ರಾಜ್ಯ ಗಡಿ ವಿಚಾರದಲ್ಲಿ ಸದಾ ಕನ್ನಡಿಗರನ್ನು ಕೆರಳಿಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಜೊತೆ ಶರದ್‌ ಪವಾರ್‌ ನೇತೃತ್ವದ ನ್ಯಾಷನಲ್‌ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ರಹಸ್ಯ ಹೊಂದಾಣಿಕೆ ಮುಂದಾಗಿದ್ದರಿಂದ ಜೆಡಿಎಸ್‌ ಆ ಪಕ್ಷದೊಂದಿಗಿನ ಮೈತ್ರಿಯಿಂದ ಹಿಂದೆ ಸರಿಯಿತು ಎಂಬ ಸಂಗತಿ ತಿಳಿದು ಬಂದಿದೆ.

ಬೆಂಗಳೂರು : ರಾಜ್ಯ ಗಡಿ ವಿಚಾರದಲ್ಲಿ ಸದಾ ಕನ್ನಡಿಗರನ್ನು ಕೆರಳಿಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಜೊತೆ ಶರದ್‌ ಪವಾರ್‌ ನೇತೃತ್ವದ ನ್ಯಾಷನಲ್‌ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ರಹಸ್ಯ ಹೊಂದಾಣಿಕೆ ಮುಂದಾಗಿದ್ದರಿಂದ ಜೆಡಿಎಸ್‌ ಆ ಪಕ್ಷದೊಂದಿಗಿನ ಮೈತ್ರಿಯಿಂದ ಹಿಂದೆ ಸರಿಯಿತು ಎಂಬ ಸಂಗತಿ ತಿಳಿದು ಬಂದಿದೆ.

ಕಳೆದ 10 ವರ್ಷಗಳಿಂದ ಅಧಿಕಾರದಿಂದ ದೂರ ಉಳಿದಿದ್ದ ಜೆಡಿಎಸ್‌ ಪಕ್ಷವನ್ನು ಆಡಳಿತ ಚುಕ್ಕಾಣಿ ಹಿಡಿಯಲು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ತಮ್ಮ ರಾಜಕೀಯ ಅನುಭವವನ್ನು ಪಣಕ್ಕಿಟ್ಟು ಹಗಲಿರುಳು ತಂತ್ರಗಾರಿಕೆ ಹೆಣೆಯುವಲ್ಲಿ ನಿರತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪೆಟ್ಟು ಕೊಡಲು ಮಾಜಿ ಮುಖ್ಯಮಂತ್ರಿ ಮಾಯಾವತಿ ನೇತೃತ್ವದ ಬಿಎಸ್‌ಪಿ ಜತೆ ಕೈ ಜೋಡಿಸಿದರೆ, ಮುಂಬೈ-ಕರ್ನಾಟಕದ ಭಾಗದಲ್ಲಿ ಬಿಜೆಪಿಗೆ ಹಿನ್ನಡೆಯನ್ನುಂಟು ಮಾಡಲು ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಜತೆ ಮೈತ್ರಿಗೆ ಮಾತುಕತೆ ನಡೆಸಿದರು.

ಜೆಡಿಎಸ್‌ ಕಾರ್ಯಾಧ್ಯಕ್ಷ ಪಿ.ಜಿ.ಆರ್‌.ಸಿಂಧ್ಯಾ ಮುಂದಾಳತ್ವದಲ್ಲಿ ಶರದ್‌ ಪವಾರ್‌ ಜತೆ ಮೈತ್ರಿಯ ಮಾತುಕತೆ ನಡೆದಿತ್ತು. ಬೆಂಗಳೂರಿಗೆ ಆಗಮಿಸಿದ್ದ ಶರದ್‌ ಪವಾರ್‌ ಅವರನ್ನು ಖುದ್ದು ಸಿಂಧ್ಯ ಅವರೊಂದಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರೂ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು.

