ಬೆಂಗಳೂರು[ಸೆ.22]: ಕಾಂಗ್ರೆಸ್‌-ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾದ ಅನರ್ಹಗೊಂಡಿರುವ ಮೂವರು ಶಾಸಕರನ್ನು ಮಣಿಸಲು ಈಗಾಗಲೇ ಸಮರ ಸಾರಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ರಾಜಕೀಯ ರಣತಂತ್ರಗಳನ್ನು ಮತ್ತಷ್ಟುಚುರುಕುಗೊಳಿಸಿದ್ದಾರೆ.

ಮಹಾಲಕ್ಷ್ಮೇ ಲೇಔಟ್‌ ಕ್ಷೇತ್ರದಲ್ಲಿ ಗೋಪಾಲಯ್ಯ, ಕೆ.ಆರ್‌. ಪೇಟೆ ಕ್ಷೇತ್ರದಲ್ಲಿ ನಾರಾಯಣಗೌಡ ಮತ್ತು ಹುಣಸೂರು ಕ್ಷೇತ್ರದಲ್ಲಿ ಎಚ್‌.ವಿಶ್ವನಾಥ್‌ ವಿರುದ್ಧ ತೊಡೆತಟ್ಟಿನಿಂತಿದ್ದು, ಅವರ ರಾಜಕೀಯ ಭವಿಷ್ಯ ಅತಂತ್ರಗೊಳಿಸಲು ತಮ್ಮ ರಾಜಕೀಯ ಅನುಭವಗಳನ್ನು ಪಣಕ್ಕಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವ ದೇವೇಗೌಡ ಅವರು, ಸಮ್ಮಿಶ್ರ ಪತನವಾದ ದಿನದಿಂದಲೂ ನಿರಂತರ ಸಭೆಗಳನ್ನು ನಡೆಸಿ ಸಂಘಟನೆಗೊಳಿಸುವತ್ತ ನಿಗಾವಹಿಸಿದ್ದಾರೆ.

ಪಕ್ಷಕ್ಕೆ ದ್ರೋಹವೆಸಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣಿಭೂತರಾಗಿರುವ ತಕ್ಕ ಪಾಠ ಕಲಿಸಬೇಕು ಎಂಬ ಉದ್ದೇಶದಿಂದ ಮಹಾಲಕ್ಷ್ಮೇ ಲೇಔಟ್‌, ಕೆ.ಆರ್‌.ಪೇಟೆ ಮತ್ತು ಹುಣಸೂರು ಕ್ಷೇತ್ರದಲ್ಲಿ ಸಮರ್ಪಕ ಅಭ್ಯರ್ಥಿಗಳ ಹುಡುಕಾಟ ಆರಂಭಿಸಿದ್ದಾರೆ.

ಮೂರು ಕ್ಷೇತ್ರದಲ್ಲಿ ಸಮರ್ಪಕವಾದ ನಾಯಕರ ಕೊರತೆ ಇದೆ. ಪಕ್ಷವನ್ನು ಗೆಲ್ಲಿಸಿಕೊಂಡು ಬರುವಂತಹ ನಾಯಕರು ಕ್ಷೇತ್ರದಲ್ಲಿ ಇಲ್ಲವಾಗಿದೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸದೆ ಸ್ವತಂತ್ರವಾಗಿ ಕಣಕ್ಕಿಳಿಯುವ ಬಗ್ಗೆ ನಿರ್ಧರಿಸಲಾಗಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪೈಪೋಟಿ ನೀಡುವಂತಹ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲು ದೇವೇಗೌಡರು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.

