‘ಸಿದ್ದು ಮತ್ತೆ ಸಿಎಂ’ ಹೇಳಿಕೆಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಬೇಸರ| ಇಂತಹ ಹೇಳಿಕೆ ಸರಿಯಲ್ಲ, ಸಿದ್ದು ಸ್ಪಷ್ಟನೆ ನೀಡಬೇಕು| ಸಿದ್ದು ಸಿಎಂ ಆಗಲು ಸದ್ಯಕ್ಕೆ ಯಾವ ಮಾರ್ಗವೂ ಇಲ್ಲ

ಬೆಂಗಳೂರು[ಏ.09]: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಹೇಳಿಕೆ ನೀಡುತ್ತಿರುವ ಮಿತ್ರ ಪಕ್ಷ ಕಾಂಗ್ರೆಸ್‌ ಮುಖಂಡರ ನಡೆಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಮುಖಂಡರು ಮುಖ್ಯಮಂತ್ರಿ ವಿಚಾರದಲ್ಲಿ ನೀಡುತ್ತಿರುವ ಹೇಳಿಕೆಗಳು ಸಮಂಜಸವಲ್ಲ. ಈ ಬಗ್ಗೆ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಬೇಕು ಎಂದು ಅವರು ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಲು ಸದ್ಯಕ್ಕೆ ಯಾವುದೇ ಮಾರ್ಗವೂ ಇಲ್ಲ. ಸದ್ಯಕ್ಕೆ ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಇದ್ದಾರೆ. ಆದರೆ, ಕಾಂಗ್ರೆಸ್‌ ಮುಖಂಡರು ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ನೀಡುತ್ತಿರುವ ಹೇಳಿಕೆಗಳು ಸಮಂಜಸವಲ್ಲ ಎಂದು ಕಿಡಿಕಾರಿದರು.

ಎಲ್ಲ ಸಮಾನ ಮನಸ್ಕರು ಒಗ್ಗೂಡಿದರೂ ಕಾಂಗ್ರೆಸ್‌ಗೆ 113 ಶಾಸಕರ ಬೆಂಬಲ ದೊರೆಯುವುದಿಲ್ಲ. ಹೀಗಾಗಿ ಸಿದ್ದರಾಮಯ್ಯಗೆ ತಕ್ಷಣ ಮುಖ್ಯಮಂತ್ರಿಯಾಗುವ ಅವಕಾಶ ಇಲ್ಲ. ಮತ್ತೆ ಮುಖ್ಯಮಂತ್ರಿಯಾಗುವ ಕುರಿತು ಸಿದ್ದರಾಮಯ್ಯ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಮಧ್ಯಂತರ ಚುನಾವಣೆ ಬಯಸಿದ್ದಾರೆಯೇ ಎಂಬುದು ಸಹ ಗೊತ್ತಿಲ್ಲ. ಒಂದು ವೇಳೆ ಮೈತ್ರಿ ಮುರಿದು ಬಿದ್ದರೆ ಆಕಾಶ ಏನೂ ಮುರಿದು ಬೀಳಲ್ಲ. ಎಲ್ಲದಕ್ಕೂ ಮೇ 23ರಂದು ಉತ್ತರ ಸಿಗಲಿದೆ. ಸರ್ಕಾರಕ್ಕೆ ಸದ್ಯಕ್ಕೆ ಏನೂ ಆಗಲ್ಲ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಖಾರವಾಗಿಯೇ ನುಡಿದರು.

ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್‌ ಪಕ್ಷವನ್ನು ಬಿಜೆಪಿಯ ಬಿ ಟೀಮ್‌ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಅವರ ಆರೋಪದಿಂದಲೇ ಬಿಜೆಪಿಗೆ ಹೆಚ್ಚು ಸ್ಥಾನಗಳು ಹೋದವು. ಅದಕ್ಕೆ ಜೆಡಿಎಸ್‌ ಕಾರಣವಲ್ಲ. ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲಾಗಿತ್ತು. ಅವರೂ ಸಹ ನಮ್ಮನ್ನು ಸೋಲಿಸಲು ಪ್ರಯತ್ನಿಸಿದ್ದರು ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿಶ್ವನಾಥ್‌, ಬಿಜೆಪಿಯ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ಮತ್ತು ನಾವು ದಶಕಗಳ ಸ್ನೇಹಿತರು. ಉಭಯ ಕುಶಲೋಪರಿಗಾಗಿ ಭೇಟಿ ಮಾಡಿದ್ದೆವು. ಸಹಜವಾಗಿಯೇ ರಾಜಕೀಯ ಚರ್ಚೆ ಮಾಡಲಾಗಿದೆಯೇ ಹೊರತು ಮಹತ್ವವಾದದ್ದೇನೂ ಅಲ್ಲ. ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ ಎಂದು ತಿಳಿಸಿದರು.

