ಚುನಾವಣೆ ಗೆಲ್ಲಲು ಜೆಡಿಎಸ್‌ ಪಂಚಸೂತ್ರ

First Published 21, Mar 2018, 7:45 AM IST
JDS Plan To Win Election
Highlights

ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರ ಗದ್ದುಗೆ ಹಿಡಿಯಲು ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಜೆಡಿಎಸ್‌ ಇದೀಗ ಪಂಚಸೂತ್ರಗಳ ಮೊರೆ ಹೋಗಿದೆ.

ಬೆಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರ ಗದ್ದುಗೆ ಹಿಡಿಯಲು ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಜೆಡಿಎಸ್‌ ಇದೀಗ ಪಂಚಸೂತ್ರಗಳ ಮೊರೆ ಹೋಗಿದೆ.

ಬಿಜೆಪಿ-ಕಾಂಗ್ರೆಸ್‌ ರಾಷ್ಟ್ರೀಯ ಪಕ್ಷಗಳಿಗಿಂತ ಇತ್ತೀಚೆಗೆ ಭಿನ್ನವಾಗಿ ರಣತಂತ್ರ ರೂಪಿಸುತ್ತಿರುವ ಜೆಡಿಎಸ್‌ ಆಧುನಿಕ ತಂತ್ರಜ್ಞಾನದ ಮೂಲಕ ಪ್ರಚಾರ ಕೈಗೊಳ್ಳಲು ಮುಂದಾಗಿದೆ. ಜನತೆಯನ್ನು ತಲುಪುವ ನಿಟ್ಟಿನಲ್ಲಿ ವೋಟ​ರ್‍ಸ್ ಇಂಟಲಿಜೆನ್ಸ್‌ ಸಾಫ್ಟ್‌ವೇರ್‌, ಸ್ಕೈ ಬಲೂನ್‌, ವಾಟ್ಸಾಪ್‌ ಗ್ರೂಪ್‌, ಎಸ್‌ಎಂಎಸ್‌ ಮತ್ತು ವಾಯ್ಸ್ ಎಸ್‌ಎಂಎಸ್‌ ಮತ್ತು ಟಾಕಿಂಗ್‌ ವೋಟರ್‌ ಸ್ಲಿಪ್‌ ಎಂಬ ಪಂಚಸೂತ್ರಗಳನ್ನು ರೂಪಿಸಿದೆ ಎಂದು ತಿಳಿದುಬಂದಿದೆ.

ಮತದಾರರ ಮೊಬೈಲ್‌ ಸಂಖ್ಯೆ ಸಹಿತ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲು ವೋಟ​ರ್ಸ್ ಇಂಟಲಿಜೆನ್ಸ್‌ ಸಾಫ್ಟವೇರ್‌ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಆ್ಯಪ್‌ವೊಂದನ್ನು ಸಿದ್ಧಪಡಿಸಲಾಗಿದ್ದು, ಕಾರ್ಯಕರ್ತರು ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ಪಕ್ಷದ ಕಾರ್ಯಕರ್ತರು ಮತದಾರರ ಅನಿಸಿಕೆಗಳನ್ನು ಪಡೆದು, ಅವರ ಮೊಬೈಲ್‌ ಸಂಖ್ಯೆಗಳನ್ನು ಆ್ಯಪ್‌ ಮೂಲಕ ಸಾಫ್ಟ್‌ವೇರ್‌ಗೆ ಕಳುಹಿಸಿಕೊಡಬೇಕು. ಸಂಗ್ರಹವಾದ ಎಲ್ಲಾ ಮೊಬೈಲ್‌ಗಳಿಗೆ ‘ಈ ಬಾರಿ ಕುಮಾರಣ್ಣ’ ಎಂಬ ಸಂದೇಶಗಳನ್ನು ರವಾನಿಸಿ ಪ್ರಚಾರಾಂದೋಲನ ಮಾಡಲಾಗುತ್ತದೆ. ಮಾತ್ರವಲ್ಲ, ಚುನಾವಣೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಸಹ ಕಳುಹಿಸಿಕೊಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಜೆಡಿಎಸ್‌ನ ಪಂಚಸೂತ್ರಗಳಲ್ಲಿ ಸ್ಕೈ ಬಲೂನ್‌ ಕೂಡ ಒಂದಾಗಿದೆ. ವಿಧಾನಸಭಾ ಕ್ಷೇತ್ರದ ಪ್ರಮುಖ ಗಲ್ಲಿಗಳು, ಆಟದ ಮೈದಾನಗಳಲ್ಲಿ ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರ ಭಾವಚಿತ್ರ ಇರುವ ಸ್ಕೈ ಬಲೂನ್‌ ಹಾರಿ ಬಿಡಲಾಗುವುದು. ಈ ಮೂಲಕ ಜನರನ್ನು ಪಕ್ಷದತ್ತ ಸೆಳೆಯುವ ಉದ್ದೇಶ ಹೊಂದಲಾಗಿದೆ.

