ನವದೆಹಲಿ[ಆ.31]: ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಕಮಲ್‌ನಾಥ್‌ ಜೊತೆ ನೇರಾನೇರಾ ಸಮರಕ್ಕೆ ಇಳಿದಿರುವ ಕಾಂಗ್ರೆಸ್‌ನ ಯುವಕ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ, ಇದೀಗ ತಮಗೆ ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡದೇ ಹೋದಲ್ಲಿ ನನ್ನ ದಾರಿ ನನಗೆ ಎಂದು ಎಚ್ಚರಿಕೆ ನೀಡಿದ್ದಾರೆ.

ಒಂದು ವೇಳೆ ಅಧ್ಯಕ್ಷ ಪಟ್ಟಸಿಗದೇ ಹೋದಲ್ಲಿ ಸಿಂಧಿಯಾ ಬಿಜೆಪಿ ಪಾಳಯಕ್ಕೆ ಜಿಗಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಈ ಬೆಳವಣಿಗೆಗಳಿಂದ ಆತಂಕಿತಗೊಂಡಿರುವ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಧ್ಯಪ್ರದೇಶದ ಹಾಲಿ ಕಾಂಗ್ರೆಸ್‌ ಅಧ್ಯಕ್ಷ, ಸಿಎಂ ಕಮಲ್‌ನಾಥ್‌ ಅವರನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ.

ರಾಜ್ಯ ವಿಧಾಸಭಾ ಚುನಾವಣೆ ಬಳಿಕ ಸಿಎಂ ಹುದ್ದೆಯಿಂದ ವಂಚಿತರಾಗಿದ್ದ ಸಿಂಧಿಯಾ, ಉಪಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟಿದ್ದರು. ಆದರೆ ಅದು ಸಿಕ್ಕಿರಲಿಲ್ಲ. ಹೀಗಾಗಿ ಅವರ ಕಣ್ಣು ರಾಜ್ಯ ಕಾಂಗ್ರೆಸ್‌ ಭಘಟಕದ ಅಧ್ಯಕ್ಷ ಹುದ್ದೆ ಮೇಲೆ ಬಿದ್ದಿತ್ತು. ಆದರೆ ವಿಧಾನಸಭಾ ಚುನಾವಣೆ ಬೆನ್ನಲ್ಲೇ, ಲೋಕಸಭಾ ಚುನಾವಣೆ ಬಂದ ಹಿನ್ನೆಲೆಯಲ್ಲಿ ಕಮಲ್‌ನಾಥ್‌ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆದಿದ್ದರು. ಆದರೆ ಚುನಾವಣೆ ಮುಗಿದು 3 ತಿಂಗಳಾಗುತ್ತಾ ಬಂದರೂ, ಹುದ್ದೆ ಬದಲಾವಣೆ ಸುಳಿವು ಕಂಡು ಬಂದಿರಲಿಲ್ಲ.

ಜೊತೆಗೆ ಇತರೆ ಕೆಲ ನಾಯಕರ ಹೆಸರು ಅಧ್ಯಕ್ಷ ಹುದ್ದೆಗೆ ಕೇಳಿಬಂದಿತ್ತು. ಇದರಿಂದ ಕೆಂಡಾಮಂಡಲಾಗಿರುವ ಸಿಂಧಿಯಾ, ಅಧ್ಯಕ್ಷ ಸ್ಥಾನಕ್ಕೆ ಪಟ್ಟುಹಿಡಿದಿದ್ದಾರೆ. ಒಂದು ವೇಳೆ ಹುದ್ದೆ ಸಿಗದೇ ಹೋದಲ್ಲಿ ನನ್ನ ದಾರಿ ನನಗೆ ಎಂಬ ಸಂದೇಶವನ್ನೂ ಪಕ್ಷದ ನಾಯಕರಿಗೆ ರವಾನಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸೋನಿಯಾ, ಸಿಎಂ ಕಮಲ್‌ನಾಥ್‌ರನ್ನು ದೆಹಲಿಗೆ ಕರೆಸಿ ಮಾತುಕತೆ ನಡೆಸಿದ್ದಾರೆ.