ರೆಸಾರ್ಟ್‌ನ ಕಂಬ ಕಂಬದಲ್ಲೂ ದೇವರು!

ರೆಸಾರ್ಟ್‌ಗಳ ಕಂಬ ಕಂಬದಲ್ಲಿಯೂ ದೇವರಿದ್ದಾನೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಹೇಳಿದ್ದಾರೆ.

ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ರೆಸಾರ್ಟ್‌ ರಾಜಕೀಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರೆಸಾರ್ಟ್‌ನಲ್ಲಿಯೂ ದೇವಸ್ಥಾನಗಳಿವೆ. ಹೀಗಾಗಿ ದೇವೇಗೌಡರು ಹೋಗುತ್ತಾರೆ. ಅವರಿಗೆ ದೈವದ ಮೇಲೆ ಅಪಾರ ಭಕ್ತಿ. ಪ್ರಹ್ಲಾದ ಹೇಳಿದ ಹಾಗೆ ಪ್ರತಿ ಕಂಬದಲ್ಲಿಯೂ ದೇವರು ಇದ್ದಾನೆ ಎನ್ನುವ ಹಾಗೆ ರೆಸಾರ್ಟ್‌ಗಳ ಕಂಬ ಕಂಬದಲ್ಲಿಯೂ ದೇವರಿದ್ದಾನೆ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಆಗಾಗ್ಗೆ ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ, ಬಿಜೆಪಿಯವರು ದಿನಬೆಳಗಾದರೆ ದೇವಸ್ಥಾನಕ್ಕೆ ಹೋಗುತ್ತಾರೆ ಎಂದು ಇದೇ ವೇಳೆ ಅವರು ಟೀಕಿಸಿದರು.

ಆಡಳಿತ ಪಕ್ಷದ ವಿರುದ್ಧ ಮತದಾನ

ಲೋಕಸಭೆ ಚುನಾವಣೆಯಲ್ಲಿ ಮತದಾನ ಉತ್ತಮವಾಗಿದ್ದು, ಆಡಳಿತ ಪಕ್ಷದ ವಿರುದ್ಧ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರ ವಿರುದ್ಧವೋ ರಾಜ್ಯ ಸರ್ಕಾರದ ವಿರುದ್ಧವೋ ಎಂಬುದು ಮಾತ್ರ ಗೊತ್ತಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಮಾರ್ಮಿಕವಾಗಿ ಹೇಳಿದರು.

ಚುನಾವಣೆಯಲ್ಲಿ ಮತದಾರ ಯಾರಿಗೆ ಬೆಂಬಲಿಸಿದ್ದಾನೆ ಎಂಬುದು ತಿಳಿದುಕೊಳ್ಳುವುದು ಸುಲಭವಲ್ಲ. ಈ ಬಾರಿ ಉತ್ತಮ ಮತದಾನ ಆಗಿದೆ. ಜನರು ಸ್ವಯಂ ಆಗಿ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಬಿಜೆಪಿ ಮನೆಮನೆಗೆ ತೆರಳಿ ಪ್ರಚಾರ ನಡೆಸಿದೆ. ಆದರೆ, ಕಾಂಗ್ರೆಸ್‌-ಜೆಡಿಎಸ್‌ ಇದನ್ನು ಮಾಡಿಲ್ಲ. ಮತದಾರರು ಆಡಳಿತ ಪಕ್ಷದ ವಿರುದ್ಧ ಮತ ಚಲಾಯಿಸಿದ್ದಾರೆ. ಆದರೆ, ಅದು ಕೇಂದ್ರದ ವಿರುದ್ಧವೋ ಅಥವಾ ರಾಜ್ಯ ಸರ್ಕಾರ ವಿರುದ್ಧವೋ ಎಂಬುದು ಗೊತ್ತಿಲ್ಲ ಎಂದರು.

ಚುನಾವಣಾ ಪೂರ್ವ ಹೊಂದಾಣಿಕೆಯು ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆಗೆ ಸೀಮಿತವಾಗಿದ್ದು, ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಂದುವರೆಯುವುದಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರದಲ್ಲಿ ನಾವು ನಾವೇ ಅವರು ಅವರೇ ಎಂದು ಖಡಕ್‌ ಆಗಿ ನುಡಿದರು.