ಬೆಂಗಳೂರು (ಜೂ. 01): ಹಿರಿಯ ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ ಕೊಲೆ ಪ್ರಕರಣದ ಸಂಬಂಧ ಮಹತ್ವದ ಕಾರ್ಯಾಚರಣೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) 4 ವರ್ಷಗಳ ಬಳಿಕ ಶೂಟರ್‌ ಮತ್ತು ರೈಡರ್‌ನನ್ನು ಪತ್ತೆಹಚ್ಚಿದೆ ಎಂದು ತಿಳಿದುಬಂದಿದೆ.

ಪತ್ರಕರ್ತೆ ಗೌರಿ ಲಂಕೇಶ್‌ ಕೊಲೆ ಪ್ರಕರಣದಲ್ಲಿ ಬೈಕ್‌ ರೈಡರ್‌ ಆಗಿದ್ದ ಗಣೇಶ್‌ ಮಿಸ್ಕಿನ್‌ನೇ ಕಲ್ಬುರ್ಗಿ ಹತ್ಯೆಯಲ್ಲಿ ಶೂಟರ್‌ ಎನ್ನಲಾಗಿದ್ದು, ಈಗಾಗಲೇ ಗೌರಿ ಪ್ರಕರಣದಲ್ಲಿ ಆತ ಬಂಧಿತನಾಗಿ ಜೈಲಿನಲ್ಲಿದ್ದಾನೆ.

ಹುಬ್ಬಳ್ಳಿಯಲ್ಲಿ ಗುರುವಾರ ಕಲ್ಬುರ್ಗಿ ಹತ್ಯೆ ಪ್ರಕರಣದ ಬೈಕ್‌ ರೈಡರ್‌ ಕೃಷ್ಣಮೂರ್ತಿ ಸಿಕ್ಕಿಬಿದ್ದಿದ್ದು, ಕಲ್ಬುರ್ಗಿ ಅವರ ಮನೆಗೆ ಶೂಟರ್‌ನನ್ನು ಬೈಕ್‌ನಲ್ಲಿ ಕೃಷ್ಣಮೂರ್ತಿ ಕರೆದುಕೊಂಡು ಹೋಗಿದ್ದ. ಈ ಕುರಿತು ಪುರಾವೆಗಳು ಲಭಿಸಿವೆ ಎಂದು ಎಸ್‌ಐಟಿ ಮೂಲಗಳು ಮಾಹಿತಿ ನೀಡಿವೆ.

ಕಲ್ಬುರ್ಗಿ ಹತ್ಯೆ ಪ್ರಕರಣ ಸಂಬಂಧ ಮೇ 28ರಂದು ಗೌರಿ ಹತ್ಯೆ ಸೇರಿದಂತೆ ಪ್ರಗತಿಪರ ಚಿಂತಕರ ಹತ್ಯೆಗಳ ಮಾಸ್ಟರ್‌ ಮೈಂಡ್‌ ಎನ್ನಲಾದ ಅಮೋಲ್‌ ಕಾಳೆಯನ್ನು ಎಸ್‌ಐಟಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿತ್ತು. ಆ ವೇಳೆ ಕೃಷ್ಣಮೂರ್ತಿ ಕುರಿತು ಸುಳಿವು ಸಿಕ್ಕಿತು. ಅದರಂತೆ ಕಾರ್ಯಾಚರಣೆ ನಡೆಸಿ ರೈಡರ್‌ನನ್ನು ಎಸ್‌ಐಟಿ ಬಂಧಿಸಿದೆ ಎಂದು ತಿಳಿದು ಬಂದಿದೆ.

ಹಿಂದೂ ಧರ್ಮದ ಕುರಿತು ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿದ್ದರು ಎಂಬ ಕಾರಣಕ್ಕೆ ಕಲ್ಬುರ್ಗಿ ಅವರ ಹತ್ಯೆಗೆ ಕಾಳೆ ತಂಡ ಸಂಚು ರೂಪಿಸಿತ್ತು. ಈ ಕೃತ್ಯಕ್ಕೆ ಉತ್ತರ ಕರ್ನಾಟಕದಲ್ಲಿ ಹಿಂದೂ ಪರ ಸಂಘಟನೆಗಳ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ಗಣೇಶ್‌ ಮಿಸ್ಕಿನ್‌ ಹಾಗೂ ಕೃಷ್ಣಮೂರ್ತಿ ಸಹ ಸಾಥ್‌ ಕೊಟ್ಟಿದ್ದರು.

ಕಾಳೆ ಸೂಚನೆ ಮೇರೆಗೆ 2015ರ ಆಗಸ್ಟ್‌ 31ರಂದು ಬೆಳಗ್ಗೆ ಕಲ್ಬುರ್ಗಿ ಅವರ ಮನೆಗೆ ಗಣೇಶ್‌ ಮಿಸ್ಕಿನ್‌ನನ್ನು ಬೈಕ್‌ನಲ್ಲಿ ಕೃಷ್ಣಮೂರ್ತಿ ಕರೆದುಕೊಂಡು ಹೋಗಿದ್ದ. ಪೂರ್ವಯೋಜನೆಯಂತೆ ಕಲ್ಬುರ್ಗಿ ಅವರಿಗೆ ಗುಂಡು ಹಾರಿಸಿದ ಮಿಸ್ಕಿನ್‌, ಬಳಿಕ ಕೃಷ್ಣಮೂರ್ತಿ ಜೊತೆ ಬೈಕ್‌ನಲ್ಲಿ ಪರಾರಿಯಾಗಿದ್ದ ಎಂದು ಮೂಲಗಳು ವಿವರಿಸಿವೆ.

ಈ ಹತ್ಯೆ ಬಗ್ಗೆ ತನಿಖೆ ಕೈಗೆತ್ತಿಕೊಂಡ ಎಸ್‌ಐಟಿ ಪೊಲೀಸರು, ಅಮೋಲ್‌ ಕಾಳೆಯ ಡೈರಿಯನ್ನು ಜಾಲಾಡಿದಾಗ ಶೂಟರ್‌ನ ಮಾಹಿತಿ ಸಿಕ್ಕಿತು. ಬಳಿಕ ಆತನನ್ನು ನ್ಯಾಯಾಲಯದ ಅನುಮತಿಯಿಂದ ವಶಕ್ಕೆ ಪಡೆದು ಮತ್ತಷ್ಟುಪ್ರಶ್ನಿಸಿದಾಗ ರೈಡರ್‌ನ ಸುಳಿವು ಸಿಕ್ಕಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರೊಂದಿಗೆ ಕಲ್ಬುರ್ಗಿ ಹತ್ಯೆ ಪ್ರಕರಣದಲ್ಲಿ ಐದು ಆರೋಪಿಗಳ ಬಂಧನವಾದಂತೆ ಆಗಿದೆ.