ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಜೆಡಿಎಸ್ ಬಗ್ಗೆ ಲಘುವಾಗಿ ಹೇಳಿಕೆ ನೀಡುತ್ತಿರುವ ಶಾಸಕ ಜಮೀರ್ ಅಹ್ಮದ್ ಹಣಕ್ಕಾಗಿ ವೋಟು ಮಾರಿಕೊಂಡ ನೀಚ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಹರಿಹಾಯ್ದಿದ್ದಾರೆ.
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಜೆಡಿಎಸ್ ಬಗ್ಗೆ ಲಘುವಾಗಿ ಹೇಳಿಕೆ ನೀಡುತ್ತಿರುವ ಶಾಸಕ ಜಮೀರ್ ಅಹ್ಮದ್ ಹಣಕ್ಕಾಗಿ ವೋಟು ಮಾರಿಕೊಂಡ ನೀಚ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಹರಿಹಾಯ್ದಿದ್ದಾರೆ.
ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಸಾವಿನ ಬಳಿಕ ಜೆಡಿಎಸ್ ಇರುವುದಿಲ್ಲ ಹಾಗೂ ಅವರ ಪುತ್ರ ಎಚ್.ಡಿ.ರೇವಣ್ಣ ಅವರನ್ನು ನಾನೇ ಕರೆದುಕೊಂಡು ಹೋಗಿ ಕಾಂಗ್ರೆಸ್‌ಗೆ ಸೇರಿಸುತ್ತೇನೆ ಎಂಬ ಜಮೀರ್ ಹೇಳಿಕೆಯನ್ನು ಪ್ರಸ್ತಾಪಿಸಿ ಶರವಣ ತೀವ್ರವಾಗಿ ಖಂಡಿಸಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ವಿರುದ್ಧ ಬಂಡಾಯವೆದ್ದ ಕಾರಣ ಶಿಸ್ತು ಕ್ರಮ ಜರುಗಿಸಲಾಯಿತು. ಇದನ್ನು ಮನಸ್ಸಲ್ಲಿ ಇಟ್ಟುಕೊಂಡು ಪಕ್ಷದ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಪಕ್ಷದ ವರಿಷ್ಠರ ವಿರುದ್ಧ ಲಘುವಾಗಿ ಹಾದಿ-ಬೀದಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಜಮೀರ್ ಅಹ್ಮದ್ ಅವರು ತಕ್ಷಣ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಅವರ ವಿರುದ್ಧ ಜೆಡಿಎಸ್ ತೀವ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ಜೆಡಿಎಸ್ ಪಕ್ಷ ಕೆರೆಯ ನೀರಂತೆ ಇದ್ದರೂ ಅದು ಜೀವ ಜಲ. ಕಾಂಗ್ರೆಸ್ ಎಂಬ ಸಮುದ್ರಕ್ಕೆ ಹೊರಟಿರುವ ಜಮೀರ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅದೇ ಸಮುದ್ರದಲ್ಲಿ ಕೊಚ್ಚಿ ಹೋಗಲಿದ್ದಾರೆ. ದೇವೇಗೌಡರು ಆಲದ ಮರ ಇದ್ದಂತೆ. ಅವರು ಎಷ್ಟೋ ಜನರಿಗೆ ಆಶ್ರಯ ನೀಡಿ ನಾಯಕರನ್ನಾಗಿ ಬೆಳೆಸಿದ್ದಾರೆ. ಜಮೀರ್ ಅಹ್ಮದ್ ಅವರ ತಾಯಿ ಅವರು ದೇವೇಗೌಡರ ಅವರ ಕಾಲಿಗೆ ಬಿದ್ದು ಸೀಟ್ ಕೊಡುವಂತೆ ಕೇಳಿದ್ದರು. ಬಹುಶಃ ಅದನ್ನು ಮರೆತಿರುವಂತೆ ಕಾಣುತ್ತದೆ. ದುಡ್ಡಿಗಾಗಿ ವೋಟು ಮಾರಿಕೊಂಡ ನೀಚ ಎಂದು ಟೀಕಿಸಿದರು.
