ಚೆನ್ನೈ[ಫೆ.18]: ಸಿನಿಮಾ ಕ್ಷೇತ್ರದ ಬಳಿಕ ರಾಜಕೀಯಕ್ಕೆ ಎಂಟ್ರಿ ಮಾಡಿದ್ದ ದಕ್ಷಿಣ ಭಾರತದ ಸೂಪರ್ ಸ್ಟಾರ್ ಕಮಲ್ ಹಾಸನ್ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ. ಒಂದೆಡೆ ಉಗ್ರರು ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ದಾಳಿಗೆ ದೇಶದಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಹೀಗಿರುವಾಗಲೇ ಕಮಲ್ ಹಾಸನ್ ಪಾಕ್ ಆಕ್ರಮಿತ ಕಾಶ್ಮೀರವನ್ನು ಸ್ವತಂತ್ರ ಕಾಶ್ಮೀರ ಎಂದು ಘೋಷಿಸುವ ಕುರಿತಾಗಿ ಜನಾಭಿಪ್ರಾಯ ಸಂಗ್ರಹಿಸುವ ಮಾತುಗಳನ್ನಾಡಿ ವಿವಾದಕ್ಕೀಡಾಗಿದ್ದಾರೆ.

ಸಂದರ್ಶನವೊಂದರಲ್ಲಿ ಕಾಶ್ಮೀರದ ವಿಚಾರವಾಗಿ ಭಾರತ ಅನುಸರಿಸುತ್ತಿರುವ ಧೋರಣೆಗೆ ಸವಾಲೆಸೆದಿರುವ ಕಮಲ್ ಹಾಸನ್ 'ಸರ್ಕಾರವು ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ಯಾಕೆ ಹಿಂದೇಟು ಹಾಕುತ್ತಿದೆ? ಕಾಶ್ಮೀರದ ಜನರು ಭಾರತದೊಂದಿಗೆ ಬರಲು ಇಚ್ಛಿಸುತ್ತಾರಾ? ಪಾಕಿಸ್ತಾನಕ್ಕೆ ಸೇರಲಿಚ್ಛಿಸುತ್ತಾರಾ? ಅಥವಾ ಸ್ವತಂತ್ರ ಪ್ರತ್ಯೇಕ ದೇಶ ರೂಪಿಸಲು ಇಚ್ಛಿಸುತ್ತಾರಾ ಎಂದು ಅಭಿಪ್ರಾಯ ಸಂಗ್ರಹಿಸಿ. ಹಲವಾರು ಸಂಘಟನೆಗಳು ಈಗಾಗಲೇ ಇಂತಹ ಸರ್ವೆ ಮಾಡಲು ಬೇಡಿಕೆ ಇಟ್ಟಿವೆ. ಒಂದು ವೇಳೆ ಭಾರತ ತಾನೊಂದು ಅತ್ಯುತ್ತಮ ರಾಷ್ಟ್ರ ಎಂದು ಸಾಬೀತುಪಡಿಸಬೇಕಾದರೆ, ಕಾಶ್ಮೀರದ ವಿಚಾರವಾಗಿ ಈಗ ಅನುಸರಿಸುತ್ತಿರುವ ನೀತಿಗೆ ಕಡಿವಾಣ ಹಾಕಬೇಕು' ಎಂದಿದ್ದಾರೆ.

ಚೆನ್ನೈನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕಮಲ್ ಹಾಸನ್ 'ಸೈನಿಕರು ಕಾಶ್ಮೀರಕ್ಕೆ ಸಾಯಲು ಹೋಗುತ್ತಾರೆ ಎಂದು ಜನರು ಮಾತನಾಡುವಾಗ ನನಗೆ ಬಹಳ ಸಂಕಟವಾಗುತ್ತದೆ. ಸೇನೆ ಕೂಡಾ ಹಳೆಯ ಫ್ಯಾಷನ್ ನಂತೆ. ಬದಲಾಗುತ್ತಿರುವ ವಿಶ್ವವನ್ನು ಗಮನಿಸಿದಾಗ ಮನುಷ್ಯರು ತಮ್ಮ ಹೊಟ್ಟೆಪಾಡಿಗಾಗಿ ಮತ್ತೊಬ್ಬ ವ್ಯಕ್ತಿಯನ್ನು ಕೊಲ್ಲುವುದಿಲ್ಲ ಎಂದು ಹೇಗೆ ಹೇಳಲು ಸಾಧ್ಯ? ನಮ್ಮ ಹೋರಾಟ ನಿಲ್ಲಿಸಬೇಕಾದ ಸಮಯ ಬರುತ್ತದೆ. ಕಳೆದ 10 ವರ್ಷಗಳಲ್ಲಿ ನಾವಿದನ್ನು ಕಲಿತಿಲ್ಲವೇ?' ಎಂದು ಪ್ರಶ್ನಿಸಿದ್ದಾರೆ.

'ನಾನು ನಿಯತಕಾಲಿಗೆ ಪ್ರಕಟಿಸುತ್ತಿದ್ದ ಸಂದರ್ಭದಲ್ಲೂ ಕಾಶ್ಮೀರದ ಸಮಸ್ಯೆ ಬಗ್ಗೆ ಬಹಳಷ್ಟು ಬರೆದಿದ್ದೆ. ಆ ಸಂದರ್ಭದಲ್ಲಿ ನಾನೇನು ಭವಿಷ್ಯ ನುಡಿದಿದ್ದೆನೋ ಅದೇ ಇಂದು ಕಾಶ್ಮೀರದಲ್ಲಿ ನಡೆಯುತ್ತಿದೆ ಎಂದು ನನಗೆ ಬಹಳಷ್ಟು ನೋವಾಗುತ್ತಿದೆ.  ನಾನಂದು ಬೇರೆ ಭವಿಷ್ಯ ಬರೆಯಬೇಕಿತ್ತು. ಆದರೆ ಇಂದು ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹಿಸಬೇಕಾಗಿದೆ. ಅಲ್ಲಿನ ಜನರಿಗೂ ಮಾತನಾಡುವ ಸ್ವಾತಂತ್ರ್ಯ ನೀಡಬೇಕು. ಅವರೇಕೆ ಸರ್ವೆ ಮಾಡುತ್ತಿಲ್ಲ? ಅವರಿಗೆ ಯಾಕೆ ಭಯ? ಅವರು ದೇಶವನ್ನು ವಿಭಜಿಸಲು ಇಚ್ಛಿಸುತ್ತಾರೆ ಬೇರೇನೂ ಅಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.