ಹೈವೋಲ್ಟೇಜ್ ಕುತೂಹಲ ಕೆರಳಿಸಿದ್ದ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣಾ ಫಲಿತಾಂಶ ಹೊರಬಿದ್ದಿದೆ. ನೂತನ ಶಾಸಕರಾಗಿ ಚುನಾಯಿತರಾದ ಕಳಲೆ ಕೇಶವಮೂರ್ತಿ ಹಾಗೂ ಡಾ. ಗೀತಾ ಮಹದೇವ ಪ್ರಸಾದ್ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಬೆಂಗಳೂರು (ಏ.20): ಉಪ ಚುನಾವಣೆಯಲ್ಲಿ ಗೆಲವು ಸಾಧಿಸಿರುವ ನೂತನ ಶಾಸಕರಾದ ಕಳಲೆ ಕೇಶವಮೂರ್ತಿ, ಗೀತಾ ಮಹದೇವ ಪ್ರಸಾದ್ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನಂಜನಗೂಡು ಉಪ ಚುನಾವಣೆಯಲ್ಲಿ ಗೆಲವು ಸಾಧಿಸಿರುವ ಕಳಲೆ ಕೇಶವಮೂರ್ತಿ ಹಾಗೂ ಗುಂಡ್ಲುಪೇಟೆ ಕ್ಷೇತ್ರದಲ್ಲಿ ವಿಜಯಿಯಾದ ಗೀತಾ ಮಹದೇವ ಪ್ರಸಾದ್ ಅವರು ಬೆಳಗ್ಗೆ 9.30 ಕ್ಕೆ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿಶೇಷವೆಂದರೆ ಉಪ ಚುನಾವಣೆಯಲ್ಲಿ ಗೆದ್ದಿರುವ ಈ ಶಾಸಕರ ಪ್ರಮಾಣ ವಚನ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಲಾಗಿದೆ. ಸಾಮಾನ್ಯ ಉಪ ಚುನಾವಣೆಗಳಲ್ಲಿ ಜಯಶಾಲಿಯಾಗುವ ಶಾಸಕರ ಪ್ರಮಾಣ ವಚನ ಸ್ಪೀಕರ್ ಕಚೇರಿಯಲ್ಲೇ ನಡೆಯುತ್ತದೆ. ಆದರೆ ರಾಜ್ಯ ಸರ್ಕಾರದ ಪ್ರತಿಷ್ಠೆಯಾಗಿದ್ದ ಈ ಉಪ ಚುನಾವಣೆಯನ್ನು ಈ ಇಬ್ಬರೂ ಗೆದ್ದಿರುವ ಕಾರಣ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್ ಸೇರಿದಂತೆ ಅನೇಕ ಸಚಿವರು ಭಾಗವಹಿಸುವರು. ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ರಾಜೀನಾಮೆಯಿಂದ ತೆರವಾಗಿದ್ದ ನಂಜನಗೂಡು ಕ್ಷೇತ್ರಕ್ಕೆ ಏಪ್ರಿಲ್ ೯ರಂದು ನಡೆದ ಉಪ ಚುನಾವಣೆಯಲ್ಲಿ ಕಳಲೆ ಕೇಶವಮೂರ್ತಿ ಆಯ್ಕೆಯಾಗಿದ್ದರು. ಅದೇರೀತಿ ಮಾಜಿ ಸಚಿವ ಮಹದೇವಪ್ರಸಾದ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಅವರ ಪತ್ನಿ ಗೀತಾ ಅವರು ಆಯ್ಕೆಯಾಗಿದ್ದಾರೆ.
