ಅಧಿಕಾರ ವ್ಯಾಪ್ತಿ ಮೀರಿ ಆದೇಶ ಹೊರಡಿ ಸಿದ ನಗರದ ಮ್ಯಾಜಿಸ್ಪ್ರೇಟ್‌ ನ್ಯಾಯಾಧೀಶ ರನ್ನು ಹೈಕೋರ್ಟ್‌ ತರಾಟೆಗೆ ತೆಗೆದು ಕೊಂಡು, ನ್ಯಾಯಾಧೀಶರು ರೂಪಿಸಿಕೊಳ್ಳ ಬೇಕಾದ ನಡಾವಳಿಯ ಕುರಿತು ಪಾಠ ಬೋಧಿಸಿದ ಅಪರೂಪದ ಪ್ರಕರಣ ಇದು.

ಬೆಂಗಳೂರು(ಜೂ.23): ಅಧಿಕಾರ ವ್ಯಾಪ್ತಿ ಮೀರಿ ಆದೇಶ ಹೊರಡಿ ಸಿದ ನಗರದ ಮ್ಯಾಜಿಸ್ಪ್ರೇಟ್‌ ನ್ಯಾಯಾಧೀಶ ರನ್ನು ಹೈಕೋರ್ಟ್‌ ತರಾಟೆಗೆ ತೆಗೆದು ಕೊಂಡು, ನ್ಯಾಯಾಧೀಶರು ರೂಪಿಸಿಕೊಳ್ಳ ಬೇಕಾದ ನಡಾವಳಿಯ ಕುರಿತು ಪಾಠ ಬೋಧಿಸಿದ ಅಪರೂಪದ ಪ್ರಕರಣ ಇದು.

ನಗರ ಪೊಲೀಸ್‌ ಆಯುಕ್ತರ ಆದೇಶದಂತೆ ಸಿಸಿ ಟಿವಿ ಅಳವಡಿಸದ ಹಿನ್ನೆಲೆಯಲ್ಲಿ ಶಾಲೆಯೊಂದರ ಮುಖ್ಯಸ್ಥರ ವಿರುದ್ಧ ಮೊದಲಿಗೆ ಜಾಮೀನು ಬಂಧನ ವಾರೆಂಟ್‌, ತದನಂತರ ಸಮನ್ಸ್‌ ಜಾರಿಗೊಳಿಸಿ ಹೈಕೋರ್ಟ್‌ ಕೆಂಗಣ್ಣಿಗೆ ಗುರಿಯಾದವರು ಮೇಯೋಹಾಲ್‌ ಘಟಕದ 10ನೇ ಹೆಚ್ಚುವರಿ ಮ್ಯಾಜಿಸ್ಪ್ರೇಟ್‌ ನ್ಯಾಯಾಧೀಶರು.

ಮ್ಯಾಜಿಸ್ಪ್ರೇಟ್‌ ನ್ಯಾಯಾಧೀಶರ ಈ ಕಾರ್ಯವೈಖರಿ ನ್ಯಾಯಾಂಗ ವ್ಯವಸ್ಥೆಯ ಆರೋಗ್ಯಕ್ಕೇ ಹಾನಿಕರ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಅವರು ಕಟುವಾಗಿ ಟೀಕಿಸಿದ್ದು, ಈ ಆದೇಶ ಪ್ರತಿಯನ್ನು 10ನೇ ಹೆಚ್ಚುವರಿ ಮ್ಯಾಜಿಸ್ಪ್ರೇಟ್‌ ನ್ಯಾಯಾಧೀಶರು ಮತ್ತು ನ್ಯಾಯಾಧೀಶರ ತರಬೇತಿ ನೀಡುವ ನ್ಯಾಯಾಂಗ ಅಕಾಡೆಮಿಯ ಮಾರ್ಗದರ್ಶನಕ್ಕೆ ಕಳುಹಿಸಿಕೊಡುವಂತೆ ರಿಜಿಸ್ಟ್ರಾರ್‌ ಜನರಲ್‌ಗೆ ನಿರ್ದೇಶಿಸಿದ್ದಾರೆ.

ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶಾಲೆಯಲ್ಲಿ ಸಿಸಿ ಟಿವಿಗಳನ್ನು ಅಳಡಿಸುವಂತೆ ನಗರ ಪೊಲೀಸ್‌ ಆಯುಕ್ತರು ಆದೇಶ ಹೊರಡಿಸಿದ್ದರು. ಈ ಆದೇಶ ಪಾಲನೆ ಕುರಿತು ಜೀವನ್‌ಬಿಮಾನಗರ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಎಚ್‌.ಹರಿಯಪ್ಪ 2014ರ ಸೆ.10ರಂದು ಎಚ್‌ಎಎಲ್‌ 2ನೇ ಹಂತದಲ್ಲಿರುವ ನ್ಯಾಷನಲ್‌ ಪಬ್ಲಿಕ್‌ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಆಗ ಶಾಲೆಯಲ್ಲಿ ಸಿಸಿ ಟಿವಿ ಅಳವಡಿ ಸದಿರುವುದು ಬೆಳಕಿಗೆ ಬಂತು. ಇದರಿಂದ ಆ ಶಾಲೆ ಮುಖ್ಯಸ್ಥರ ಡಾ.ಕೆ.ಪಿ. ಗೋಪಾಲಕೃಷ್ಣ (79) ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸಿದ್ದ ಠಾಣಾ ಪೊಲೀಸರು 10ನೇ ಎಸಿಎಂಎಂ ನ್ಯಾಯಾಲ ಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದ್ದರು.

ಇದರಿಂದ ಮ್ಯಾಜಿಸ್ಪ್ರೇಟ್‌ ನ್ಯಾಯಾ ಧೀಶರು ದೂರುದಾರರ ಪ್ರಮಾಣೀಕೃತ ಹೇಳಿಕೆ ದಾಖಲಿಸಿಕೊಂಡು, ಗೋಪಾಲ ಕೃಷ್ಣರಿಗೆ ಜಾಮೀನು ರಹಿತ ಬಂಧನ ವಾರೆಂಟ್‌ ಜಾರಿ ಮಾಡಿದ್ದರು. ತರುವಾಯ 2015ರ ಜೂ.5ರಂದು ಸಮನ್ಸ್‌ ಜಾರಿ ಮಾಡಿದ್ದರು. ಈ ಕ್ರಮ ಕಾನೂನು ಬಾಹಿರ ಎಂದು ಆರೋಪಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಗೋಪಾಲಕೃಷ್ಣ, ತಮ್ಮ ವಿರುದ್ಧದ ಸಮನ್ಸ್‌ ಹಾಗೂ ಪ್ರಕರಣ ರದ್ದುಪಡಿಸುವಂತೆ ಕೋರಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಅವರು, ಮ್ಯಾಜಿಸ್ಪ್ರೇಟ್‌ ನ್ಯಾಯಾಲಯದ ನ್ಯಾಯಾಧೀಶರು ಅಧಿಕಾರ ವ್ಯಾಪ್ತಿ ಮೀರಿ ಎನ್‌ಬಿಡಬ್ಲ್ಯೂ ಮತ್ತು ಸಮನ್ಸ್‌ ಜಾರಿ ಮಾಡಿರುವುದನ್ನು ಮನಗಂಡರು. ಇದರಿಂದ ಗೋಪಾಲ ಕೃಷ್ಣ ವಿರುದ್ಧ ಹೊಡಿಸಿದ್ದ ಸಮನ್ಸ್‌ ಕಾನೂನಿನಲ್ಲಿ ಮಾನ್ಯತೆ ಹೊಂದಿಲ್ಲ ಎಂದು ಹೇಳಿ, ಪ್ರಕರಣಕ್ಕೆ ಸಂಬಂಧಿಸಿದ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯದ ಎಲ್ಲಾ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಿದರು.

