ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ಹೆಚ್ಚಾಗುತ್ತಿದೆ. ಬಿಜೆಪಿ ಪರಿವರ್ತನಾ ಯಾತ್ರೆ ಮೂಲಕ ಮತಬೇಟೆಗಿಳಿದ ಬೆನ್ನಲ್ಲೇ ಜೆಡಿಎಸ್ ಕೂಡ ರಾಜ್ಯಾದ್ಯಂತ ವಿಕಾಸ ಯಾತ್ರೆಗೆ ಹೊರಟಿದೆ. ಸಿಎಂ ತವರು ಕ್ಷೇತ್ರದಲ್ಲೇ ದಳಪತಿಗಳು ಚುನಾವಣಾ ರಣಕಹಳೆ ಊದಿದ್ದಾರೆ.
ಬೆಂಗಳೂರು (ನ.07): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ಹೆಚ್ಚಾಗುತ್ತಿದೆ. ಬಿಜೆಪಿ ಪರಿವರ್ತನಾ ಯಾತ್ರೆ ಮೂಲಕ ಮತಬೇಟೆಗಿಳಿದ ಬೆನ್ನಲ್ಲೇ ಜೆಡಿಎಸ್ ಕೂಡ ರಾಜ್ಯಾದ್ಯಂತ ವಿಕಾಸ ಯಾತ್ರೆಗೆ ಹೊರಟಿದೆ. ಸಿಎಂ ತವರು ಕ್ಷೇತ್ರದಲ್ಲೇ ದಳಪತಿಗಳು ಚುನಾವಣಾ ರಣಕಹಳೆ ಊದಿದ್ದಾರೆ.
2018 ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಇಂದು ಅಧಿಕೃತವಾಗಿ ರಣಕಹಳೆ ಮೊಳಗಿಸಿತು. ಸಿಎಂ ತವರಿನಿಂದಲೇ ದಳಪತಿಗಳು ಮತಬೇಟೆ ಆರಂಭಿಸಿದರು. ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಅಧಿದೇವತೆಗೆ ಪೂಜೆ ಸಲ್ಲಿಸಿ ಜೆಡಿಎಸ್ ವಿಕಾಸವಾಹಿನಿ ಪ್ರಚಾರ ರಥಕ್ಕೆ ಚಾಲನೆ ಕೊಡಲಾಯ್ತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ದಂಪತಿ ಪುತ್ರನಿಗೆ ಹರಸಿದರು. ನಂತರ ಉತ್ತನಹಳ್ಳಿ ಮಾರಮ್ಮನಿಗೆ ಪೂಜೆ ಸಲ್ಲಿಸಿ ರಿಂಗ್ ರಸ್ತೆ ಮೂಲಕ ಕುಮಾರ ಪರ್ವ ಸಮಾವೇಶ ಸ್ಥಳಕ್ಕೆ ವಿಕಾಸವಾಹಿನಿ ಆಗಮಿಸಿತು. ಸಮಾವೇಶದುದ್ದಕ್ಕೂ ಎಚ್ಡಿಕೆ ಸಿದ್ದರಾಮಯ್ಯ ವಿರುದ್ಧ ಗುಡುಗಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಮುಂದಾಗಿರುವ ಸಿಎಂ ಅವರಿಗೆ ಸವಾಲೊಡ್ಡುವ ರೀತಿ ಸಮಾವೇಶ ಸಂಘಟಿಸುವಲ್ಲಿ ಯಶಸ್ವಿಯಾದ ಶಾಸಕ ಜಿ.ಟಿ. ದೇವೇಗೌಡ ಕೂಡ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದರು. ಸಿಎಂ ಅಲ್ಲ, ಯಾರೇ ನಿಂತರೂ ಚಾಮುಂಡೇಶ್ವರಿ ಕ್ಷೇತ್ರದ ಜನರ ಆಶೀರ್ವಾದ ಇರುವ ತನಕ ನಾನು ಯಾರಿಗೂ ಹೆದರಲ್ಲ ಎಂದರು.
