ಬೆಂಗಳೂರು :  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ಸಿಡಿಸಿದ ಋುಣಮುಕ್ತ ಸುಗ್ರೀವಾಜ್ಞೆ ಅಸ್ತ್ರ ರಾಜ್ಯದ ರಾಜಕೀಯ ರಂಗದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇದು ಸರ್ಕಾರವನ್ನು ಅಸ್ಥಿರಗೊಳಿಸುವ ವಿರೋಧಿಗಳ ಪ್ರಯತ್ನದ ವಿರುದ್ಧ ಹೂಡಿರುವ ಬ್ರಹ್ಮಾಸ್ತ್ರ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಒಂದೆಡೆ ಬಿಜೆಪಿಯ ಬಿ.ಎಸ್‌. ಯಡಿಯೂರಪ್ಪ ಅವರು ಆಗಾಗ ಸರ್ಕಾರದ ಅಸ್ತಿತ್ವ ಬಹಳ ದಿನ ಇರುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳುತ್ತ, ತೆರೆಮರೆಯಲ್ಲಿ ಕಾಂಗ್ರೆಸ್‌ನ ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸಂದೇಶ ನೀಡುತ್ತಿದ್ದಾರೆ. ಮತ್ತೊಂದೆಡೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಸರ್ಕಾರದ ಅಸ್ತಿತ್ವದ ಬಗ್ಗೆ ಅನುಮಾನ ಬರುವಂತಹ ಮಾತುಗಳನ್ನು ಆಗಾಗ ಹೇಳುವ ಮೂಲಕ ಸಮ್ಮಿಶ್ರ ಸರ್ಕಾರ ಅಲ್ಪಾಯು ಎಂಬ ಸಂದೇಶ ರವಾನಿಸುತ್ತಿದ್ದಾರೆ.

ಇಂತಹ ಹಂತದಲ್ಲಿ ಕುಮಾರಸ್ವಾಮಿ ಈ ಸುಗ್ರೀವಾಜ್ಞೆಯ ನಿರ್ಧಾರ ಕೈಗೊಂಡಿದ್ದಾರೆ. ಈ ಸುಗ್ರೀವಾಜ್ಞೆ ಜಾರಿಗೆ ಬರಬೇಕು ಎಂದರೆ ರಾಷ್ಟ್ರಪತಿಗಳ ಅಂಕಿತ ದೊರೆಯಬೇಕು. ರಾಷ್ಟ್ರಪತಿಗಳ ಅಂಕಿತ ದೊರೆಯುತ್ತದೆಯೋ ಅಥವಾ ಇಲ್ಲವೋ, ಈ ಸುಗ್ರೀವಾಜ್ಞೆ ಸಮರ್ಪಕವಾಗಿ ಜಾರಿಗೊಳ್ಳುವುದೋ ಅಥವಾ ಇಲ್ಲವೋ ಎಂಬುದೆಲ್ಲ ನಂತರದ ವಿಚಾರ. ಈ ತಕ್ಷಣದ ಸಂಗತಿಯೆಂದರೆ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಹಾಗೂ ಅಂತಹ ಹೇಳಿಕೆ ನೀಡುತ್ತಿರುವ ನಾಯಕರ ಬಾಯಿಗೆ ಕೆಲ ಕಾಲವಾದರೂ ಬೀಗ ಹಾಕುವ ದಿಸೆಯಲ್ಲಿ ಕುಮಾರಸ್ವಾಮಿ ಅವರ ಈ ನಿರ್ಧಾರ ಮಹತ್ವ ಪಡೆದುಕೊಂಡಿದೆ.

