ಕಳೆದ ವರ್ಷ ತಮಿಳುನಾಡಿನಾದ್ಯಂತ ತೀವ್ರ ಹೋರಾಟ ವ್ಯಕ್ತವಾದ ಬಳಿಕ ಜಲ್ಲಿಕಟ್ಟುಗೆ ಕಾನೂನು ಮಾನ್ಯತೆ ನೀಡಲಾಗಿತ್ತು. ಆ ಬಳಿಕ ಎಚ್ಚೆತ್ತುಕೊಂಡ ರಾಜ್ಯ ಸರಕಾರವು ಕಂಬಳದ ರಕ್ಷಣೆಗಾಗಿ ಒಮ್ಮತಾಭಿಪ್ರಾಯದಲ್ಲಿ ವಿಧಾನಮಂಡಲದಲ್ಲಿ ವಿಶೇಷ ವಿಧೇಯಕ ಮಾಡಿತು.
ನವದೆಹಲಿ(ಜುಲೈ 03): ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟುಗೆ ಹಸಿರುನಿಶಾನೆ ಸಿಕ್ಕಂತೆಯೇ ಕರ್ನಾಟಕ ಕರಾವಳಿಯ ವಿಶಿಷ್ಟ ಕ್ರೀಡೆ ಕಂಬಳಕ್ಕೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕಂಬಳಕ್ಕೆ ಕಾನೂನು ಸಮ್ಮತಿ ತರುವ ವಿಶೇಷ ವಿಧೇಯಕಕ್ಕೆ ರಾಷ್ಟ್ರಪತಿಗಳು ಅಂಗೀಕಾರ ಹಾಕಿದ್ದಾರೆ. ಇದರೊಂದಿಗೆ, ಕಂಬಳ ಕ್ರೀಡೆಯು ಕಾನೂನುಬದ್ಧವಾಗಲಿದೆ.
ಜಲ್ಲಿಕಟ್ಟು, ಕಂಬಳ ಮೊದಲಾದ ಹಲವು ದೇಶೀಯ ಸಾಂಪ್ರದಾಯಿಕ ಕ್ರೀಡೆಗಳನ್ನು ಅಮಾನವೀಯತೆಯ ಕಾರಣವೊಡ್ಡಿ ಸುಪ್ರೀಂಕೋರ್ಟ್ ನಿಷೇಧ ಹೇರಿತ್ತು. ಆದರೆ, ಕಳೆದ ವರ್ಷ ತಮಿಳುನಾಡಿನಾದ್ಯಂತ ತೀವ್ರ ಹೋರಾಟ ವ್ಯಕ್ತವಾದ ಬಳಿಕ ಜಲ್ಲಿಕಟ್ಟುಗೆ ಕಾನೂನು ಮಾನ್ಯತೆ ನೀಡಲಾಗಿತ್ತು. ಆ ಬಳಿಕ ಎಚ್ಚೆತ್ತುಕೊಂಡ ರಾಜ್ಯ ಸರಕಾರವು ಕಂಬಳದ ರಕ್ಷಣೆಗಾಗಿ ವಿಧಾನಮಂಡಲದಲ್ಲಿ ವಿಶೇಷ ವಿಧೇಯಕ ಮಂಡಿಸಿತು. ಅದಕ್ಕೆ ವಿಧಾನಮಂಡಲ ಒಮ್ಮತದಿಂದ ಅನುಮೋದನೆ ಮಾಡಿತು. ಆನಂತರ, ಈ ಪ್ರಸ್ತಾವನೆಯನ್ನು ರಾಜ್ಯಪಾಲರಿಗೆ ಕಳುಹಿಸಲಾಯಿತು. ರಾಜ್ಯಪಾಲರು ಅದನ್ನು ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಳುಹಿಸಿದ್ದರು.
