ಬೆಂಗಳೂರು (ಜೂ.16) :  ಬಳ್ಳಾರಿಯ ಜಿಂದಾಲ್‌ ಕಂಪನಿಗೆ ಜಮೀನು ಮಾರಾಟ ಮಾಡುವ ಮೈತ್ರಿ ಸರ್ಕಾರದ ನಿರ್ಧಾರವನ್ನು ಖಂಡಿಸಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷದ ಶಾಸಕರು ಹಾಗೂ ಸಂಸದರು ಭಾನುವಾರ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಮುತ್ತಿಗೆ ಹಾಕಲಿದ್ದಾರೆ.

ಸರ್ಕಾರದ ತೀರ್ಮಾನ ವಿರೋಧಿಸಿ ಕಳೆದ ಎರಡು ದಿನಗಳಿಂದ ನಗರದ ಆನಂದರಾವ್‌ ವೃತ್ತದ ಗಾಂಧಿ ಪ್ರತಿಮೆ ಮುಂಭಾಗ ಅಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ ಶಾಸಕರು ಹಾಗೂ ಸಂಸದರು ಭಾನುವಾರ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಧರಣಿ ಕೈಬಿಡುವ ಮೂಲಕ ಮೊದಲ ಹಂತದ ಹೋರಾಟ ಅಂತ್ಯಗೊಳಿಸಲಿದ್ದಾರೆ.

ಈ ಧರಣಿ ನಂತರ ಪಕ್ಷದ ಮುಖಂಡರು ಸಭೆ ಸೇರಿ ಜಿಂದಾಲ್‌ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ಹೋರಾಟವನ್ನು ನಿರ್ಧರಿಸುವ ಸಾಧ್ಯತೆಯಿದೆ. ಮುಂದಿನ ಹಂತದಲ್ಲಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ಹಮ್ಮಿಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಪಕ್ಷ ಬಿಜೆಪಿಯ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಜಿಂದಾಲ್‌ ಕಂಪನಿಗೆ ಭೂಮಿ ಮಾರಾಟ ಮಾಡುವ ತನ್ನ ಹಿಂದಿನ ನಿರ್ಧಾರವನ್ನು ಮರುಪರಿಶೀಲನೆ ನಡೆಸಲು ಮುಂದಾಗಿದೆ. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸದ್ಯಕ್ಕೆ ಭೂಮಿ ಮಾರಾಟ ಮಾಡುವ ನಿರ್ಧಾರವನ್ನು ತಡೆಹಿಡಿದು ಸಂಪುಟ ಉಪಸಮಿತಿಗೆ ವಹಿಸಲಾಯಿತು. ಈ ಉಪಸಮಿತಿ ಮರುಪರಿಶೀಲನೆ ನಡೆಸಿ ವರದಿ ನೀಡಿದ ನಂತರ ಸರ್ಕಾರ ಮತ್ತೊಮ್ಮೆ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಆದರೆ, ಸಂಪುಟ ಉಪಸಮಿತಿ ರಚಿಸಿರುವ ಸರ್ಕಾರದ ತೀರ್ಮಾನವನ್ನು ಬಲವಾಗಿ ವಿರೋಧಿಸಿರುವ ಬಿಜೆಪಿ ನಾಯಕರು ಇದೊಂದು ಕೇವಲ ಕಣ್ಣೊರೆಸುವ ತಂತ್ರ ಎಂದು ಪ್ರತಿಕ್ರಿಯಿಸಿದ್ದಾರೆ. ಭೂಮಿ ಮಾರಾಟ ಮಾಡುವ ನಿರ್ಧಾರ ವಾಪಸ್‌ ಪಡೆಯಬೇಕು. ಅಲ್ಲಿರುವ ಕಬ್ಬಿಣದ ಅದಿರಿನ ನಿಕ್ಷೇಪ ಕುರಿತು ತಜ್ಞರಿಂದ ಅಧ್ಯಯನ ನಡೆಸಬೇಕು ಎಂದು ಒತ್ತಾಯಿಸಿದೆ.