ಗೋಪಾಲಯ್ಯ ಅವರು ಮಹಾಲಕ್ಷ್ಮೇ ಲೇಔಟ್‌ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು, ಕ್ಷೇತ್ರದ ಜನತೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಲ್ಲದೇ, ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಪತ್ನಿ ಹೇಮಲತಾ ಉಪಮೇಯರ್‌ ಆಗಿದ್ದು, ಇನ್ನೂ ಜೆಡಿಎಸ್‌ನಲ್ಲಿಯೇ ಇದ್ದಾರೆ. ಚುನಾವಣೆಯಲ್ಲಿ ಹೇಮಲತಾ ಅವರು ಪತಿಯ ಪರವಾಗಿ ಕೆಲಸ ಮಾಡುವ ಸಾಧ್ಯತೆ ಹೆಚ್ಚಿದ್ದು, ಗೋಪಾಲಯ್ಯ ಬೆಂಬಲಿತ ಅಭ್ಯರ್ಥಿಗೆ ಜಯ ಸುಲಭ ಎಂದು ಹೇಳಲಾಗಿದೆ.

ಆದರೂ ದೇವೇಗೌಡ ಅವರ ರಾಜಕೀಯ ನಡೆ ನಿಗೂಢವಾಗಿದ್ದು, ಯಾವ ಸಂದರ್ಭದಲ್ಲಿ ಎಂತಹ ರಾಜಕೀಯ ದಾಳ ಉರುಳಸಲಿದ್ದಾರೆ ಎಂಬುದು ನಿಗೂಢ. ನಿರಂತರವಾಗಿ ಕ್ಷೇತ್ರದ ಕಾರ್ಯಕರ್ತರು, ನಾಯಕರೊಂದಿಗೆ ಸಭೆ ನಡೆಸಿ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ. ಇನ್ನು ಕೆ.ಆರ್‌.ಪೇಟೆಯಲ್ಲಿ ನಾರಾಯಣಗೌಡಗೆ ತಿರುಗೇಟು ನೀಡಲು ಜವರೇಗೌಡ ಅವರನ್ನು ಬೆಳೆಸಲಾಗುತ್ತಿದೆ. ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ದೇವೇಗೌಡರ ರಾಜಕೀಯ ಚಾಕಚಕ್ಯತೆ ಕೆಲಸ ಮಾಡುವ ಸಾಧ್ಯತೆ ಹೆಚ್ಚಿದೆ. ಆದರೂ, ಬಿಜೆಪಿ ಈ ಕ್ಷೇತ್ರದಲ್ಲಿ ತನ್ನ ಖಾತೆ ತೆರೆಯಲು ಉತ್ಸುಕತೆಯಲ್ಲಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ನಿಂದ ದೂರವಾಗಿ ರಾಜಕೀಯದಲ್ಲಿ ತೆರೆಮರೆಗೆ ಸರಿದಿದ್ದ ಮಾಜಿ ಸಚಿವ ಎಚ್‌.ವಿಶ್ವನಾಥ್‌ ಅವರನ್ನು ಪಕ್ಷಕ್ಕೆ ಕರೆ ತಂದು ಹುಣಸೂರು ಕ್ಷೇತ್ರದಿಂದ ಗೆಲ್ಲಿಸಿಕೊಂಡು ಬರುವಲ್ಲಿ ದೇವೇಗೌಡ ಅವರು ಯಶಸ್ವಿಯಾಗಿದ್ದರು. ಆದರೆ, ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್‌ ನಾಯಕರ ವಿರುದ್ಧ ತಿರುಗಿಬಿದ್ದ ವಿಶ್ವನಾಥ್‌ ಅವರಿಗೆ ತಕ್ಕಪಾಠ ಕಲಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂರು ಕ್ಷೇತ್ರದಲ್ಲಿ ಸಮರ್ಪಕವಾದ ನಾಯಕರ ಕೊರತೆ ಇದೆ. ಪಕ್ಷವನ್ನು ಗೆಲ್ಲಿಸಿಕೊಂಡು ಬರುವಂತಹ ನಾಯಕರು ಕ್ಷೇತ್ರದಲ್ಲಿ ಇಲ್ಲವಾಗಿದೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸದೆ ಸ್ವತಂತ್ರವಾಗಿ ಕಣಕ್ಕಿಳಿಯುವ ಬಗ್ಗೆ ನಿರ್ಧರಿಸಲಾಗಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪೈಪೋಟಿ ನೀಡುವಂತಹ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲು ದೇವೇಗೌಡರು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.