ಪತ್ನಿಗಾಗಿ 24 ದಿನ, 600 ಕಿ.ಮೀ. ಸೈಕಲ್‌ ಹೊಡೆದ ಕಾರ್ಮಿಕ

First Published 15, Feb 2018, 10:26 AM IST
Jharkhand man Cycles 600km in 24 days finds Missing wife in West Bengal
Highlights

ನಾಪತ್ತೆಯಾಗಿದ್ದ ಅನಾರೋಗ್ಯ ಪೀಡಿತ ಪತ್ನಿಯನ್ನು ಹುಡುಕಲು ಕಾರ್ಮಿಕನೊಬ್ಬ ತನ್ನ ಹಳೆಯ ಸೈಕಲ್‌ ಏರಿ 24 ದಿನಗಳಲ್ಲಿ 600 ಕಿ.ಮೀ ಸುತ್ತಾಡಿದ ಘಟನೆಯೊಂದು ಜಾರ್ಖಂಡ್‌ನಲ್ಲಿ ನಡೆದಿದೆ. ಅಂತಿಮವಾಗಿ ಪತ್ನಿ ಸಿಗುವುದರೊಂದಿಗೆ ಕಾರ್ಮಿಕನ ಯಾತ್ರೆ ಸುಖಾಂತ್ಯ ಕಂಡಿದೆ.

ಜಮ್ಷೆಡ್‌ಪುರ: ನಾಪತ್ತೆಯಾಗಿದ್ದ ಅನಾರೋಗ್ಯ ಪೀಡಿತ ಪತ್ನಿಯನ್ನು ಹುಡುಕಲು ಕಾರ್ಮಿಕನೊಬ್ಬ ತನ್ನ ಹಳೆಯ ಸೈಕಲ್‌ ಏರಿ 24 ದಿನಗಳಲ್ಲಿ 600 ಕಿ.ಮೀ ಸುತ್ತಾಡಿದ ಘಟನೆಯೊಂದು ಜಾರ್ಖಂಡ್‌ನಲ್ಲಿ ನಡೆದಿದೆ. ಅಂತಿಮವಾಗಿ ಪತ್ನಿ ಸಿಗುವುದರೊಂದಿಗೆ ಕಾರ್ಮಿಕನ ಯಾತ್ರೆ ಸುಖಾಂತ್ಯ ಕಂಡಿದೆ.

ಜಾರ್ಖಂಡ್‌ನ ಮುಸಾಬನಿ ಬಲಿಗೋಡಾ ಗ್ರಾಮದ ಮನೋಹರ್‌ ನಾಯಕ್‌ರ ಪತ್ನಿ ಅನಿತಾ, ಜ. 14ರಂದು ಆಕೆಯ ತವರಿಗೆ ಸಂಕ್ರಾಂತಿ ಹಬ್ಬಕ್ಕೆ ತೆರಳಿದ್ದಾಗ ನಾಪತ್ತೆಯಾಗಿದ್ದಳು. ಕೊಂಚ ಮಾನಸಿಕ ಅಸ್ವಸ್ಥೆಯಾಗಿದ್ದ ಆಕೆಗೆ ಸರಿಯಾಗಿ ಮಾತನಾಡಲೂ ಬರುತ್ತಿರಲಿಲ್ಲ. ಪತ್ನಿ ನಾಪತ್ತೆಯಾದ ಬಗ್ಗೆ ಪೊಲೀಸ್‌ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಆಗ ಸ್ವಯಂ ತಾನೇ ಪತ್ನಿಯ ಹುಡುಕಾಟಕ್ಕೆ ನಿಂತ ಮನೋಹರ್‌, ತನ್ನಲ್ಲಿದ್ದ ಹಳೆಯ ಸೈಕಲ್‌ ಹಿಡಿದುಕೊಂಡು ಹುಡುಕಾಟಕ್ಕೆ ಮುಂದಾದ.

ಇಷ್ಟಾದರೂ, ಎಲ್ಲೂ ಸುಳಿವು ಸಿಗದಿದ್ದಾಗ ಪತ್ರಿಕೆಯೊಂದರಲ್ಲಿ ‘ನಾಪತ್ತೆ’ ಜಾಹೀರಾತು ನೀಡಿದ ಮನೋಹರ್‌ಗೆ, ಕೊನೆಗೂ ಒಂದು ಒಳ್ಳೆಯ ಸುದ್ದಿ ಸಿಕ್ಕಿತು. ಪತ್ರಿಕೆಯಲ್ಲಿ ಫೋಟೊ ನೋಡಿದ್ದ ಕೆಲವರು ಅನಿತಾ ಖರಗ್‌ಪುರದ ರಸ್ತೆ ಬದಿಯಲ್ಲಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ನೆರವಿನೊಂದಿಗೆ ಮನೋಹರ್‌, ಇದೀಗ ಪತ್ನಿಯ ಜೊತೆಗೂಡಿದ್ದಾನೆ. ಕಳೆದ ಭಾನುವಾರವಷ್ಟೇ ದಂಪತಿಯಿಬ್ಬರೂ ಮನೆಗೆ ಹಿಂದಿರುಗಿದ್ದಾರೆ.

loader