ಬೆಂಗಳೂರು [ಆ.13]:  ನೆರೆ ಹಾವಳಿಯಿಂದಾಗಿ ತತ್ತರಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಕೃತಿ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ ತುರ್ತಾಗಿ ಮಧ್ಯಂತರ ಪರಿಹಾರವಾಗಿ ಐದು ಸಾವಿರ ಕೋಟಿ ರು. ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ಹಿಂದೆಂದೂ ಕಂಡರಿಯದಂತಹ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜನ-ಜಾನುವಾರು ಸಂಕಷ್ಟಕ್ಕೊಳಗಾಗಿವೆ. ರಾಜ್ಯದ ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗಗಳು ಪ್ರವಾಹದಿಂದಾಗಿ ಜಲಾವೃತಗೊಂಡಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಪ್ರವಾಹದಿಂದಾಗಿ ರಾಜ್ಯದಲ್ಲಿ 42 ಮಂದಿ ಸಾವನ್ನಪ್ಪಿದ್ದಾರೆ. 50 ಮಂದಿ ಕಾಣೆಯಾಗಿದ್ದಾರೆ. 17 ಜಿಲ್ಲೆಗಳ 80 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, 3.15 ಲಕ್ಷ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ ಮಧ್ಯಂತರ ಪರಿಹಾರವಾಗಿ 5 ಸಾವಿರ ಕೋಟಿ ರು. ಬಿಡುಗಡೆ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಕುರಿತು ಅಧ್ಯಯನ ನಡೆಸಲು ಉನ್ನತ ಮಟ್ಟದ ಕೇಂದ್ರ ತಂಡವನ್ನು ಕಳುಹಿಸಬೇಕು. ಕಳೆದ ಆರು ದಶಕಗಳ ರಾಜಕೀಯ ಜೀವನದಲ್ಲಿ ಇಂತಹ ಪರಿಸ್ಥಿತಿಯನ್ನು ಎಂದಿಗೂ ಕಂಡಿರಲಿಲ್ಲ. 1702 ಹಳ್ಳಿಗಳು ಹಾನಿಗೀಡಾಗಿದ್ದು, ಸುಮಾರು 2,18,494 ಮನೆಗಳು ಮುಳುಗಡೆಯಾಗಿವೆ. 4.15 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ರಾಜ್ಯದ ಪ್ರಮುಖ 10 ನದಿಗಳು ತುಂಬಿ ಹರಿಯುತ್ತಿವೆ. ಆಲಮಟ್ಟಿ, ನಾರಾಯಣಪುರ, ತುಂಗಾಭದ್ರಾ, ಮಲಪ್ರಭ ಸೇರಿದಂತೆ 15 ಪ್ರಮುಖ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿರುವ ಪರಿಣಾಮ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳು ನೀರುಪಾಲಾಗಿವೆ. ಹಾನಿ ಪ್ರಮಾಣವು ಲೆಕ್ಕಕ್ಕೆ ಸಿಗದಷ್ಟಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಹಾಗೂ ಪ್ರಮುಖ ಜಿಲ್ಲಾ ರಸ್ತೆಗಳು ಸಾವಿರಾರು ಕಿ.ಮೀ.ನಷ್ಟುಹಾನಿಗೊಳಗಾಗಿವೆ ಎಂಬುದನ್ನು ಪ್ರಧಾನಿಗಳ ಗಮನಕ್ಕೆ ತರಲಾಗಿದೆ.

ರಾಜ್ಯ ಸರ್ಕಾರದ ಬಗ್ಗೆ JDS ನಾಯಕ ದೇವೇಗೌಡರ ಶ್ಲಾಘನೆ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರವು ಪ್ರವಾಹ ಪೀಡಿತರ ರಕ್ಷಣೆಗೆ ಕ್ರಮ ಕೈಗೊಂಡಿದೆ. ಅನುದಾನ ಕೋರಿ ಪತ್ರವನ್ನು ಸಹ ಬರೆದಿದ್ದಾರೆ. ಸುಮಾರು 10 ಸಾವಿರ ಕೊಟಿ ರು.ನಷ್ಟುಮೌಲ್ಯದ ಆಸ್ತಿ-ಪಾಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ರಾಜ್ಯವು ಏಕಕಾಲಕ್ಕೆ ಅನಾವೃಷ್ಟಿಮತ್ತು ಅತಿವೃಷ್ಟಿಯಿಂದ ಬಳಲುವಂತಾಗಿದೆ. ಜೂನ್‌ ಮತ್ತು ಜುಲೈ ತಿಂಗಳಲ್ಲಿ ರಾಜ್ಯದ 170 ತಾಲೂಕುಗಳ ಪೈಕಿ 100 ತಾಲೂಕುಗಳು ಬರದಿಂದ ತತ್ತರಿಸಿದವು. ಕೊಡಗು ಮತ್ತು ಮಲೆನಾಡು ಭಾಗದಲ್ಲಿ ಕಳೆದ ವರ್ಷ ಉಂಟಾಗಿದ್ದ ಪ್ರವಾಹಕ್ಕೆ ಎನ್‌ಡಿಆರ್‌ಎಫ್‌/ ಎಸ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ 2,434 ಕೋಟಿ ರು. ಪರಿಹಾರ ನೀಡುವಂತೆ ಮನವಿ ಮಾಡಿದ್ದರು ಎಂಬುದನ್ನು ಪ್ರಸ್ತಾಪಿಸಿದ್ದಾರೆ.