ಶ್ರೀನಗರ: ಇತ್ತೀಚೆಗೆ ಕಾಶ್ಮೀರದ ಕಠುವಾದಲ್ಲಿ 8 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಯೇ ಕೇಂದ್ರ ಸರ್ಕಾರ 12 ವರ್ಷದೊಳಗಿನ ಬಾಲಕಿಯರ ಮೇಲಿನ ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ ನೀಡುವ ಹೊಸ ಕಾಯ್ದೆ ರೂಪಿಸಿದೆ. ಆದರೆ ವಿಚಿತ್ರವೆಂದರೆ ಕೇಂದ್ರದ ಹೊಸ ಕಾಯ್ದೆ ಸ್ವತಃ ಕಾಶ್ಮೀರ ರಾಜ್ಯಕ್ಕೇ ಅನ್ವಯವಾಗದು.

ಕಾರಣ ಸಂವಿಧಾನದ 370ನೇ ವಿಧಿಯ ಅನ್ವಯ ವಿದೇಶಾಂಗ, ರಕ್ಷಣೆ, ಸಂಪರ್ಕ ಸೇರಿದಂತೆ ಕೆಲವು ವಿಷಯ ಹೊರತುಪಡಿಸಿ ಬೇರೆಲ್ಲಾ ವಿಷಯದಲ್ಲೂ ಕಾಶ್ಮೀರಕ್ಕೇ ಪ್ರತ್ಯೇಕ ಕಾನೂನು ಇದೆ. ಹೀಗಾಗಿ ಕಾಶ್ಮೀರ ಸರ್ಕಾರ ಕೂಡಾ ಬಹುತೇಕ ಕೇಂದ್ರದ ಅಂಶಗಳನ್ನು ಹೊಂದಿರುವ ಹೊಸ ಕಾನೂನು ಜಾರಿಗೆ ಸಿದ್ಧತೆ ನಡೆಸಿದ್ದು, ಶೀಘ್ರವೇ ಸಚಿವ ಸಂಪುಟದ ಮುಂದೆ ಮಂಡಿಸಲು ನಿರ್ಧರಿಸಿದೆ.