Asianet Suvarna News Asianet Suvarna News

ಬಿಜೆಪಿಯತ್ತ ವಿಶ್ವನಾಥ್?: ಕುತೂಹಲ ಕೆರಳಿಸಿದೆ ಜೆಡಿಎಸ್‌ ರಾಜ್ಯಾಧ್ಯಕ್ಷರ ನಡೆ!

ಬಿಜೆಪಿ ಕಡೆ ವಾಲುತ್ತಿದ್ದಾರಾ ವಿಶ್ವನಾಥ್‌?| ಕುತೂಹಲ ಕೆರಳಿಸಿರುವ ಜೆಡಿಎಸ್‌ ಮಾಜಿ ರಾಜ್ಯಾಧ್ಯಕ್ಷರ ನಡೆ

JDS leader H Vishwanath May Join BJP
Author
Bangalore, First Published Jul 4, 2019, 8:58 AM IST

ಬೆಂಗಳೂರು[ಜು.04]: ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಆ ಪಕ್ಷದ ಹಾಲಿ ಶಾಸಕ ಹಾಗೂ ಮಾಜಿ ಸಚಿವ ಎಚ್‌.ವಿಶ್ವನಾಥ್‌ ಅವರ ಇತ್ತೀಚಿನ ರಾಜಕೀಯ ನಡೆ ಕುತೂಹಲ ಮೂಡಿಸಿದೆ.

ಅವರ ಇತ್ತೀಚಿನ ನಡೆ ಮತ್ತು ನುಡಿಯನ್ನು ಗಮನಿಸಿದರೆ ಹಂತ ಹಂತವಾಗಿ ಪಕ್ಷದಿಂದ ದೂರ ಸಾಗಿ ಬಿಜೆಪಿಯ ಸಮೀಪ ಹೋಗುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ವಲಸೆ ಹೋಗುವರೇ ಎಂಬುದನ್ನು ಕಾದು ನೋಡಬೇಕು.

ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯ ಹೊಂದಿದ್ದರೂ ರಾಜಕೀಯ ಅನಿವಾರ್ಯತೆಯಿಂದ ಬಿಜೆಪಿಗೆ ವಲಸೆ ಬಂದರೂ ಅಚ್ಚರಿಯಿಲ್ಲ ಎಂಬ ಮಾತು ಬಿಜೆಪಿಯಿಂದ ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಅವರ ಆಪ್ತರು ಇದನ್ನು ನಯವಾಗಿಯೇ ನಿರಾಕರಿಸುತ್ತಿದ್ದಾರೆ. ಬಿಜೆಪಿ ನಾಯಕರ ಬಗ್ಗೆ ಒಲವು ಇರಬಹುದಾದರೂ ಶಾಸಕ ಸ್ಥಾನವನ್ನೇ ತೊರೆದು ಬಿಜೆಪಿಗೆ ವಲಸೆ ಹೋಗುವ ಸಾಧ್ಯತೆ ತೀರಾ ಕಡಮೆ ಎನ್ನುತ್ತಿದ್ದಾರೆ.

ತಮ್ಮ ಹಿತೈಷಿಗಳು ಹಾಗೂ ಪರಮಾಪ್ತರ ಬಳಿ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಿ ಅಭಿಪ್ರಾಯ ಕ್ರೋಢೀಕರಿಸುತ್ತಿದ್ದಾರೆ. ಆದರೆ, ಮುಂದೇನು ಎಂಬುದರ ಗುಟ್ಟು ಮಾತ್ರ ಬಿಟ್ಟು ಕೊಡುತ್ತಿಲ್ಲ. ಮೊದಲಿನಿಂದಲೂ ದೇವರು, ದೈವದ ಬಗ್ಗೆ ಅಷ್ಟೇನೂ ವಿಶೇಷ ಆಸಕ್ತಿ ಹೊಂದಿಲ್ಲದ ವಿಶ್ವನಾಥ್‌ ಅವರು ಎರಡು ದಿನಗಳ ಹಿಂದೆ ದಿಢೀರನೆ ಕೋಲ್ಕತ್ತಾಗೆ ತೆರಳಿ ಕಾಳಿಕಾಂಬ ದೇವಿ ದರ್ಶನ ಪಡೆದಿರುವುದು ಮತ್ತು ಅಲ್ಲಿಂದ ದೆಹಲಿಗೆ ತೆರಳಿ ಬಿಜೆಪಿ ನಾಯಕರನ್ನು ಭೇಟಿ ಮಾಡುತ್ತಿರುವುದು ಸಹಜವಾಗಿಯೇ ಅವರ ಆಪ್ತರಲ್ಲಿ ಅಚ್ಚರಿ ಉಂಟು ಮಾಡಿದೆ.

ಈ ನಡುವೆ ಬಿಜೆಪಿ ಪರ್ಯಾಯ ಸರ್ಕಾರ ರಚನೆಗೆ ಗಂಭೀರವಾಗಿ ಪ್ರಯತ್ನ ನಡೆಸಿದಲ್ಲಿ ಆಗ ವಿಶ್ವನಾಥ್‌ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಪುತ್ರನನ್ನು ಕಣಕ್ಕಿಳಿಸುವ ಲೆಕ್ಕಾಚಾರ ಇದೆ ಎಂಬ ಮಾತೂ ಕೇಳಿಬರುತ್ತಿದೆ. ಆರೋಗ್ಯ ಮೊದಲಿನಷ್ಟುಗಟ್ಟಿಯಾಗಿ ಇಲ್ಲದಿರುವುದರಿಂದ ಪುತ್ರನನ್ನು ಸಕ್ರಿಯ ರಾಜಕಾರಣಕ್ಕೆ ತರಲು ಇದು ಸೂಕ್ತ ಸಮಯವಾಗಬಲ್ಲುದೇ ಎಂಬ ಚಿಂತನೆಯನ್ನು ವಿಶ್ವನಾಥ್‌ ನಡೆಸುತ್ತಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios