ಬಳ್ಳಾರಿ (ಜೂ.16) :  ಜಿಂದಾಲ್‌ ಕಂಪನಿಗೆ ಭೂಮಿ ಪರಭಾರೆಯನ್ನು ಕಾಂಗ್ರೆಸ್‌ನ ಹಿರಿಯ ಮುಖಂಡ ಎಚ್‌.ಕೆ.ಪಾಟೀಲರು ವಿರೋಧಿಸಿದ್ದಾಯ್ತು, ಈಗ ಪಕ್ಷದ ಶಾಸಕ ಆನಂದ ಸಿಂಗ್‌ ಸರ್ಕಾರದ ಈ ನಿರ್ಧಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಂದಾಲ್‌ ಈಸ್ಟ್‌ ಇಂಡಿಯಾ ಕಂಪನಿಯಂತೆ ವರ್ತಿಸಿದ್ದು, ಈ ಸಂಸ್ಥೆಗೆ ಭೂಮಿ ಪರಭಾರೆ ಮಾಡುವ ವಿರುದ್ಧ ಹೋರಾಟ ನಡೆದರೆ ತಾನೇ ನೇತೃತ್ವ ವಹಿಸುವುದಾಗಿಯೂ ಘೋಷಿಸಿದ್ದಾರೆ.

ಹೊಸಪೇಟೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಂದಾಲ್‌ಗೆ ಭೂಮಿ ನೀಡುವುದಕ್ಕೆ ನನ್ನ ತೀವ್ರ ವಿರೋಧವಿದೆ. 3,667 ಎಕರೆ ಭೂಮಿಯನ್ನು ಸರ್ಕಾರ ಕೇವಲ ಎಕರೆಗೆ .1.20 ಲಕ್ಷದಂತೆ ಮಾರಾಟ ಮಾಡುತ್ತಿರುವುದು ಎಷ್ಟುಸರಿ? ನಾನು ಯಾರ ಪರವೂ ಅಲ್ಲ. ಯಾರ ವಿರುದ್ಧವೂ ಇಲ್ಲ. ಜನರಿಗೆ ಅನ್ಯಾಯವಾದಾಗ ಧ್ವನಿ ಎತ್ತಬೇಕಾಗುತ್ತದೆ. ಜಿಂದಾಲ್‌ ಸಂಸ್ಥೆ ಇರುವ ಸುತ್ತಮುತ್ತಲ ಪ್ರದೇಶಗಳ ಹಳ್ಳಿಗಳ ಸ್ಥಿತಿ ನೋಡಿಕೊಂಡು ಬಂದರೆ ಅಲ್ಲಿನ ಜನರ ಸಮಸ್ಯೆಗಳು ಅರ್ಥವಾಗುತ್ತವೆ. ಕಾರ್ಖಾನೆಗಳು ಬರಬೇಕು ನಿಜ. ಹಾಗಂತ ಜನವಿರೋಧಿ ನಿಲುವಿನ ಕಾರ್ಖಾನೆಗಳು ಬೇಕೆ? ಜನರ ಹಿತ ಕಾಯುವ ಕೆಲಸ ಕೈಗಾರಿಕೆಯಿಂದಾಗಬೇಕಲ್ಲವೇ? ಆದರೆ, ಜಿಂದಾಲ್‌ ಮಾಡುತ್ತಿರುವುದೇನು? ಈ ಕಂಪನಿ ಗೂಂಡಾಗಳನ್ನು ಸಾಕಿಕೊಂಡು ಜನ ಸಾಮಾನ್ಯರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ಆರೋಪಿಸಿದರು.

ಅಧಿಕಾರಿಗಳ ಸಾಥ್‌:

ಅಕ್ರಮ ನೀತಿಗಳನ್ನು ಸಕ್ರಮಗೊಳಿಸಲು ಜಿಂದಾಲ್‌ ಹೊರಟಿದೆ. ತುಂಗಭದ್ರಾ ಜಲಾಶಯದ ನೀರನ್ನು ಅಕ್ರಮವಾಗಿ ಬಳಸಿಕೊಳ್ಳಲಾಗುತ್ತಿದೆ. ಅಧಿಕಾರಿಗಳು ಶಾಮೀಲಾಗಿ ಜಿಂದಾಲ್‌ಗೆ ಸಾಥ್‌ ನೀಡಿದ್ದಾರೆ. ಜಿಂದಾಲ್‌ ಕಂಪನಿ ಶುರುವಾದಾಗ ಇದ್ದ ಸ್ಥಿತಿ ಈಗಿಲ್ಲ. ಜಿಂದಾಲ್‌ ಹೆಸರಿನ ಮೇಲೆ ಎಲ್ಲವೂ ದುರುಪಯೋಗ ಆಗುತ್ತಿದೆ. ಬೆಂಗಳೂರಿನಲ್ಲಿ ಜಿಂದಾಲ್‌ ಸಂಸ್ಥೆ ಹೆಸರಲ್ಲಿ ಭೂಮಿ ಖರೀದಿ ಮಾಡಿ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸಲಾಗುತ್ತಿದೆ. ಜಿಂದಾಲ್‌ ಮಾಡುತ್ತಿರುವ ಅನ್ಯಾಯ ಅಷ್ಟಿಷ್ಟಲ್ಲ. ಸಂಸ್ಥೆಯಿಂದ ಜಿಲ್ಲೆಗೆ ಯಾವ ಕೊಡುಗೆಯೂ ಇಲ್ಲ. ಸಿಎಸ್‌ಆರ್‌ ಫಂಡ್‌ ಅನ್ನು ಎಷ್ಟರಮಟ್ಟಿಗೆ ಖರ್ಚು ಮಾಡಿದ್ದಾರೆ ಎಂಬುದನ್ನು ಅವರೇ ಬಹಿರಂಗಪಡಿಸಲಿ. ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ನಾನೇ ಐದು ಸಾವಿರ ಪತ್ರ ನೀಡಿರಬಹುದು. ಒಬ್ಬೇ ಒಬ್ಬರಿಗೆ ಕೆಲಸ ಕೊಟ್ಟಿಲ್ಲ. ನಾನು ಕಾಂಗ್ರೆಸ್‌ನಲ್ಲಿರಬಹುದು, ಆದರೆ, ನ್ಯಾಯ-ಅನ್ಯಾಯಗಳನ್ನು ಮಾತನಾಡಲೇ ಬೇಕಾಗುತ್ತದೆ. ನಾನು ಈ ವಿಚಾರದಲ್ಲಿ ಜನರ ಪರವಾಗಿ ಇದ್ದೇನೆಯೇ ಹೊರತು ಮತ್ಯಾವ ಉದ್ದೇಶವೂ ನನಗಿಲ್ಲ ಎಂದರು.

ನಾನೇ ನೇತೃತ್ವ ವಹಿಸುವೆ:

ಜಿಂದಾಲ್‌ಗೆ ಭೂಮಿ ಪರಭಾರೆ ಮಾಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು. ಈ ಹಿಂದೆ ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಯಿತು. ಇದೀಗ ಜಿಂದಾಲ್‌ ಅಕ್ರಮದ ವಿರುದ್ಧ ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಲೂ ಬಹುದು. ಅಂಥ ಸಂದರ್ಭ ಬಂದರೆ ನಾನೇ ಹೋರಾಟದ ನೇತೃತ್ವ ವಹಿಸಿಕೊಳ್ಳುತ್ತೇನೆ ಎಂದು ಘೋಷಿಸಿದರು.