Asianet Suvarna News Asianet Suvarna News

ಮೋದಿಯನ್ನು ಹಾಡಿ ಹೊಗಳಿದ ಸಚಿವ ಜಿ. ಟಿ. ದೇವೇಗೌಡ!

ಮೋದಿ ದೇಶಪ್ರೇಮಿ ಆಗಿದ್ದರಿಂದ ಮತ್ತೆ ಪ್ರಧಾನಿ ಪಟ್ಟ: ಜಿಟಿಡಿ| ರಾಣಿ ಚೆನ್ನಮ್ಮ ವಿವಿ ಘಟಿಕೋತ್ಸವದಲ್ಲಿ ಮೋದಿ ಬಣ್ಣಿಸಿದ ಸಚಿವ| ಮೋದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಿಪಡಿಸಿದ್ದೇನೆ ಹೊರತು ಬಿಜೆಪಿ ಸೇರುವ ಉದ್ದೇಶವಿಲ್ಲ: ಸ್ಪಷ್ಟನೆ

JDS Leader Minister GT Devegowda Praises narendra Modi
Author
Bangalore, First Published May 30, 2019, 8:18 AM IST

ಬೆಳಗಾವಿ[ಮೇ.30]: ಲೋಕಸಭೆ ಚುನಾವಣೆಯ ಫಲಿತಾಂಶಕ್ಕೂ ಮುನ್ನ ಮೈಸೂರು ಕ್ಷೇತ್ರದಲ್ಲಿ ಜೆಡಿಎಸ್‌ ಕಾರ್ಯಕರ್ತರು ಬಿಜೆಪಿಗೆ ಮತಹಾಕಿದ್ದಾರೆ ಎಂದು ಹೇಳಿ ಮೈತ್ರಿ ಪಕ್ಷ ಕಾಂಗ್ರೆಸ್‌ ಅಸಮಾಧಾನಕ್ಕೆ ಕಾರಣವಾಗಿದ್ದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಕ್ತಕಂಠದಿಂದ ಹೊಗಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆರಂಭದಲ್ಲಿ ಜೆಡಿಎಸ್‌ನಲ್ಲಿದ್ದ ಜಿಟಿಡಿ ನಂತರ ಬಿಜೆಪಿಗೆ ಹೋಗಿ ಪುನಃ ಜೆಡಿಎಸ್‌ಗೆ ಬಂದು ಸಚಿವರಾಗಿದ್ದಾರೆ.

"

ಬೆಳಗಾವಿ ನಗರದ ವಿಟಿಯು ಸಭಾಂಗಣದಲ್ಲಿ ಬುಧವಾರ ನಡೆದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 7ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನಿಸ್ವಾರ್ಥ ಹಾಗೂ ದೇಶ ಪ್ರೇಮಿ ಆಗಿದ್ದರಿಂದ ಎರಡನೇ ಬಾರಿಗೆ ಪ್ರಧಾನಿಯಾಗುವ ಯೋಗ ಅವರನ್ನು ಹುಡುಕಿಕೊಂಡು ಬಂದಿದೆ. ಅವರಿಗೆ ದೇಶದ ಬಗ್ಗೆ ಸಾಕಷ್ಟುಗೌರವ, ಅಭಿಮಾನ ಇದೆ. ಯಾವಾಗಲೂ ದೇಶದ ಬಗ್ಗೆಯೇ ಚಿಂತಿಸುತ್ತಾರೆ. ನಿಸ್ವಾರ್ಥ ಭಾವದಿಂದ ದೇಶಸೇವೆ ಮಾಡುತ್ತಿದ್ದಾರೆ. ಅವರಿಗೆ ನಾನು ಕೂಡ ಒಬ್ಬ ಸಂಸದ ಎನ್ನುವಷ್ಟರ ಮಟ್ಟಿಗೆ ಸರಳತೆ ಇದೆ. ದೇಶಕ್ಕಾಗಿ ನನ್ನ ಜೀವನ ಎಂಬ ಅವರ ಹೇಳಿಕೆ ನನಗೆ ಇಷ್ಟವಾಗಿದೆ ಎಂದು ಬಣ್ಣಿಸಿದರು.

ಮೋದಿ ಮೈತ್ರಿ ಉರುಳಿಸುವುದಿಲ್ಲ:

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಿಟಿಡಿ, ಮೈತ್ರಿ ಸರ್ಕಾರವನ್ನು ಅತಂತ್ರಗೊಳಿಸುವ ಉದ್ದೇಶ ಪ್ರಧಾನಿ ಮೋದಿ ಅವರಿಗಿಲ್ಲ. ಲೋಕಸಭೆ ಚುನಾವಣೆ ನಂತರ ತಮ್ಮ ಭಾಷಣದಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡೋಣ ಎಂದು ಮೋದಿ ಹೇಳಿದ್ದಾರೆ ಎಂದರು. ಇದೇ ವೇಳೆ ಮೋದಿ ಕೊಂಡಾಡಿರುವುದರ ಹಿಂದೆ ಬಿಜೆಪಿ ಸೇರುವ ಸಿದ್ಧತೆ ನಡೆದಿದೆಯಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ಮೋದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದೇನೆ ಹೊರತು, ಬಿಜೆಪಿ ಸೇರುವ ಉದ್ದೇಶದಿಂದ ಹೇಳಿಲ್ಲ ಎಂದರು.

ರಾಜೀನಾಮೆಗೂ ಸಿದ್ಧ:

ರಾಜ್ಯದ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಸ್ತಿರವಾಗುವುದಿಲ್ಲ. ಅಗತ್ಯವೆನಿಸಿದರೆ ಸರ್ಕಾರ ಉಳಿವಿಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ತಿಳಿಸಿದರು. ಮೈತ್ರಿ ಪಕ್ಷಗಳ ನಾಯಕರಾದ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಚುನಾವಣೆಗೂ ಮೊದಲೇ ಒಂದಾಗಿರಬೇಕಿತ್ತು ಎಂದರು.

Follow Us:
Download App:
  • android
  • ios