ಬೆಂಗಳೂರು (ಮಾ.28): ಬಯಲು ಸೀಮೆಯಲ್ಲಿ ಪಕ್ಷ ಸಂಘಟನೆಗೆ ಮುಂದಾಗಿರುವ ಕಾಂಗ್ರೆಸ್ ನಾಯಕರು, ಪ್ರಭಾವಿ ಮುಖಂಡರನ್ನ ಕಾಂಗ್ರೆಸ್​​ಗೆ ಸೆಳೆಯುವಲ್ಲಿ ಯಶಸ್ವಿಯಾಗ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಸಂಘಟನೆಗೆ ಪೂರಕವಾಗಿ ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗ್ತಿದ್ದು, ಜೆಡಿಎಸ್ ಜಿಲ್ಲಾಧ್ಯಕ್ಷರನ್ನೇ  ಕಾಂಗ್ರೆಸ್’ಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ.ನಾಗರಾಜ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಹೈನುಗಾರಿಕೆ ಕ್ಷೇತ್ರ ಮತ್ತು ಕ್ಷೀರೋದ್ಯಮದಲ್ಲಿ ಪ್ರಭಾವಿಯಾಗಿರುವ ಕೆ.ವಿ.ನಾಗರಾಜ್, ಜೆಡಿಎಸ್ ನಲ್ಲಿ ಸೂಕ್ತ ಸ್ಥಾನಮಾನ ಸಿಗದ ಕಾರಣಕ್ಕೆ ಕಾಂಗ್ರೆಸ್ ಸೇರ್ಪಡೆಯಾಗ್ತಿರೋದಾಗಿ ತಿಳಿಸಿದ್ದಾರೆ. 

ಕೆ.ವಿ.ನಾಗರಾಜ್ ಸೇರ್ಪಡೆಯಿಂದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಬಲ ಬಂದಂತಾಗಿದೆ. ಹಾಲಿ ಶಾಸಕರಾಗಿರುವ ಡಾ.ಕೆ.ಸುಧಾಕರ್ ಅವರಿಗೆ ಸಾಥ್ ನೀಡಲು ನಾಗರಾಜ್  ತೀರ್ಮಾನ ಮಾಡಿದ್ದಾರೆ. ಜೆಡಿಎಸ್ ಸಂಘಟನೆಯಲ್ಲಿ ಪ್ರಭಾವಿಯಾಗಿರುವ ನಾಗರಾಜ್ ಅವರ ಕಾಂಗ್ರೆಸ್ ಸೇರ್ಪಡೆ, ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಉತ್ತಮ ವಾತಾವರಣ ಸೃಷ್ಟಿಸಿದೆ.

ಜೆಡಿಎಸ್ ಜಿಲ್ಲಾಧ್ಯಕ್ಷರಾಗಿರುವ ಕೆ.ವಿ.ನಾಗರಾಜ್ ಅವರ ಸೇರ್ಪಡೆಯಿಂದ ಜೆಡಿಎಸ್ ಗೆ ದೊಡ್ಡ ಹೊಡೆತ ಕೊಟ್ಟಂತಾಗಿದೆ. ಕಳೆದ ಬಾರಿ ಟಿಕೇಟ್ ವಂಚಿತರಾಗಿದ್ದ ನಾಗರಾಜ್ ಅವರಿಗೆ ಸೂಕ್ತ ಸ್ಥಾನಮಾನ ಕೊಡದ ಕಾರಣಕ್ಕೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿದಾಗ, ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ ಕೆ.ವಿ.ನಾಗರಾಜ್ ಈಗ ಕಾಂಗ್ರೆಸ್ ಪಾಲಾಗಿದ್ದಾರೆ. ಇದು ಸಹಜವಾಗಿಯೇ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಉತ್ತಮ ಬೆಳವಣಿಗೆ ಎನ್ನಲಾಗಿದೆ.