ಇನ್ನು, ಬಿಜೆಪಿ ಮಾದರಿಯಲ್ಲಿ ವಾಟ್ಸಾಪ್‌ ಗ್ರೂಪ್‌ ಸಹ ರಚನೆ ಮಾಡಲು ಜೆಡಿಎಸ್‌ ಮುಂದಾಗಿದೆ. ಬೂತ್‌ಮಟ್ಟದ ಕಾರ್ಯಕರ್ತರನ್ನು ಒಳಗೊಂಡು ರಾಜ್ಯಮಟ್ಟದವರೆಗೂ ಸುಮಾರು 25 ಸಾವಿರ ವಾಟ್ಸಾಪ್‌ ಗ್ರೂಪ್‌ ರಚನೆ ಮಾಡಲಾಗುತ್ತಿದೆ. ವಿದ್ಯಾರ್ಥಿ, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ವೈದ್ಯರು, ವಕೀಲರು ಸೇರಿದಂತೆ ಪ್ರಮುಖ ಗುಂಪಿನ ವಾಟ್ಸಾಪ್‌ ಗ್ರೂಪ್‌ ಮಾಡಿ ಆ ಮೂಲಕ ಪ್ರಚಾರ ನಡೆಸಲಿದೆ ಎಂದು ಹೇಳಲಾಗಿದೆ.

ಎಸ್‌ಎಂಎಸ್‌ ಮತ್ತು ವಾಯ್ಸ್ ಎಸ್‌ಎಂಎಸ್‌ಗೂ ಆದ್ಯತೆ ನೀಡಿರುವ ಜೆಡಿಎಸ್‌, ಈ ಬಾರಿ ಪಕ್ಷಕ್ಕೆ ಮತ ನೀಡಿ ಎಂದು ಕುಮಾರಸ್ವಾಮಿ ವಿನಂತಿ ಮಾಡಿರುವ ಸಂದೇಶಗಳನ್ನು ಮತದಾರರ ಮೊಬೈಲ್‌ಗಳಿಗೆ ರವಾನಿಸಲಾಗುತ್ತದೆ. ಕೊನೆಯ ಸೂತ್ರ ಟಾಕಿಂಗ್‌ ವೋಟರ್‌ ಸ್ಲಿಪ್‌ ಆಗಿದೆ. ಮತ ಕೋರಲು ಮತದಾರರ ಚೀಟಿಯನ್ನು (ವೋಟರ್‌ಸ್ಲಿಪ್‌) ಮುದ್ರಣ ಮಾಡಿ ಅದರಲ್ಲಿ ಕುಮಾರಸ್ವಾಮಿ ಮತ್ತು ದೇವೇಗೌಡರ ಆಡಳಿತಾವಧಿಯಲ್ಲಿನ ಸಾಧನೆಗಳನ್ನು ಆಕರ್ಷಕ ವಾಕ್ಯಗಳನ್ನು ಮುದ್ರಿಸಲಾಗುತ್ತದೆ ಎನ್ನಲಾಗಿದೆ.

loader