ಮುಂಬೈ-ಕರ್ನಾಟಕ ಭಾಗದಲ್ಲಿ 5ರಿಂದ 7 ಸ್ಥಾನಗಳನ್ನು ಬಿಟ್ಟುಕೊಟ್ಟು ಬೆಂಬಲ ಕೊಡಲು ಜೆಡಿಎಸ್‌ ತೀರ್ಮಾನ ಮಾಡಿತ್ತು. ಜೆಡಿಎಸ್‌ನ ಜತೆ ಮಾತುಕತೆ ನಡೆಸಿ ಕೆಲವೇ ದಿನದಲ್ಲಿ ಶರದ್‌ ಪವಾರ್‌ ಬೆಳಗಾವಿಗೆ ತೆರಳಿದ್ದ ವೇಳೆ ಎಂಇಎಸ್‌ ಜತೆ ರಹಸ್ಯ ಚರ್ಚೆ ನಡೆಸಿದ್ದರು. ಅಲ್ಲದೇ, ಕರ್ನಾಟಕ-ಮಹಾರಾಷ್ಟ್ರ ಗಡಿ ಪ್ರದೇಶಗಳ ಕುರಿತು ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ನಮ್ಮ ವಾದಕ್ಕೆ ಹೆಚ್ಚಿನ ಬಲ ಬರಬೇಕಾದರೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಂಇಎಸ್‌ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂಬ ಹೇಳಿಕೆ ನೀಡಿದ್ದರು. ಶರದ್‌ ಪವಾರ್‌ ಅವರ ಈ ಹೇಳಿಕೆಯು ರಾಜ್ಯದ ಅಸ್ಮಿತೆಯನ್ನು ಮುಂದಿಟ್ಟುಕೊಂಡು ಚುನಾವಣೆ ಅಖಾಡಕ್ಕಿಳಿದಿರುವ ಜೆಡಿಎಸ್‌ ತೀವ್ರ ಮುಜುಗರಕ್ಕೊಳಗಾಗಿ ಎಸ್‌ಸಿಪಿ ಜತೆಗಿನ ಮೈತ್ರಿಗೆ ಎಳ್ಳು-ನೀರು ಬಿಟ್ಟಿತು ಎಂದು ಮೂಲಗಳು ಹೇಳಿವೆ.

ಮಹಾರಾಷ್ಟ್ರದ ಗಡಿ ಭಾಗದ ಕೆಲವೆಡೆ ಎನ್‌ಸಿಪಿ ಪ್ರಭಾವ ಇರುವುದರಿಂದ ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರೆ ಚುನಾವಣೆಯಲ್ಲಿ ಲಾಭವಾಗಬಹುದು ಎಂಬ ನಿರೀಕ್ಷೆ ಜೆಡಿಎಸ್‌ ನಾಯಕರದ್ದಾಗಿತ್ತು. ಆದರೆ, ಶರದ್‌ಪವಾರ್‌ ಅವರು ಬೆಳಗಾವಿಗೆ ಹೋಗುತ್ತಿದ್ದಂತೆ ತಮ್ಮ ವರಸೆ ಬದಲಿಸಿದ್ದು ಜೆಡಿಎಸ್‌ಗೆ ಇರಿಸು ಮುರಿಸು ಉಂಟಾಯಿತು. ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ಎಂಇಎಸ್‌ ಜತೆ ಎನ್‌ಸಿಪಿ ರಹಸ್ಯ ಒಪ್ಪಂದ ಮಾಡಿಕೊಂಡ ಬಳಿಕವೂ ಮೈತ್ರಿ ಮುಂದುವರಿದರೆ ಕನ್ನಡ ವಿರೋಧಿ ಜತೆ ಗುರುತಿಸಿಕೊಂಡಂತಾಗುತ್ತದೆ. ಅಲ್ಲದೇ, ಕನ್ನಡಿಗರ ವಿರೋಧ ಎದುರಿಸಬೇಕಾಗುತ್ತದೆ ಎಂಬುದನ್ನು ಮನಗಂಡ ಜೆಡಿಎಸ್‌ ವರಿಷ್ಠರು ಎನ್‌ಸಿಪಿಯೊಂದಿಗಿನ ಮೈತ್ರಿಗೆ ತಿಲಾಂಜಲಿಗೆ ಇಟ್ಟರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಆದರೆ, ಎನ್‌ಸಿಪಿ ವಾದವೇ ಬೇರೆಯಾಗಿದೆ. ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಚುನಾವಣೆ ಬಳಿಕ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಅನುಮಾನ ಇರುವುದರಿಂದ ಚುನಾವಣಾ ಪೂರ್ವ ಹೊಂದಾಣಿಕೆಯಿಂದ ಹಿಂದೇಟು ಹಾಕಲಾಗಿದೆ ಎಂಬ ಮಾತುಗಳು ಆ ಪಕ್ಷದಿಂದ ಕೇಳಿಬಂದಿವೆ. ಆದರೆ, ಇದನ್ನು ಜೆಡಿಎಸ್‌ ಒಪ್ಪಲು ಸಿದ್ಧವಿಲ್ಲ. ಎನ್‌ಸಿಪಿಯ ಆರೋಪವನ್ನು ತಳ್ಳಿಹಾಕಿದ್ದು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಯಾವುದೇ ಆಲೋಚನೆ ಇಲ್ಲ ಎಂದು ಕೆಲ ಜೆಡಿಎಸ್‌ ನಾಯಕರ ಅಭಿಪ್ರಾಯವಾಗಿದೆ.