ಏಕೆಂದರೆ, ಸರ್ಕಾರದ ಸ್ಥಿರತೆ ಬಗೆ ಅನುಮಾನ ಹುಟ್ಟುವಂತಹ ಹೇಳಿಕೆಗಳನ್ನು ಇನ್ನು ಮುಂದೆ ನೀಡುವುದು ರಾಜಕೀಯ ಸ್ಪರ್ಧಿಗಳಿಗೆ ಕಷ್ಟವಾಗಬಹುದು. ಬಡ ಸಾಲಗಾರರನ್ನು ಖಾಸಗಿ ಲೇವಾದೇವಿದಾರರ ಕಪಿಮುಷ್ಟಿಯಿಂದ ರಕ್ಷಿಸುವ ಋುಣಮುಕ್ತ ಸುಗ್ರೀವಾಜ್ಞೆ ಹೊರಡಿಸುವ ತೀರ್ಮಾನದಿಂದ ಸಹಜವಾಗಿಯೇ ಸರ್ಕಾರಕ್ಕೆ ಜನಮನ್ನಣೆ ತುಸು ಹೆಚ್ಚಾಗುತ್ತದೆ. ಮೊದಲು ಸಹಕಾರಿ ಸಂಸ್ಥೆಗಳ ಸಾಲಮನ್ನಾ, ನಂತರ ರಾಷ್ಟ್ರೀಯ ಬ್ಯಾಂಕ್‌ಗಳ ಸಾಲಮನ್ನಾ ಮತ್ತು ಇದೀಗ ಋುಣಮುಕ್ತ ಸುಗ್ರೀವಾಜ್ಞೆ ಮೂಲಕ ಜೆಡಿಎಸ್‌ ಚುನಾವಣೆ ವೇಳೆ ನೀಡಿದ್ದ ಪ್ರಮುಖ ಭರವಸೆಗಳನ್ನು ಈಡೇರಿಸಿದಂತಾಗಿದೆ. ಇಂತಹ ಸರ್ಕಾರವನ್ನು ಬೀಳಿಸುವ ಹೇಳಿಕೆಯನ್ನು ನಾಯಕರು ನೀಡಿದರೆ ಅದು ಅವರಿಗೆ ತಿರುಗುಬಾಣ ಆಗುವ ಸಾಧ್ಯತೆಯೂ ಇರುತ್ತದೆ.

ಇನ್ನು ಬಡವರ ಖಾಸಗಿ ಸಾಲ ಮನ್ನಾ ಮಾಡುವಂತಹ ಪ್ರಯತ್ನವನ್ನು ಈ ಹಿಂದೆ ದೇವರಾಜ ಅರಸು ಅವರು ಮಾಡಿದ್ದರು. ಇದೀಗ ನಾನು ಮಾಡಿದ್ದೇನೆ ಎನ್ನುವ ಮೂಲಕ ಕುಮಾರಸ್ವಾಮಿ ಅವರು ನೇರವಾಗಿ ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರಿಗೆ ಸ್ಪಷ್ಟಟಾಂಗ್‌ ಕೂಡ ನೀಡಿದ್ದಾರೆ. ಸದ್ಯಕ್ಕೆ ಅಲ್ಲದಿದ್ದರೂ ನಿಕಟ ಭವಿಷ್ಯದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಕಂಟಕವಾಗುವ ಸಾಮರ್ಥ್ಯವಿರುವುದು ಸಿದ್ದರಾಮಯ್ಯ ಅವರಿಗೆ. ಇಂತಹ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ದೇವರಾಜ ಅರಸು ಅವರಂತೆ ಆಡಳಿತ ನಡೆಸುವ ಪ್ರಯತ್ನ ನಡೆಸುತ್ತಿರುವುದಾಗಿ ಆಗಾಗ ಬಿಂಬಿಸಿಕೊಳ್ಳುತ್ತಿದ್ದರು. ಈಗ ಕುಮಾರಸ್ವಾಮಿ ಕೂಡ ಅರಸು ಆಡಳಿತಕ್ಕೆ ತಮ್ಮನ್ನು ಹೋಲಿಕೆ ಮಾಡಿಕೊಂಡಿರುವುದು ನೇರವಾಗಿ ಸಿದ್ದರಾಮಯ್ಯ ಅವರ ಕಾಲೆಳೆಯುವ ತಂತ್ರವೆಂದೇ ರಾಜಕೀಯವಾಗಿ ಪರಿಗಣಿಸಲಾಗುತ್ತಿದೆ. ಒಟ್ಟಾರೆ, ಸರ್ಕಾರ ಅಸ್ಥಿರಗೊಳ್ಳುವ ಮಾತುಗಳು ಕೇಳಿಬರುತ್ತಿರುವ ಈ ಹಂತದಲ್ಲಿ ಕುಮಾರಸ್ವಾಮಿ ಋುಣಮುಕ್ತ ಸುಗ್ರೀವಾಜ್ಞೆ ಹೊರಡಿಸುತ್ತಿರುವುದು ರಾಜಕೀಯ ಮಾಸ್ಟರ್‌ಸ್ಟೋಕ್‌ ಎಂದೇ ಪರಿಗಣಿತವಾಗುತ್ತಿದೆ.