ಪಕ್ಷದ ವಿರುದ್ಧವೇ ತಿರುಗಿ ಬಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಬಹಿರಂಗವಾಗಿ ಸ್ವ ಪಕ್ಷದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಇದೀಗ ಕಾಂಗ್ರೆಸ್ ಬಂಡಾಯ ಜೆಡಿಎಸ್ ನಲ್ಲಿಯೂ ಕೂಡ ಕಾಣಿಸಿಕೊಂಡಿದೆ.
ಬೆಂಗಳೂರು : ಲೋಕಸಭಾ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಹಲವು ರೀತಿಯ ಬಂಡಾಯ ಕಂಡು ಬರುತ್ತಿದೆ. ಇದುವರೆಗೆ ಕಾಂಗ್ರೆಸ್ ನಲ್ಲಿ ಅತೃಪ್ತ ನಾಯಕರ ಬಣ ಹುಟ್ಟಿಕೊಂಡಿದ್ದು, ಇದೀಗ ಜೆಡಿಎಸ್ ನಲ್ಲಿಯೂ ಕೂಡ ಬಂಡಾಯ ಶುರುವಾಗಿದೆ.
ಮೈಸೂರಿನಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಪಕ್ಷದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ತಾವು ಶಿಫಾರಸ್ಸು ಮಾಡಿ ಒಬ್ಬರಿಗೂ ಕೂಡ ಟಿಕೆಟ್ ನೀಡಿಲ್ಲ. ನಮ್ಮ ದುರಹಂಕಾರದಿಂದಲೇ ನಮಗೆ ಸೋಲಾಗಿದೆ ಎಂದು ಹೇಳಿದ್ದಾರೆ.
ಜೆಡಿಎಸ್ ವಿರುದ್ಧವೇ ಸಿಡಿದೆದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್. ಕೆ.ಆರ್.ನಗರ ಪುರಸಭೆ ಸೋಲಿನ ಹಿನ್ನೆಲೆ ನಡೆದ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಕೆ.ಆರ್.ನಗರ ಪುರಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ನಮ್ಮ ಕುರುಬ ಸಮುದಾಯಕ್ಕೆ ಒಂದೇ ಒಂದು ಟಿಕೆಟ್ ಕೂಡ ನೀಡಿಲ್ಲ. ನಮ್ಮ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದರು.
ಸಿದ್ದರಾಮಯ್ಯ ಹೊಗಳಿದ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್!
ಪಕ್ಷದ ರಾಜ್ಯಾದ್ಯಕ್ಷನಾಗಿ ನಾನು ಹೇಳಿದ ಒಬ್ಬರಿಗೂ ಚುನಾವಣೆಯಲ್ಲಿ ಟಿಕೆಟ್ ನೀಡದೆ ದುರಾಂಕರದಿಂದ ವರ್ತಿಸಿದ್ದಾರೆ. ಹಣ ಬಲವೇ ಮುಖ್ಯ ಎನ್ನುವ ಮನೋಭಾವವನ್ನು ಇನ್ನಾದರೂ ಬಿಡದಿದ್ದಲ್ಲಿ ಒಳಿತಾಗದು ಎಂದು ಪರೋಕ್ಷವಾಗಿ ಸಚಿವ ಸಾ.ರಾ.ಮಹೇಶ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಈ ಮೂಲಕ ಪರೋಕ್ಷವಾಗಿ ಜೆಡಿಎಸ್ ನಾಯಕರಿಗೂ ಕೂಡ ಸಂದೇಶ ರವಾನಿಸಿದ್ದಾರೆ.