಳವನ್ನು ಕಳೆದ ವರ್ಷ ನಡೆಸಿದ್ದೇವೆ. ತಹಸೀಲ್ದಾರ್‌, ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಇದನ್ನು ದೃಢಪಡಿಸಿದ್ದಾರೆ. ಹಾಗಾಗಿ ಕಂಬಳ ಕ್ರೀಡೆ ನಡೆಸಲು ಅವಕಾಶ ಕೊಡಬೇಕು ಎಂದು ಕಂಬಳ ಸಂಘಟಕರು ಈಗಾಗಲೇ ಹೈಕೋರ್ಟ್‌ನಲ್ಲಿ ದಾಖಲೆಗಳನ್ನು ಮಂಡಿಸಿದ್ದಾರೆ. ಆದರೆ ಜಲ್ಲಿಕಟ್ಟುವಿನ ಅಂತಿಮ ತೀರ್ಪಿಗಾಗಿ ಹೈಕೋರ್ಟ್‌ ವಿಚಾರಣೆಯನ್ನು ಮುಂದೂಡುತ್ತಲೇ ಇತ್ತು. ಇದೀಗ ಜಲ್ಲಿ​ಕಟ್ಟು ಆಚ​ರ​ಣೆಗೆ ಸುಗ್ರೀವಾಜ್ಞೆ ಹೊರಡಿಸಿರುವುದರಿಂದ ಕಂಬಳ ಕುರಿತಂತೆ ಹೈಕೋರ್ಟ್‌ನ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಾಗಿದೆ ಎನ್ನುವುದು ಕಾನೂನು ತಜ್ಞರುಗಳ ಅಭಿಪ್ರಾಯ.

-

ಯಾರುಒಪ್ಪುತ್ತಾರೋ ಬಿಡುತ್ತಾರೋ. ನಾನು ದಕ್ಷಿಣ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಯಾದ ಕಂಬಳ ಆಚರಣೆಗೆ ಅವಕಾಶ ನೀಡಬೇಕು ಅಂತ ಕೂಗು ಹಾಕಿಯೇ ಹಾಕುತ್ತೇನೆ. ನಮ್ಮ ಹಕ್ಕು ಹಾಗೂ ನಮ್ಮ ಪದ್ಧತಿಯನ್ನು ನಿಲ್ಲಿಸಲು ಯಾರಿಗೂ ಹಕ್ಕಿಲ್ಲ.
-ಜಗ್ಗೇಶ್‌, ಚಿತ್ರನಟ

ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳ ನಡೆಯಬೇಕು ಎಂಬುದರ ಪರ ಕಾಂಗ್ರೆಸ್‌ ಇದೆ. ಕಂಬಳ ಕ್ರೀಡೆಯ ಕುರಿತ ಜನಾಭಿಪ್ರಾಯವನ್ನು ನ್ಯಾಯಾಲಯಗಳು ಪರಿಗಣಿಸಬೇಕು

-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ,

ಕಂಬಳದ ಮೇಲಿನ ನಿಷೇಧ ಹಿಂತೆಗೆತಕ್ಕೆ ಸಂಘಟಿತ ಪ್ರಯತ್ನ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಕಾನೂನು ಸಚಿವರು ಕೇಂದ್ರ ಸರ್ಕಾರಕ್ಕೆ ಪ್ರಬಲ ಬೇಡಿಕೆ ಸಲ್ಲಿಸಬೇಕು. ಕೇಂದ್ರಕ್ಕೆ ಈ ಬಗ್ಗೆ ಮನವಿ ಸಲ್ಲಿಸಿದ್ದೇನೆ.
-ನಳಿನ್‌ ಕುಮಾರ್‌ ಕಟೀಲ್‌, ಸಂಸದ

ಜಲ್ಲಿಕಟ್ಟು, ಕಂಬಳ ಒಂದೇ ಎಂದು ಸುಪ್ರೀಂ ಕೋರ್ಟ್‌ ನಲ್ಲಿ ‘ಪೆಟಾ' ವಾದ ಮಂಡಿಸಿದೆ. ಆದ್ದರಿಂದ ಈಗ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯನ್ನು ಕಂಬಳಕ್ಕೂ ಅನ್ವಯಿಸಬೇಕು. 
-ಶಾಂತಾರಾಮ ಶೆಟ್ಟಿ ,ಕಂಬಳ ಸಮಿತಿ

ತಮಿಳುನಾಡಿನ ಜಲ್ಲಿಕಟ್ಟುವಿಗೆ ಕೇಂದ್ರ ಸುಗ್ರಿವಾಜ್ಞೆ ಜಾರಿಗೊಳಿಸಿದಂತೆ ಕಂಬಳ ಬಗ್ಗೆಯೂ ಹೋರಾಟಗಾರರು ಸರ್ಕಾರಕ್ಕೆ ಬೇಡಿಕೆಯನ್ನಿಡುವ ಮೂಲಕ ಗಮನಕ್ಕೆ ಬರಬೇಕು. ಆಗ ಸರ್ಕಾರ ಪರಿಶೀಲನೆ ನಡೆಸಲಿದೆ.
-ಆರ್‌ ವಿ ದೇಶಪಾಂಡೆ, ಸಚಿವ

ರಾಜ್ಯದಿಂದ ಆರಿಸಿ ಹೋಗಿರುವ ಬಿಜೆಪಿಯ 17 ಸಂಸದರು ಕರಾವಳಿ ಭಾಗದ ಕಂಬಳ ಕ್ರೀಡೆಗೂ ಅನುಮತಿ ದೊರಕಿಸಿಕೊಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. 
-ಎ ಮಂಜು, ಪಶುಸಂಗೋಪನಾ ಸಚಿವ


ಕೇಂದ್ರದ ಸುಗ್ರೀವಾಜ್ಞೆ ಕಂಬಳ ನಡೆಸುವವರಿಗೆ ವರವಾಗಿ ಪರಿಣಮಿಸಬಹುದು. ಜಲ್ಲಿಕಟ್ಟು, ಕಂಬಳವನ್ನು ಒಂದೇ ವರ್ಗಕ್ಕೆ ಸೇರಿಸಿರುವುದರಿಂದ ಕಂಬಳವನ್ನು ಮುಂದುವರಿಸಲು ಅವಕಾಶ ನೀಡುವಂತೆ ಹೈಕೋರ್ಟ್‌ನ್ನು ಕೋರುತ್ತೇವೆ. 
-ಪವನ್‌ ಕುಮಾರ್‌ ವಕೀಲ

ಜಲ್ಲಿಕಟ್ಟು ಹೋರಾಟಕ್ಕೆ ತಕ್ಷಣ ಸ್ಪಂದಿಸಿರುವ ಕೇಂದ್ರ ಸರ್ಕಾರ ರಾಜ್ಯದಲ್ಲಿ ನಡೆಯುತ್ತಿರುವ ಮಹದಾಯಿ ಮತ್ತು ಕಾವೇರಿ ಮೊದಲಾದ ಹೋರಾಟ ಗಳಿಗೇಕೆ ಸ್ಪಂದಿಸುತ್ತಿಲ್ಲ. ಪ್ರಾದೇಶಿಕ ಪಕ್ಷದ ಪ್ರಾಬಲ್ಯತೆಗೆ ಇದು ಸಾಕ್ಷಿ. 
-ಎಚ್‌ ಡಿ ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