ಚಾಮರಾಜಪೇಟೆ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಮೀಟರ್ ಇದೆಯೇ ಎಂಬ ಸವಾಲನ್ನು ಜಮೀರ್ ಹಾಕಿದ್ದಾರೆ. ಜಮೀರ್ ಅವರನ್ನು ರಾಜ್ಯದಲ್ಲಿ ಗುರುತಿಸುವಂತೆ ಶಾಸಕರನ್ನಾಗಿ, ಸಚಿವರನ್ನಾಗಿ ಮಾಡಿದ್ದು ಯಾವ ಪಕ್ಷ ಎಂಬುದನ್ನು ಅರಿತುಕೊಳ್ಳಲಿ. 2002ರಲ್ಲಿ ಚಾಮರಾಜಪೇಟೆಯ ಕೊಳಚೆ ಪ್ರದೇಶಗಳನ್ನು ಸುತ್ತಿ ದೇವೇಗೌಡರು ಅವರನ್ನು ಗೆಲ್ಲಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಅವರನ್ನು ಸಚಿವರನ್ನಾಗಿ ಮಾಡಿದರು. ಈಗ ಜಮೀರ್ ಅಹ್ಮದ್ ಮೀಟರ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ಅಲ್ಪಸಂಖ್ಯಾತರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ನೀಡಲಾಗಿತ್ತು. ಮೆರಾಜುದ್ದೀನ್ ಪಟೇಲ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಜಮೀರ್ ಅವರನ್ನು ಸಹ ಸಚಿವರನ್ನಾಗಿ ಮಾಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಸಿ.ಎಂ. ಇಬ್ರಾಹಿಂ, ರೋಷನ್‌ಬೇಗ್ ಅವರಿಗೆ ಸಚಿವ ಸ್ಥಾನ ಮತ್ತು ಅಬ್ದುಲ್ ಅಜೀಂ ಅವರನ್ನು ವಿಧಾನಪರಿಷತ್ ಸದಸ್ಯ ಮಾಡಲಿಲ್ಲವೇ ಎಂದು ಕಿಡಿಕಾರಿದರು.
ಪಕ್ಷದ ಬೆಂಗಳೂರು ನಗರ ಘಟಕ ಅಧ್ಯಕ್ಷ ಆರ್. ಪ್ರಕಾಶ್ ಮಾತನಾಡಿ, ತಮ್ಮ ಧರ್ಮಗುರುಗಳನ್ನು ಮುಂದಿಟ್ಟುಕೊಂಡು ಮಾತನಾಡುವವರು ಹೇಡಿಗಳು. ಇಲ್ಲಿ ಮಾಡಿದ ತಪ್ಪಿಗೆ ಪವಿತ್ರ ಯಾತ್ರಾ ಸ್ಥಳ ಮೆಕ್ಕಾಗೆ ಹೋಗಿ ಕ್ಷಮೆ ಕೋರುತ್ತಾರೆ. ದುಬೈ ಶೇಖ್ ವೇಷದಲ್ಲಿ ಪರ್ಫ್ಯೂಮ್ ಹಿಡಿದುಕೊಂಡು ದೇವೇಗೌಡರ ಮನೆ ಬಾಗಿಲಿಗೆ ಬಂದು ತಮ್ಮನ್ನು ಪರಿಚಯ ಮಾಡಿಕೊಂಡಿದ್ದನ್ನು ಕಣ್ಣಾರೆ ಕಂಡಿದ್ದೇನೆ ಎಂದು ಲೇವಡಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಕಾರ್ಯಾಧ್ಯಕ್ಷ ಕೆ.ವಿ. ನಾರಾಯಣಸ್ವಾಮಿ ಇತರರು ಭಾಗವಹಿಸಿದ್ದರು.
