ಒಂದಾದ ಬಳಿಕ ಮತ್ತೊಂದರಂತೆ ಹೊಸ ವಿಚಾರಗಳನ್ನೆತ್ತಿ ಭಾರತವನ್ನು ಗುರಿಯಾಗಿಸುವ ಪಾಕ್ ಸದ್ಯ ಹೊಸ ಕ್ಯಾತೆ ಎತ್ತಿದೆ. ಭಾರತದ ಪಾಕ್ನಲ್ಲಿರುವ ಆ ಒಬ್ಬ ವ್ಯಕ್ತಿಯ ಮನೆ ತಮಗೆ ಸೇರಿದ್ದು ಎನ್ನುವ ತಕರಾರೆತ್ತಿದೆ. ಅಷ್ಟಕ್ಕೂ ಆ ಮನೆ ಯಾರದ್ದು? ಇಲ್ಲಿದೆ ವಿವರ
ನವದೆಹಲಿ/ಇಸ್ಲಾಮಬಾದ್[ಡಿ.21]: ಮುಂಬೈನಲ್ಲಿರುವ ಜಿನ್ನಾ ಹೌಸ್ ನಮಗೆ ಸೇರಿದ್ದು. ಅದರ ಮೇಲೆ ಹಕ್ಕು ಸಾಧಿಸುವ ಭಾರತದ ಯಾವುದೇ ಯತ್ನವನ್ನು ನಾವು ವಿರೋಧಿಸುತ್ತೇವೆ ಎಂದು ಪಾಕಿಸ್ತಾನ ಹೊಸ ಖ್ಯಾತೆ ತೆಗೆದಿದೆ. ಜಿನ್ನಾ ಹೌಸ್ ಅನ್ನು ಭಾರತದ ವಿದೇಶಾಂಗ ಇಲಾಖೆ ತನ್ನ ತೆಕ್ಕೆಗೆ ತೆಗೆದುಕೊಂಡು ಅದನ್ನು ಅಭಿವೃದ್ಧಿಪಡಿಸುವ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಪಾಕಿಸ್ತಾನ ಈ ಪ್ರತಿಕ್ರಿಯೆ ನೀಡಿದೆ. ಆದರೆ ಪಾಕ್ ಕ್ಯಾತೆಗೆ ಸೂಕ್ತ ತಿರುಗೇಟು ನೀಡಿರುವ ಭಾರತ, ನಮ್ಮ ನೆಲದಲ್ಲಿನ ಆಸ್ತಿಯ ಮೇಲೆ ನಿಮ್ಮ ಯಾವುದೇ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಕುರಿತು ಗುರುವಾರ ಇಸ್ಲಾಮಾಬಾದ್‌ನಲ್ಲಿ ಮಾತನಾಡಿದ ಪಾಕ್ ವಿದೇಶಾಂಗ ಇಲಾಖೆ ವಕ್ತಾರ ಮಹಮ್ಮದ್ ಫೈಸಲ್, ಜಿನ್ನಾ ಹೌಸ್ ಮೇಲೆ ನಮ್ಮ ಹಕ್ಕಿದೆ ಮತ್ತು ಅದನ್ನು ವಶಪಡಿಸಿಕೊಳ್ಳುವ ಭಾರತದ ಯಾವುದೇ ಯತ್ನವನ್ನು ನಾವು ವಿರೋಧಿಸುತ್ತೇವೆ. ಜಿನ್ನಾ ಹೌಸ್ ಪಾಕ್‌ಗೆ ಸೇರಿದ್ದು ಎಂದು ಈಗಾಗಲೇ ಭಾರತ ಒಪ್ಪಿಕೊಂಡಿದೆ. ಈ ಕುರಿತ ದಾಖಲೆಗಳೂ ನಮ್ಮ ಬಳಿ ಇವೆ. ಹೀಗಾಗಿ ಮುಂಬೈನಲ್ಲಿರುವ ಪಾಕ್ ದೂತಾವಾಸ ಕಚೇರಿಗೆ ಜಿನ್ನಾ ಹೌಸ್ ಹಸ್ತಾಂತರ ಮಾಡಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಹೇಳಿದ್ದಾರೆ.
ಈ ನಡುವೆ ಪಾಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್, ಜಿನ್ನಾ ಹೌಸ್ ಮೇಲೆ ಪಾಕ್‌ಗೆ ಯಾವುದೇ ಅಧಿಕಾರ ಇಲ್ಲ. ಇದು ಭಾರತ ಸರ್ಕಾರದ ಆಸ್ತಿ. ಅದನ್ನು ಮುಂಬೈನಲ್ಲಿರುವ ಹೈದ್ರಾಬಾದ್ ಹೌಸ್ ಮಾದರಿಯಲ್ಲಿ ನವೀಕರಿಸುವ ಯತ್ನದಲ್ಲಿ ನಾವಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂಬೈನ ಮಲಬಾರ್ ಹಿಲ್ಸ್‌ನಲ್ಲಿ ಸಮುದ್ರದ ಕಡೆಗೆ ಮುಖ ಮಾಡಿರುವ ಈ ಮನೆಯಲ್ಲಿ 1930ರ ದಶಕದಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮಹಮ್ಮದ್ ಅಲಿ ಜಿನ್ನಾ ವಾಸವಿದ್ದರು. ಈ ಆಸ್ತಿಯನ್ನು ತಮಗೆ ಕೊಡಬೇಕು ಎಂದು ಅವರ ಪುತ್ರಿ ದಿನಾ ವಾಡಿಯಾ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅವರ ಸಾವಿನ ಬಳಿಕ ಅವರ ಪುತ್ರ ಹಾಗೂ ವಾಡಿಯಾ ಗ್ರೂಪ್‌ನ ನುಸ್ಲಿ ವಾಡಿಯಾ ಈ ವ್ಯಾಜ್ಯವನ್ನು ಮುನ್ನಡೆಸುತ್ತಿದ್ದಾರೆ.