ಕಟು ಟೀಕೆ: ಸರ್ಕಾರಿ ಅಧಿಕಾರಿಯ ಆದೇಶ ಪಾಲಿಸದ ವೇಳೆ ಆ ಅಧಿಕಾರಿ ಅಥವಾ ಸಂಬಂಧಪಟ್ಟಅಧಿಕಾರಿಯು, ಆದೇಶ ಉಲ್ಲಂಘಿಸಿದ ವ್ಯಕ್ತಿ ವಿರುದ್ಧ ಖಾಸಗಿ ದೂರು ದಾಖಲಿಸಬಹುದು. ಸರ್ಕಾರಿ ಆಧಿಕಾರಿ ಲಿಖಿತವಾಗಿ ದೂರು ಸಲ್ಲಿಸದಿದ್ದರೆ ನ್ಯಾಯಾಲಯವು ಪ್ರಮಾಣೀಕೃತ ಹೇಳಿಕೆ ದಾಖಲಿಸಿಕೊಳ್ಳುವಂತಿಲ್ಲ. ಆದರೆ, ಮ್ಯಾಜಿಸ್ಪ್ರೇಟ್‌ ನ್ಯಾಯಾಧೀಶರು ಅರ್ಜಿದಾರರ ವಿರುದ್ಧ ಆದೇಶ ಹೊರಡಿಸುವ ಮುನ್ನ ಈ ಅಂಶ ಗಮನಿಸಿಲ್ಲ. ಇದು ಗಂಭೀರವಾದ ತಪ್ಪು. ದೋಷಾರೋಪ ಪಟ್ಟಿಯ ಅಂಶ ಸರಿಯಾಗಿ ಪರಿಶೀಲಿಸದೆ, ಅರ್ಜಿದಾರರ ವಿರುದ್ಧ ಸಮನ್ಸ್‌ ಜಾರಿ ಮಾಡುವ ಅಧಿಕಾರ ತನಗಿದೆಯೋ? ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳದೆ ಯಾಂತ್ರೀಕೃತವಾಗಿ ಆದೇಶ ಹೊರಡಿಸಿರುವುದು ನ್ಯಾಯಸಮ್ಮತವಲ್ಲ. ಇಂತಹ ನ್ಯಾಯಾಂಗ ಅಧಿಕಾರಿಗೆ ನ್ಯಾಯಾಂಗ ಅಕಾಡೆಮಿಯಿಂದ ಸೂಕ್ತವಾಗಿ ತರಬೇತಿ ಕೊಡಿಸಬೇಕು ಎಂದು ಹೈಕೋರ್ಟ್‌ ಕಟು ಟೀಕೆ ಮಾಡಿದೆ.

ಅಜಾಗರೂಕತೆ ಸಲ್ಲ: ಸಮನ್ಸ್‌ ಮತ್ತು ವಾರೆಂಟ್‌ ಜಾರಿ ಮಾಡಿ ವ್ಯಕ್ತಿಗಳನ್ನು ಕೋರ್ಟ್‌ಗೆ ಕರೆಯಿಸುವುದು ನ್ಯಾಯಾಲಯದ ಗಂಭೀರ ಕಾರ್ಯ. ಅನಗತ್ಯವಾಗಿ ಜನರ ವಿರುದ್ಧ ಆದೇಶ ಹೊರಡಿಸುವುದು ಅವರ ಹಕ್ಕುಗಳನ್ನು ಹರಣಗೊಳಿಸಿದಂತೆ. ನ್ಯಾಯಾಲಯಗಳು ಅಜಾಗರೂಕತೆ ಅಥವಾ ಯಾವುದೇ ಒತ್ತಡ ಹೊಂದಿರಬಾರದು. ಅಜಾಗರೂಕತೆಯನ್ನು ನ್ಯಾಯಾಂಗ ವ್ಯವಸ್ಥೆಯಲ್ಲಿ ಒಪ್ಪಲಾಗದು ಎಂದು ಪೀಠ ಎಚ್ಚರಿಸಿದೆ.