ಉಡುಪಿ :  ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ತಾಲೂಕು ಪತ್ರಕರ್ತರ ಸಂಘದಿಂದ ಭಾನುವಾರ ಸಾಹಿತಿ, ಕನ್ನಡಪ್ರಭದ ಪ್ರಧಾನ ಪುರವಣಿ ಸಂಪಾದಕ ಗಿರೀಶ್ ರಾವ್ ಹತ್ವಾರ್(ಜೋಗಿ) ಅವರಿಗೆ ವಡ್ಡರ್ಸೆ  ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. 

ಸಾಹಿತಿ ಜಯಂತ್ ಕಾಯ್ಕಿಣಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮೋಹನ್ ಆಳ್ವ, ಬೆಂಗಳೂರು ಜಲಮಂಡಳಿ ಕಾರ್ಯನಿರ್ವಾಹಕ ನಿರ್ದೇಶಕ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಇದ್ದರು. ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು.

ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಯಾನೆ ಗಿರೀಶ್ ರಾವ್ ಹತ್ವಾರ್ ಅವರು ಕತೆ, ಕಾದಂಬರಿ, ಅಂಕಣ ಬರಹ, ಸಾಹಿತ್ಯ ವಿಮರ್ಶೆ, ಧಾರಾವಾಹಿ-ಸಿನಿಮಾಗಳಿಗೆ ಸಾಹಿತ್ಯ, ಚಿತ್ರಕತೆ, ಸಂಭಾಷಣೆಗಳಿಂದ ಪ್ರಸಿದ್ಧರಾಗಿದ್ದಾರೆ. 

ಸುರತ್ಕಲ್ ಸಮೀಪದ ಹೊಸಬೆಟ್ಟುವಿನ ಹತ್ವಾರ್ ಕುಟುಂಬದಲ್ಲಿ ಜನಿಸಿದ ಅವರು ಬಿ.ಕಾಂ. ಮುಗಿಸಿ, ತಮ್ಮ ಸ್ವಂತ ಆಸಕ್ತಿಯಿಂದ ಬರವಣಿಗೆ ಕ್ಷೇತ್ರಕ್ಕೆ ಧಮುಕಿದವರು. ಪ್ರಸ್ತುತ ಕನ್ನಡಪ್ರಭದ ಪುರವಣಿ ಸಂಪಾದಕರಾಗಿರುವ ಅವರು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣಗಳನ್ನು ಬರೆಯುತ್ತಿದ್ದರು. ಲಂಕೇಶ್ ಪತ್ರಿಕೆಗೂ ಎಚ್.ಗಿರೀಶ್ ಹೆಸರಿನಲ್ಲಿ ಪ್ರಬಂಧಗಳನ್ನು ಬರೆಯುತ್ತಿದ್ದರು. ಅವರು ರಾಜ್ಯ ಸರ್ಕಾರದಿಂದ ‘ಅತ್ಯುತ್ತಮ ಕತೆ’ ಪ್ರಶಸ್ತಿ ಪಡೆದಿದ್ದಾರೆ. ರಾಜ್ಯದ ಅನೇಕ ಪತ್ರಿಕೆಗಳಲ್ಲಿ ಸಣ್ಣಕತೆಗಳನ್ನು ಪ್ರಟಿಸಿದ್ದಾರೆ. ಅನೇಕ ಕಥಾಸಂಕಲನ, ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.