ಕೊಡಗು ಜಿಲ್ಲೆಯ ಪ್ರವಾಸೋದ್ಯಮ ದಿನೇ ದಿನೇ ಬೆಳೀತಿದೆ. ಜೊತೆಗೆ ಕೆಲ ದಂಧೆಗಳು ಕೂಡಾ ಚಿಗುರೊಡೆದಿದ್ದು ಜಿಲ್ಲೆಯ ಹೆಸರನ್ನೇ ಕೆಡಿಸುತ್ತಿದೆ. ಇದಕ್ಕೊಂದು ಉದಾಹರಣೆ ಮುಗಿಲುಪೇಟೆಯ ಜೀಪ್ ದಂಧೆ. ಇದೆಂಥಾ ಅಕ್ರಮ ಅಂತೀರಾ? ಇಲ್ಲಿದೆ ವಿವರ.

ಮಡಿಕೇರಿ(ಮೇ.29): ಕೊಡಗು ಜಿಲ್ಲೆಯ ಪ್ರವಾಸೋದ್ಯಮ ದಿನೇ ದಿನೇ ಬೆಳೀತಿದೆ. ಜೊತೆಗೆ ಕೆಲ ದಂಧೆಗಳು ಕೂಡಾ ಚಿಗುರೊಡೆದಿದ್ದು ಜಿಲ್ಲೆಯ ಹೆಸರನ್ನೇ ಕೆಡಿಸುತ್ತಿದೆ. ಇದಕ್ಕೊಂದು ಉದಾಹರಣೆ ಮುಗಿಲುಪೇಟೆಯ ಜೀಪ್ ದಂಧೆ. ಇದೆಂಥಾ ಅಕ್ರಮ ಅಂತೀರಾ? ಇಲ್ಲಿದೆ ವಿವರ.

ಮಾಂದಲಪಟ್ಟಿ ಪ್ರವಾಸಿಗರ ಹಾಟ್ ಸ್ಪಾಟ್. ಯೋಗರಾಜ ಭಟ್ ತಮ್ಮ ಸಿನಿಮಾಗಳ ಮೂಲಕ ಇಲ್ಲಿನ ಸೊಬಗನ್ನು ಜನರಿಗೆ ಉಣಬಡಿಸಿದ್ದಾರೆ. ಮಡಿಕೇರಿಯ ಸೊಬಗನ್ನು ಆಸ್ವಾದಿಸಬೇಕಾದರೆ ಈ ಮುಗಿಲುಪೇಟೆಗೆ ಬರಲೇಬೇಕು. ಹೀಗಾಗಿ, ಪ್ರತಿಯೊಬ್ಬ ಪ್ರವಾಸಿಗನೂ ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ, ಮಾಂದಲಪಟ್ಟಿ ತಲುಪುವುದು ಸುಲಭದ ಕೆಲಸ ಏನಲ್ಲ. ಯಾಕೆಂದರೆ ರಸ್ತೆ ಸರಿಯಿಲ್ಲ. ಹೀಗಾಗಿ ಜೀಪ್ ಮೂಲಕವೇ ಅಲ್ಲಿಗೆ ತಲುಪಬೇಕಾದ ಪರಿಸ್ಥಿತಿಯಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಜೀಪ್ ದಂಧೆ ಶುರುವಿಟ್ಟುಕೊಂಡಿದ್ದಾರೆ. ತಮ್ಮ ಸ್ವಂತ ವಾಹನವನ್ನು ಬಾಡಿಗೆಗೆ ಬಿಟ್ಟು ಪ್ರವಾಸಿಗರಿಂದ ಹಣ ಪೀಕುತ್ತಿದ್ದಾರೆ. ಈ ವಿಚಾರದಲ್ಲಿ ಗ್ರಾಮಸ್ಥರು ಮತ್ತು ಜೀಪು ಚಾಲಕರ ಮಧ್ಯೆ ಗಲಾಟೆಯೂ ನಡೆದಿದೆ.

ಇಲ್ಲಿ ಮೊದಲಿಗೆ ಹಳದಿ ಬೋರ್ಡ್ ಜೀಪ್‌'ಗಳನ್ನು ಬಳಸಿ ನ್ಯಾಯಯುತ ಬಾಡಿಗೆ ಪಡೆಯಲಾಗುತ್ತಿತ್ತು. ಪ್ರವಾಸಿಗರ ಸಂಖ್ಯೆ ಜಾಸ್ತಿ ಆಗುತ್ತಿದ್ದಂತೆ ತಮ್ಮ ಸ್ವಂತ ಬಳಕೆಯ ವೈಟ್ ಬೋರ್ಡ್ ಜೀಪ್‌'ಗಳನ್ನು ತಂದು ಬಾಡಿಗೆಗೆ ಬಿಡಲಾಗಿದೆ. ಒಂದು ಟ್ರಿಪ್‌'ಗೆ ೧೨೦೦ರಿಂದ ೩ ಸಾವಿರ ರೂಪಾಯಿವರೆಗೆ ಪಡೆಯುತ್ತಿದ್ದಾರೆ ಎನ್ನುವ ಆರೋಪಗಳಿವೆ. ಇದಿಷ್ಟೇ ಅಲ್ಲ, ಟೂರಿಸ್ಟ್​ ತಮ್ಮದೇ ೪ ವೀಲ್ ವಾಹನದಲ್ಲಿ ಬಂದರೆ ಕಿರಿಕಿರಿ ಕೊಡುತ್ತಾರೆ. ಅಡ್ವೆಂಚರ್ ರೈಡ್ ಹೆಸರಲ್ಲಿ ಫಾಸ್ಟಾಗಿ ಜೀಪ್ ಓಡಿಸುವುದಿಂದ ರಸ್ತೆ ಮತ್ತಷ್ಟು ಹದಗೆಟ್ಟಿದೆ.

ಒಟ್ಟಿನಲ್ಲಿ ಕೊಡಗಿನಲ್ಲಿ ಪ್ರವಾಸೋದ್ಯಮ ಹಲವರ ಜೀವನಾಧಾರ. ಆದರೆ, ಇದನ್ನೇ ಕೆಲ ಕಿಡಿಗೇಡಿಗಳು ಹಣ ಮಾಡುವ ದಂಧೆ ಶುರುವಿಟ್ಟುಕೊಂಡಿದ್ದಾರೆ. ಸಾರಿಗೆ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತು ಕಠಿಣ ಕ್ರಮದ ಮೂಲಕ ಪ್ರವಾಸಿಗರ ಹಿತ ಕಾಯಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆಯಾಗಿದೆ.