10 ರಿಂದ 50 ವರ್ಷದ ಮಹಿಳೆಯರಿಗೆ ಕೇರಳದ ಶಬರಿಮಲೆ ಮಂದಿರ ಪ್ರವೇಶ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿ ತೀರ್ಪು ನೀಡಿದೆ. ಈ ತೀರ್ಪಿಗೆ ಕಾರಣ ಕರ್ನಾಟಕ ಸಚಿವೆ ಜಯಮಾಲಾ.
ನವದೆಹಲಿ: ಕೇರಳದ ಪ್ರಸಿದ್ಧ ಶಬರಿಮಲೆಯ ಅಯ್ಯಪ್ಪ ದೇವಾಲಯದಲ್ಲಿ ಇಂದು 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಮುಕ್ತ ಪ್ರವೇಶ ಗಿಟ್ಟಿಸಲು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿರುವುದಕ್ಕೆ ಕಾರಣ ಕರ್ನಾಟಕದಲ್ಲಿ ಈಗ ಸಚಿವೆಯಾಗಿರುವ ನಟಿ ಜಯಮಾಲಾ ಅವರು!
ಹೌದು. ಇದು ನಿಜ. 2006ರ ಜೂನ್‌ನಲ್ಲಿ ಜಯಮಾಲಾ ಅವರು ತಾವು ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಿಸಿದ ವಿಷಯವನ್ನು ಬಹಿರಂಗಪಡಿಸಿದ ನಂತರ ಭಾರಿ ವಿವಾದ ಸೃಷ್ಟಿಯಾಗಿತ್ತು. ದೇವಾಲಯ ಶುದ್ಧೀಕರಣವನ್ನೂ ಪುರೋಹಿತರು ಕೈಗೊಂಡಿದ್ದರು.
ಈ ಘಟನೆಯೇ ಮಹಿಳಾ ಸಂಘಟನೆಗಳು ಹಾಗೂ ಮಹಿಳಾ ವಕೀಲರನ್ನು ಕ್ರುದ್ಧರನ್ನಾಗಿಸಿತು. ಈ ಮಹಿಳಾ ವಕೀಲರು ಅದೇ 2006ರಲ್ಲೇ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿ ಎಲ್ಲ ವಯೋಮಾನದ ಮಹಿಳೆಯರಿಗೆ ದೇಗುಲಕ್ಕೆ ಮುಕ್ತ ಪ್ರವೇಶ ಇರಬೇಕು ಎಂದು ಅರ್ಜಿ ಸಲ್ಲಿಸಿದರು.
ಅಂದು ಅರ್ಜಿ ಸಲ್ಲಿಸಿದವರಲ್ಲಿ ಯಂಗ್ ಇಂಡಿಯನ್ ಲಾಯರ್ಸ್ ಅಸೋಸಿಯೇಶನ್‌ನ ಪ್ರೇರಣಾ ಕುಮಾರಿ, ಭಕ್ತಿ ಪಸ್ರೀಜಾ ಸೇಠಿ ಸೇರಿದಂತೆ ಹಲವಾರು ಮಹಿಳಾ ವಕೀಲರಿದ್ದರು. ಇದಲ್ಲದೆ, ಈ ಅಸೋಸಿಯೇಶನ್‌ಗೆ ಮುಸ್ಲಿಂ ಮಹಿಳೆಯೊಬ್ಬರು ಅಧ್ಯಕ್ಷರಾಗಿದ್ದರು. ಇಂಥ ವಿವಿಧ ವರ್ಗಗಳನ್ನು ಒಳಗೊಂಡ ವಕೀಲರ ಸಂಘವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.
ಈ ಬಗ್ಗೆ ವೆಬ್‌ಸೈಟ್ ಒಂದಕ್ಕೆ ಸಂದರ್ಶನ ನೀಡಿ ತಮ್ಮ ಹಳೆಯ ನೆನಪು ಮೆಲುಕು ಹಾಖಿದ ಪ್ರೇರಣಾ ಕುಮಾರಿ ಹಾಗೂ ಭಕ್ತಿ ಸೇಠಿ ಅವರು, ‘2006ರಲ್ಲಿ ನಾವು ಪತ್ರಕರ್ತೆ ಬರ್ಖಾ ದತ್ ಅವರ ಲೇಖನವೊಂದನ್ನು ಓದಿದೆವು. ಅದರಲ್ಲಿ ಕನ್ನಡದ ನಟಿ ಜಯ ಮಾಲಾ ಅವರು (ಆಗ ಅವರು 10ರಿಂದ 50 ವರ್ಷ ವಯೋಮಾನದ ನಡುವಿನ ಮಹಿಳೆ) ಪ್ರವೇಶಿಸಿದ್ದಾಗಿ ಹೇಳಿಕೊಂಡ ಬಗ್ಗೆ ಹಾಗೂ ಪ್ರವೇಶದ ನಂತರ ದೇಗುಲವನ್ನು ಪೊರೋಹಿತರು ಶುದ್ಧೀಕರಣ ಮಾಡಿದ ಬಗ್ಗೆ ಬರೆಯಲಾಗಿತ್ತು. ಇದು ನಮಗೆ ನೋವು, ಬೇಸರ ತರಿಸಿತು. ಈ ವ್ಯವಸ್ಥೆಯ ವಿರುದ್ಧ ಸಿಡಿದೇಳಲು ನಿರ್ಧರಿಸಿದೆವು. ಹೀಗಾಗಿ ನಾವೆಲ್ಲ ಸೇರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆವು’ ಎಂದು ತಿಳಿಸಿದರು.
