Asianet Suvarna News Asianet Suvarna News

ಒಟ್ಟಾಗಿ ರಾಜೀನಾಮೆ ನೀಡುತ್ತೇವೆ: ಜೆಡಿಎಸ್ ಶಾಸಕ ಡಿಸಿ ತಮ್ಮಣ್ಣ ಹೇಳಿಕೆ

jds mla dc tammanna reacts on cauvery issue

ಮಂಡ್ಯ(ಸೆ. 21): ಜಾತ್ಯತೀಯ ಜನತಾ ದಳದ ಎಲ್ಲ ಶಾಸಕರು ಒಟ್ಟಾಗಿ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ. ನಿನ್ನೆ ಮಂಡ್ಯ ಸಂಸದ ಪುಟ್ಟರಾಜು ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಡಿಸಿ ತಮ್ಮಣ್ಣ ಸೇರಿದಂತೆ ಜೆಡಿಎಸ್'ನ ಎಂಟು ಶಾಸಕರು ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸುವರ್ಣನ್ಯೂಸ್ ಜೊತೆ ಮಾತನಾಡಿದ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ, ಜೆಡಿಎಸ್'ನ ಎಲ್ಲಾ ಜನಪ್ರತಿನಿಧಿಗಳೂ ಒಟ್ಟಾಗಿ ರಾಜೀನಾಮೆ ನೀಡುತ್ತೇವೆ ಎಂದು ಹೇಳಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್'ಡಿ ಕುಮಾರಸ್ವಾಮಿ ಇಂದು ಮತ್ತು ನಾಳೆ ಪಕ್ಷದ ಶಾಸಕರ ಸಭೆ ಕರೆದಿದ್ದು ಈ ವಿಚಾರವಾಗಿ ನಿರ್ಧಾರ ಕೈಗೊಳ್ಳಲಿದ್ದಾರೆ. ಬಳಿಕ ಪಕ್ಷದ ರಾಷ್ಟ್ರಾಧ್ಯಕ್ಷ ಹೆಚ್'ಡಿ ದೇವೇಗೌಡರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಆ ಬಳಿಕ ತಾವೆಲ್ಲರೂ ರಾಜೀನಾಮೆ ನೀಡುವುದಾಗಿ ತಮ್ಮಣ್ಣ ಹೇಳಿದ್ದಾರೆ.

ಸಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಬೇಕು:
"ಕೇವಲ ಜೆಡಿಎಸ್'ನ ಬೆರಳೆಣಿಕೆ ಶಾಸಕರು ರಾಜೀನಾಮೆ ಕೊಟ್ಟರೆ ಏನೂ ಪ್ರಯೋಜನವಿಲ್ಲ. ರಾಜ್ಯದ ಎಲ್ಲಾ 224 ಶಾಸಕರು, ಸಂಸದರು ಹಾಗೂ ವಿಧಾನಪರಿಷತ್ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಸಾಂವೈಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವಂತೆ ಮಾಡಬೇಕು. ಆ ಮೂಲಕ ಕೇಂದ್ರ ಸರಕಾರ ಹಾಗೂ ಸುಪ್ರೀಂಕೋರ್ಟ್'ನಿಂದ ನಮಗೆ ಆಗುತ್ತಿರುವ ಅನ್ಯಾಯವನ್ನು ಎತ್ತಿತೋರಿಸಿ ಮುಖ್ಯನ್ಯಾಯಮೂರ್ತಿಗಳ ಗಮನ ಸೆಳೆಯಲು ಸಾಧ್ಯ.." ಎಂದು ಈ ವೇಳೆ ಡಿ.ಸಿ.ತಮ್ಮಣ್ಣ ಅಭಿಪ್ರಾಯಪಟ್ಟಿದ್ದಾರೆ.

"ಭಾರತದಲ್ಲಿ ನ್ಯಾಯಾಲಯಗಳಿಂದ ನ್ಯಾಯ ಸಿಗುತ್ತದೆಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾವಿಸಲಾಗುತ್ತಿದೆ. ಆದರೆ, ಇಲ್ಲಿಯೂ ಇಂತಹ ಅನ್ಯಾಯಗಳು ನಡೆಯುತ್ತವೆ ಎಂಬುದನ್ನು ಎಲ್ಲರ ಗಮನಕ್ಕೆ ತರಲು ಸಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವುದು ಅಗತ್ಯ" ಎಂದು ತಮ್ಮಣ್ಣ ತಿಳಿಸಿದ್ದಾರೆ.

ಸಂದರ್ಶನ: ಕಿರಣ್ ಹನಿಯಡ್ಕ

Follow Us:
Download App:
  • android
  • ios