ಜೆಡಿಎಸ್‌ ಪಕ್ಷದಿಂದ ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡ ಆರು ಮಂದಿ ಶಾಸಕರು ಮಂಗಳವಾರ ಕೆಪಿಸಿಸಿ ಕಚೇರಿಗೆ ಆಗಮಿಸಿ ಸದಸ್ಯತ್ವ ಪಡೆದುಕೊಂಡರು.

ಬೆಂಗಳೂರು : ಜೆಡಿಎಸ್‌ ಪಕ್ಷದಿಂದ ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡ ಆರು ಮಂದಿ ಶಾಸಕರು ಮಂಗಳವಾರ ಕೆಪಿಸಿಸಿ ಕಚೇರಿಗೆ ಆಗಮಿಸಿ ಸದಸ್ಯತ್ವ ಪಡೆದುಕೊಂಡರು.

ಮಂಗಳವಾರ ಮಧ್ಯಾಹ್ನ ಚಾಮರಾಜಪೇಟೆ ಶಾಸಕ ಜಮೀರ್‌ ಅಹಮದ್‌ ಖಾನ್‌, ನಾಗಮಂಗಲ ಕ್ಷೇತ್ರದ ಎನ್‌. ಚಲುವರಾಯಸ್ವಾಮಿ, ಶ್ರೀರಂಗಪಟ್ಟಣದ ಎ.ಬಿ. ರಮೇಶ ಬಂಡಿಸಿದ್ದೇಗೌಡ, ಮಾಗಡಿ ಕ್ಷೇತ್ರದ ಎಚ್‌.ಸಿ. ಬಾಲಕೃಷ್ಣ, ಪುಲಿಕೇಶಿನಗರದ ಆರ್‌.ಅಖಂಡ ಶ್ರೀನಿವಾಸಮೂರ್ತಿ, ಹಗರಿಬೊಮ್ಮನಹಳ್ಳಿ ಕ್ಷೇತ್ರದ ಎಸ್‌. ಭೀಮಾನಾಯಕ್‌ ಅವರು ಕಾಂಗ್ರೆಸ್‌ ಕಚೇರಿಗೆ ಆಗಮಿಸಿ ಸದಸ್ಯತ್ವ ಪಡೆದರು. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೂಗುಚ್ಛ ನೀಡಿ ಪಕ್ಷಕ್ಕೆ ಸ್ವಾಗತ ಕೋರಿದರು. ಮೈಸೂರಲ್ಲಿ ರಾಹುಲ್‌ ಸಮ್ಮುಖದಲ್ಲಿ ಸೇರ್ಪಡೆಯಾದ ಇನ್ನೊಬ್ಬ ಜೆಡಿಎಸ್‌ ಶಾಸಕ ಗಂಗಾವತಿಯ ಇಕ್ಬಾಲ್‌ ಅನ್ಸಾರಿ ಆಗಮಿಸಿರಲಿಲ್ಲ.

ಬಳಿಕ ಮಾತನಾಡಿದ ಎನ್‌. ಚೆಲುವರಾಯಸ್ವಾಮಿ, ಕಳೆದ 25 ವರ್ಷದಿಂದ ಒಂದೇ ಪಕ್ಷದಲ್ಲಿ ರಾಜಕೀಯ ಮಾಡಿಕೊಂಡು ಬಂದಿದ್ದೇವೆ. ಜ್ಯಾತ್ಯತೀತ ಪಕ್ಷವಾದ ಕಾಂಗ್ರೆಸ್‌ಗೆ ಹಾಗೂ ರಾಹುಲ್‌ ಗಾಂಧಿ, ಸಿದ್ದರಾಮಯ್ಯ ಅವರಿಗೆ ಶಕ್ತಿ ಕೊಡುವ ಕೆಲಸವನ್ನು ಮಾಡುತ್ತೇವೆ. ನಮ್ಮೊಂದಿಗೆ ಗುರುತಿಸಿಕೊಂಡ ಮುಖಂಡರು ಸೇರಿ ಕಾಂಗ್ರೆಸ್‌ಗೆ ಮತ್ತಷ್ಟುಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದರು.

ಜಮೀರ್‌ ಅಹಮದ್‌ ಖಾನ್‌ ಮಾತನಾಡಿ, ಕೆರೆಯಿಂದ ಸಮುದ್ರಕ್ಕೆ ಬಂದ ಅನುಭವ ಆಗಿದೆ. ಕಾಂಗ್ರೆಸ್‌ ಪಕ್ಷವು ಸಮುದ್ರ ಇದ್ದಂತೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಾಕಷ್ಟುಕೆಲಸ ಮಾಡಿದೆ. ಹೀಗಾಗಿ ಪ್ರೇರಣೆ ಪಡೆದು ಪಕ್ಷಕ್ಕೆ ಸೇರ್ಪಡೆಯಾಗಿದ್ದೇವೆ. ಪಕ್ಷಕ್ಕಾಗಿ ದುಡಿಯುತ್ತೇವೆ ಎಂದರು.