ಜಾರ್ಖಂಡ್‌[ಆ.30]: ಮಾಡಿದ್ದುಣ್ಣೋ ಮಹಾರಾಯ ಎಂಬ ಮಾತಿದೆ. ಈ ಮಾತು ಜಾರ್ಖಂಡ್‌ ಸಾರಿಗೆ ಸಚಿವ ಸಿ.ಪಿ. ಸಿಂಗ್‌ ಅವರ ವಿಷಯದಲ್ಲಿ ನಿಜವಾಗಿದೆ. ಟ್ರಾಫಿಕ್‌ ನಿಯಮ ಉಲ್ಲಂಘಿಸಿದಕ್ಕಾಗಿ ಸಚಿವರು 100 ರು. ದಂಡ ಕಟ್ಟಿದ್ದಾರೆ.

ವಿಶೇಷವೆಂದರೆ, ಟ್ರಾಫಿಕ್‌ ಸಂಚಾರ ನಿಗಾ ವ್ಯವಸ್ಥೆಯನ್ನು ಅವರೇ ಜಾರಿಗೆ ತಂದಿದ್ದರು. ಸಿ.ಪಿ.ಸಿಂಗ್‌ ಅವರ ಕಾರು ಜು.23ರಂದು ರಾಂಚಿಯ ಸರ್ಜಾನಾ ಚೌಕ್‌ನಲ್ಲಿ ಸಿಗ್ನಲ್‌ ಜಂಪ್‌ ಮಾಡಿದ್ದು ಟ್ರಾಫಿಕ್‌ ನಿಗಾ ವ್ಯವಸ್ಥೆಯಿಂದ ಪತ್ತೆಯಾಗಿತ್ತು. ಸ್ವಯಂ ಚಾಲಿತ ನಂಬರ್‌ ಪ್ಲೇಟ್‌ ರೀಡರ್‌ ಯಂತ್ರ ಸಚಿವರ ಮನೆಗೆ ದಂಡ ಪಾವತಿಸುವಂತೆ ರಸೀದಿ ರವಾನಿಸಿತ್ತು.

ಕೊನೆಗೆ ಸಚಿವರ ಚಾಲಕ ದಂಡ ಪಾವತಿ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ.