ತುಮಕೂರು[ಆ.26]: ತುರುವೇಕೆರೆ ತಾಲೂಕಿನ ಡಿಎಸ್‌ ಪಾಳ್ಯದಲ್ಲಿರುವ ಹೇಮಾವತಿ ನಾಲಾಗೇಟ್‌ ತೆರೆದು ಮಾಜಿ ಶಾಸಕ, ಜೆಡಿಎಸ್‌ ಮುಖಂಡ ಎಂ.ಟಿ.ಕೃಷ್ಣಪ್ಪ ಕೆರೆಗೆ ನೀರು ಹರಿಸಿಕೊಂಡಿರುವ ಘಟನೆ ಭಾನುವಾರ ನಡೆದಿದೆ.

ಸ್ಥಳದಲ್ಲಿದ್ದ ಪೊಲೀಸರು ಮತ್ತು ಹೇಮಾವತಿ ನಾಲಾ ಎಂಜಿನಿಯರ್‌ಗಳು ಪರಿಸ್ಥಿತಿ ನಿಭಾಯಿಸಲಾಗದೆ, ಕೈಚೆಲ್ಲಿ ನಿಂತಿದ್ದ ದೃಶ್ಯ ಈ ಸಂದರ್ಭದಲ್ಲಿ ಕಂಡು ಬಂದಿತು. ಒಂದು ಅಡಿ ಮೇಲಕ್ಕೆ ಗೇಟ್‌ ಎತ್ತಿ ಕೆರೆಗೆ ನೀರು ಹರಿಸಲಾಗಿದ್ದು, ಇದೇ ವೇಳೆ ಪೊಲೀಸ್‌ ಅಧಿಕಾರಿಗಳು ಮತ್ತು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನಡುವೆ ಮಾತಿನ ಚಕಮಕಿ ನಡೆದಿದೆ.

ನಾವು ಚಾನೆಲ… ಗೇಟ್‌ ತೆಗೆದುಕೊಂಡು ಕೆರೆಗೆ ನೀರು ಬಿಡಿಸಿಕೊಂಡಿದ್ದೇವೆ. ನಾವೇನು ಸುಳ್ಳು ಹೇಳುತ್ತಿಲ್ಲ. ನಾಲೆಗೆ ಡ್ಯಾಮೇಜ್‌ ಮಾಡಿದ್ದೇವೆ ಎಂದಾದರೆ ನನ್ನ ಮೇಲೆ ಕೇಸು ಹಾಕಿಕೊಳ್ಳಿ. ನಮಗೆ ನೀರು ಬೇಕು ಅಷ್ಟೇ ಎಂದು ಕೃಷ್ಣಪ್ಪ ಅಧಿಕಾರಿಗಳ ವಿರುದ್ಧ ಗುಡುಗಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪೊಲೀಸ್‌ ಅಧಿಕಾರಿ ಅವೆಲ್ಲಾ ನಮಗೆ ಹೇಳಬೇಡಿ. ನಾವು ರಕ್ಷಣೆ ನೀಡಲು ಬಂದಿದ್ದೇವೆ ಎಂದಾಗ, ಕೆರಳಿದ ಮಾಜಿ ಶಾಸಕ ಕೃಷ್ಣಪ್ಪ , ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡು ಎಂದು ಅಧಿಕಾರಿಗೆ ಎಚ್ಚರಿಕೆ ನೀಡಿದ ಪ್ರಸಂಗವೂ ನಡೆದಿದೆ.

ಸ್ಥಳದಲ್ಲಿದ್ದ ಹೇಮಾವತಿ ನಾಲಾ ಎಇಇ ವಿಜಯಲಕ್ಷ್ಮಿ ಮಾತನಾಡಿ, ನೀರು ಹಂಚಿಕೆ ಕುಣಿಗಲ…ಗೆ ಮಾತ್ರವಿದೆ. ಮುಂದೆ ತುರುವೇಕೆರೆ ಭಾಗಕ್ಕೆ ನೀರು ಹರಿಸಲಾಗುವುದು. ಮತ್ತೊಂದು ಸಭೆಯ ನಂತರ ನೀರು ಬಿಡಲಾಗುವುದು ಎಂದು ಎಂ.ಟಿ.ಕೃಷ್ಣಪ್ಪಗೆ ಮನವರಿಕೆ ಮಾಡಲು ಮುಂದಾದರು.

ಈ ಉತ್ತರದಿಂದ ಕೆರಳಿದ ಕೃಷ್ಣಪ್ಪ, ಹೇಮಾವತಿ ನೀರು ಹರಿಸುವ ಕುರಿತಂತೆ ಜಿಲ್ಲಾಧಿಕಾರಿಗೆ ಯಾವುದೇ ಸಂಬಂಧವೇ ಇಲ್ಲ. ಹೇಮಾವತಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌ಗೆ ಮಾತ್ರ ಅಧಿಕಾರವಿದೆ. ಈ ವಿಷಯ ನಿನಗೆ ಗೊತ್ತೇ ಇಲ್ಲ. ನಾನು 15 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ ಎಂದು ಎಂಜಿನಿಯರ್‌ಗೆ ಲೇವಡಿ ಮಾಡಿದರು ಎನ್ನಲಾಗಿದೆ.